ಭಾಗ 295
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೯೬ ಮಹಾಭಾರತ
ಕೃಷ್ಣನು ತನ್ನ ಸಂಧಾನ ಪ್ರಕ್ರಿಯೆಯ ವಿಚಾರ ಮಂಡನೆ ಮುಂದುವರಿಸುತ್ತಾ “ಮಹಾರಾಜಾ! ನೀನು ಸ್ವಯಂ ದಂಡಧರನಾಗಿರುವೆ. ಇಷ್ಟೆಲ್ಲಾ ಪಾತಕ ಸ್ವರೂಪದ ಮಹಾಪರಾಧಗೈದಿರುವ ನಿನ್ನ ಮಕ್ಕಳು ಶಿಕ್ಷಾರ್ಹರಾಗಿದ್ದಾರೆ. ನೀನೇ ಯೋಚಿಸು ಇಂತಹ ಪಾಪ ಕೃತ್ಯವೆಸಗಿರುವವರು ವಧಾರ್ಹರಾಗಿ ಕಾಣಿಸುವುದಿಲ್ಲವೇ? ಆದರೂ ಧರ್ಮರಾಜನು ಕುಟುಂಬವತ್ಸಲನೂ, ಗುರು ಹಿರಿಯರಲ್ಲಿ ಭಕ್ತಿಯುಳ್ಳವನಾಗಿದ್ದಾನೆ. ಆತನು ಶಾಂತಿ ಬಯಸಿ, ಮಹಾನಾಶವನ್ನು ತಪ್ಪಿಸುವುದಕ್ಕಾಗಿ ದ್ರುಪದ ಪುರೋಹಿತರಾದ ಶತಾನಂದರ ಮುಖೇನ ನ್ಯಾಯ ಮಾರ್ಗದಲ್ಲಿ ಕ್ರಮಿಸಿ, ದ್ಯೂತ ಪಣದ ಒಪ್ಪಂದದಂತೆ ದಾಯಭಾಗ ಒಪ್ಪಿಸಲು ವಿನಂತಿಸಿದ. ಆದರೆ ನೀನು ಹಾಗೆ ಮಾಡುವುದನ್ನು ಬಿಟ್ಟು ದೈವದತ್ತವಾಗಿ ಜನ್ಮದಿಂದಲೆ ಒದಗಿರುವ ಶಾರೀರಿಕ ಅಂಧತ್ವದ ಜೊತೆ ಪುತ್ರ ವ್ಯಾಮೋಹದ ಅಂಧತ್ವವನ್ನು ಮನಸ್ಸಿಗೆ ಆವರಿಸಿಕೊಂಡಿರುವವನಾಗಿ ಹೋಗಿರುವೆ. ಪಾಂಡವರು ಶಾಂತಿ ಮಾರ್ಗವನ್ನು ಅವರಾಗಿ ಕಂಡುಕೊಂಡು ಚಂದ್ರವಂಶದ ಶ್ರೇಯಸ್ಸಿಗೆ ಪೂರಕವಾಗುವ ನಿರ್ಣಯ ಕೈಗೊಳ್ಳಲು ಸಂಜಯನಲ್ಲಿ ಹೇಳಿಕಳುಹಿಸಿದೆ. ಅಂದರೆ ನಿನ್ನ ಅಪೇಕ್ಷೆ ಪಾಂಡವರು ಅವರದ್ದಾದುದನ್ನೂ ನಿನ್ನ ಮಕ್ಕಳಿಗೆ ಬಿಟ್ಟು ಕೊಟ್ಟು ಹೇಗಾದರೂ ಬದುಕಿಕೊಳ್ಳಿ ಎಂಬಂತ್ತಿತ್ತು ನಿನ್ನದ್ದಾದ ನಡೆಯ ರೀತಿಯಿಂದ ಮನುಷ್ಯರನಾದ ಯಾವನಾದರೂ, ಕ್ರೋಧ ಪರವಶನಾಗಿ ಇಷ್ಟು ಹೊತ್ತಿಗೆ ಯುದ್ದ ಆರಂಭಗೊಳಿಸಿರುತ್ತಿದ್ದರು. ಆದರೆ ಪಾಂಡವರು ಹಾಗೆ ಮಾಡಲಿಲ್ಲ, ಯುದ್ದ ಎಂಬ ಸ್ಥಿತಿ ಎದುರಾದರೆ ಜಯ ಪ್ರಾಪ್ತಿಗೆ ಬೇಕಾಗುವ ಸರ್ವ ಸಂಪಾದನೆಯನ್ನೂ ಮಾಡಿ ಕೊಂಡಿದ್ದಾರೆ. ಅಂತಹ ಮೇಲುಗೈಯ ಅವಕಾಶ ಸ್ಪಷ್ಟವಿದ್ದರೂ, ಪ್ರಯತ್ನಿಸಿಯೂ ಆಗದ ಈ ಸಮಯ ಇನ್ನೂ ಧರ್ಮದ ಪಥವೇಕೆ? ಎಂದು ಅಲಕ್ಷಿಸಿದ್ದರೆ ನಿನ್ನ ಮಕ್ಕಳು ಒಬ್ಬರೂ ಉಳಿಯದಂತೆ ಸವರಿ ಸಮಾಪ್ತಿಗೊಳಿಸುತ್ತಿದ್ದರು. ಅಷ್ಟು ಸರ್ವ ಬಲ ಸಾಮರ್ಥ್ಯ ಪಾಂಡವರಿಗೆ ಇದ್ದರೂ, ಈಗಲೂ ಅವರು ಬಯಸಿರುವುದು ಸಾಮ್ರಾಜ್ಯವಲ್ಲ, ಸಂಪದವಲ್ಲ ಬದಲಾಗಿ ಶಾಂತಿ ಮತ್ತು ವಿನಾಶವನ್ನು ತಡೆದು ಸಮಾಹಿತರಾಗಿರುವ ವೀರ ಕುಲಜರ ಪ್ರಾಣ ರಕ್ಷಣೆ. ನಿನ್ನ ಮಕ್ಕಳಾದ ಕೌರವರು ಈಗಲೂ ವಾಸ್ತವ ಸ್ಥಿತಿ ಮತ್ತು ಪರಿಣಾಮ ಅರಿತುಕೊಳ್ಳದೆ ಉಳಿದು, ದುಡುಕಿದರೆ ಏನಾದೀತು ಎಂಬ ಕನಿಷ್ಟ ಕಲ್ಪನೆಯೂ ಇರದ ತಿಳಿಗೇಡಿಗಳಾಗಿ ಇದ್ದಾರೆ. ಪಾಂಡವರು ಶಾಂತಿ ಸಂಧಾನಕ್ಕೆ ಮುಂದಾಗಿರುವುದು ನಿನ್ನ ಮಕ್ಕಳ ಅಪರಾಧಗಳು ಕ್ಷಮಾರ್ಹವೆಂದಲ್ಲ. ಹಾಗೆಂದು ಪಾಂಡುಪುತ್ರರು ಗೈದಿರುವ ಪ್ರತಿಜ್ಞೆಗಳು ಮರೆಯುವಂತಹುದೂ ಅಲ್ಲ. ಧರ್ಮಪಾಲಕರು ವಚನ ಭ್ರಷ್ಟರಾಗಲಾರರು. ಆದರೂ ಸ್ವಾರ್ಥಕ್ಕಾಗಿ ವಿನಾಶಹೇತು ಕೃತ್ಯವಾಗಕೂಡದು ಎಂದು ಸಾಮವನ್ನು ಬಯಸಿ ಬಂದಿದ್ದಾರೆ. ಪಾಂಡವರಿಗೆ ಯುದ್ದದ ಭಯವಾಗಲಿ, ಅಂಜಿಕೆಯ ಲವಲೇಶವಾಗಲಿ ಇಲ್ಲ. ಮಹಾಕ್ಷತ್ರಿಯ ಅರ್ಜುನ ಮತ್ತು ಮಹಾಬಲಿ ಭೀಮಸೇನರಿಗೆ ಅವರು ಕಲಿತ ಅದ್ಬುತ ವಿದ್ಯಾಪ್ರದರ್ಶನಕ್ಕೆ ಯುದ್ದವಾದರೆ ಪರೀಕ್ಷಾರಂಗವಾಗಿ ಅವಕಾಶವಾದೀತು ಹೊರತು, ರಣರಂಗವಾದರೆ ಆತಂಕ ಎದುರಾಗದು. ಅರ್ಜುನನೊಬ್ಬನು ಧನುರ್ಧಾರಿಯಾಗಿ ನಿಂತರೆ ಪ್ರಪಂಚವನ್ನು ಗೆಲ್ಲಬಲ್ಲ ವೀರಾಗ್ರಣಿಯಾಗಿದ್ದಾನೆ. ಸಾಕ್ಷಾತ್ ಪರಶಿವನಿಂದ ಪಾಶುಪತ, ಕೈಲಾಸದ ಶ್ರೇಷ್ಟಾಯುಧಗಳು, ಅಷ್ಟ ದಿಕ್ಪಾಲಕರ ದಿವ್ಯಾಸ್ತ್ರಗಳು, ಗುರುದ್ರೋಣ ಉಪದಿಷ್ಟ ಸಿದ್ದ್ಯಾಸ್ತ್ರಗಳು ಆತನಲ್ಲಿ ಸಂಚಯವಾಗಿವೆ. ಇಂತಹ ವಿಪುಲ ಶಸ್ತ್ರಾಸ್ತ್ರ ಸಂಪತ್ತಿನವರೆದುರು ಯುದ್ದ ಸಾರಲು ಹೊರಟ ನಿನ್ನ ಮಕ್ಕಳು ಯೋಚಿಸಬೇಕಿತ್ತು. ಪಾಂಡವರಿಂದ ನಮ್ಮ ಜೀವ ಕಾಯುವವರು ಯಾರು? ಎಂಬ ಸಂದೇಹ ಎದುರಾಗಬೇಕಿತ್ತು. ಆದರೆ ಪಾಂಡವರಿಗೆ ಸಂಧಾನ ಬಯಸುವ ಯಾವ ಅಗತ್ಯವೂ ಇಲ್ಲ. ಲೋಕ ರಕ್ಷಣೆ ಮತ್ತು ಶಾಂತಿಯನ್ನು ಬಯಸುವ ಯುಧಿಷ್ಟಿರನ ಯೋಗ್ಯತೆಯನ್ನು ಅರ್ಥೈಸಬೇಕಾವರು ನಿನ್ನ ಮಕ್ಕಳು. ಆಯುಷ್ಯಪೂರ್ತಿ ಬದುಕಿ ಬಾಳುವ ದಾರಿ ಕಂಡುಕೊಳ್ಳಬೇಕಾದ ಸಮಯ ಈಗ ಕೌರವರಿಗೆ ಬಂದೊದಗಿದೆ. ನಿನ್ನ ತೀರ್ಮಾನ ಇದನ್ನು ನಿರ್ಧರಿಸಬಲ್ಲುದು. ಈಗಲೂ ಧರ್ಮರಾಯ ಆತನ ದೊಡ್ಡಪ್ಪನಾದ ನಿನ್ನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾನೆ. ಅವನು ನನ್ನ ಮುಖೇನ ಸಂಧಾನ ಮಾಡಲು ಬರುವಾಗ ಹೇಳಿ ಕಳಿಸಿರುವುದೇನೆಂದರೆ ನಾವು ಏನನ್ನು ಮರೆತರೂ, ಸಂಪತ್ತು – ಸಾಮ್ರಾಜ್ಯ ಎಲ್ಲವನ್ನೂ ಬಿಟ್ಟು ಹೋಗಿದ್ದರೂ, ಧರ್ಮಮಾರ್ಗ ಒಂದನ್ನು ತೊರೆದವರಲ್ಲ. ಈಗಾಗಲೆ ಬಹಳಷ್ಟು ಕಷ್ಟ ಪಟ್ಟಿದ್ದೇವೆ. ನೋವನ್ನೂ ಸಹಿಸಿದ್ದೇವೆ. ಆದರೂ ದೊಡ್ಡಪ್ಪ ಪಿತೃ ಸಮಾನ ಸ್ಥಾನದಲ್ಲಿದ್ದಾರೆ. ಅದೇ ಸ್ಥಾನದಲ್ಲಿದ್ದು ಯೋಗ್ಯತೆಯನ್ನು ಬಳಸಿ ನಮಗೂ ಬುದ್ಧಿವಾದ ಹೇಳಲಿ. ನಾವೇನಾದರು ದಾರಿ ತಪ್ಪಿದ್ದರೆ, ಅವರ ಆದೇಶ ಪಾಲಿಸಿ ಅನುಸರಿಸಿ ಬದುಕಲು ಸದಾಸಿದ್ದರು ಆಗಿದ್ದೇವೆ. ನಾವು ಮುನಿಯದೆ, ಕೌರವರನ್ನು ದ್ವೇಷಿಸದೆ ಬದುಕಬಲ್ಲೆವು. ಹಾಗೆಯೆ ಅವರ ಮಕ್ಕಳಿಗೂ ಉಚಿತಾನುಚಿತಗಳನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ಬದುಕುವಂತೆ ನೋಡಿಕೊಳ್ಳಲಿ. ನ್ಯಾಯವಾಗಿ ನಮ್ಮದ್ದಾದ ದಾಯಭಾಗವನ್ನು ನಮಗಿತ್ತು ಕರುಣಿಸಲಿ. ಹಾಗೂ ನಮ್ಮ ಸಾಮ್ರಾಜ್ಯದ ಭಾಗ ಮತ್ತು ಸಂಪತ್ತು ನೀಡುವ ಮನಸ್ಸು ಕೌರವನಿಗೆ ಇಲ್ಲದಿದ್ದರೆ, ಈ ಸ್ಥಿತಿಯಲ್ಲೂ ನಾವು ಅಶಾಂತಿ ಬಯಸಲಾರೆವು. ಶಾಂತಿಯ ಸ್ಥಾಪನೆಯೆ ನಮ್ಮ ಉದ್ದೇಶ ಹೊರತು ಸಾಮ್ರಾಜ್ಯ ಸ್ಥಾಪನೆಯಲ್ಲ. ಹಾಗಾಗಿ ಇನ್ನೂ ನಮ್ಮ ಪ್ರಯತ್ನ ಶಾಂತಿ ಸಂಧಾನಕ್ಕಾಗಿ ಮುಂದುವರಿಯುತ್ತದೆ. ಇಂದ್ರಪ್ರಸ್ಥದಿಂದ ನಾವು ರಾಜಸೂಯಾಧ್ವರ ಮುಖೇನ ಸಾಧಿಸಿ ಸಂಪಾದಿಸಿದ ಸರ್ವ ಸಂಪದವನ್ನೂ ಕೌರವರಿಗೆ ಬಿಟ್ಟು ಕೊಡುತ್ತೇವೆ. ಪಾಂಡುಪುತ್ರರು ಐವರು ನಾವಿದ್ದೇವೆ, ಕಡೇ ಪಕ್ಷ ನಮಗೆ ಐದು ಗ್ರಾಮಗಳನ್ನಾದರೂ ನೀಡಲಿ. ಕುಶಸ್ಥಳ, ಇಂದ್ರಪ್ರಸ್ಥ, ವಾರಣಾವತ, ಆವಂತಿ, ಮಾಕಂದಿ ಈ ಪಂಚ ಗ್ರಾಮಗಳನ್ನು ನಮಗಿತ್ತರೂ ಸಾಕು. ನಾವು ತೃಪ್ತಿಗೊಂಡು ಶಾಂತಿಯಿಂದ ಇರುತ್ತೇವೆ. ಚಂದ್ರವಂಶದ ಕೀರ್ತಿಗೆ ಪೂರಕರೂ ಸದಾ ಸಿದ್ದರೂ, ಬಾಧ್ಯರೂ ಆಗಿ ಬದುಕುತ್ತೇವೆ ಎಂದು ಸಂಧಾನದೂತನಾದ ನನ್ನಲ್ಲಿ ಹೇಳಿ ಕಳುಹಿಸಿದ್ದಾನೆ. ಮಹಾರಾಜ ಧೃತರಾಷ್ಟ್ರಾ! ದ್ವಾರಕಾಪುರ ವಾಸಿಯಾದ ನನಗೆ ಪಾಂಡವರೂ ಕೌರವರೂ ಸಂಬಂಧದಲ್ಲಿ ಸಮಾನ ಬಂಧುಗಳಾಗಿದ್ದೀರಿ. ಬಂಧುಗಳ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಉದಾರ ಮನಸ್ಸಿನಿಂದ ಧರ್ಮರಾಯ ಒಪ್ಪಿ ಕೇಳಿರುವ ಕನಿಷ್ಟ ಐದು ಗ್ರಾಮಗಳನ್ನು ಅವರಿಗಿತ್ತರೆ ಕ್ಷೇಮ. ಉಳಿದ ಸವಿಸ್ತಾರವಾದ ಹಸ್ತಿನಾವತಿಯ ಸಾಮ್ರಾಜ್ಯ ನಿನ್ನ ಮಕ್ಕಳ ಆಳ್ವಿಕೆಗೆ ಉಳಿಯಲಿದೆ. ಒಂದೆಡೆ ಪಾಂಡವರು ಹಸ್ತಿನೆಯ ಹಿತ ಕಾಯುವವರಾಗಿ ಇದ್ದರೆ ಈ ಸಾಮ್ರಾಜ್ಯದತ್ತ ಆಕ್ರಮಣಕ್ಕೆ ಮನ ಮಾಡುವ ವೈರಿಗಳು ಯಾರಾದರು ಇರಲು ಸಾಧ್ಯವಿದೆಯೆ? ಈಗ ನೀನು ಇಷ್ಟಪಟ್ಟರೆ ಶಾಂತಿ ಸಂಧಾನ ಸರಳಸೂತ್ರದಲ್ಲಿ ನೆರವೇರಲು ಸಾಧ್ಯ. ನನ್ನ ದೌತ್ಯದ ಉದ್ದೇಶ ಲೋಕ ರಕ್ಷಣೆ. ಅದರಿಂದಾಗಿ ನಿನ್ನ ಮಕ್ಕಳೂ ಬದುಕಿ ಉಳಿಯಬಲ್ಲರು. ಒಪ್ಪದೆ ಹೋದರೆ ವೃದ್ಧಾಪ್ಯದಲ್ಲಿರುವ ನೀನು ಅನುಸರಿಸಿದ ಪುತ್ರವ್ಯಾಮೋಹದ ನಡೆಗೆ ಪ್ರತಿಯಾಗಿ ಶಾಂತಿ ನಷ್ಟವಾಗಿ, ಚಂದ್ರವಂಶ ಇತ್ತಂಡವಾಗಿ ಕಾದಾಡಿ ಪರಸ್ಪರ ಕೊಲೆಯಾಗುವುದನ್ನು ಕಾಣುವ ಘೋರ ಯಾತನೆಯ ಸ್ಥಿತಿ ನಿನ್ನದಾಗಲಿದೆ. ನಿನ್ನ ಮಕ್ಕಳು ಹತರಾಗುವುದನ್ನು ಕಣ್ಣಾರೆ ಕಾಣುವ ದೌರ್ಭಾಗ್ಯ ನಿನ್ನದಾದರೂ ಆಗಬಹುದು. ಹತ್ಯಾಕಾಂಡವೊಂದು ನಡೆಯಲು ಪ್ರೇರಕನೂ ಪೂರಕನೂ ಆದ ದೋಷಕ್ಕೆ ನೀನು ಮಿಂಚಿ ಹೋದ ಕಾಲದಲ್ಲಿ ಮರುಗಿದರೆ, ಆಗ ನೀನು ಅಸಹಾಯಕನಾಗಿ ಹೋಗುವೆ. ಅಂತಹ ಸ್ಥಿತಿಯಲ್ಲಿ ಬಂಧುಗಳು ಹೋರಾಡಿ ಪರಸ್ಪರ ಹತ್ಯೆಗೈಯಲ್ಲಪಟ್ಟು ಉತ್ಪತ್ತಿಯಾಗಬಲ್ಲ ಮಾನಸಿಕ ವೇದನೆ ಗೆದ್ದ ಪಕ್ಷಕ್ಕೆ ಸಂಭ್ರಮ ನೀಡಲು ಸಾಧ್ಯವಿದೆಯೆ? ಈಗ ಮಹತ್ವದ ನಿರ್ಣಯ ಕೈಗೊಳ್ಳಬೇಕಾದ ಸಮಯ. ನ್ಯಾಯ ಮಾರ್ಗದಲ್ಲಿ ಯೋಚಿಸಿ ಸಂಭವನೀಯ ಪ್ರಳಯ ಸದೃಶ ಸಂಗ್ರಾಮವನ್ನು ತಡೆಯುವ ಶಕ್ತಿ ನಿನಗಿದೆ. ಪಾಂಡವರು ತಮ್ಮ ಘೋರ ಪ್ರತಿಜ್ಞೆಯ ವಾಕ್ ದೋಷ ನಿವಾರಣೆಗೆ ಪ್ರಾಯಶ್ಚಿತ ಧಾರ್ಮಿಕ ವಿಧಿ ಪೂರೈಸಿ ವೈರ ಮರೆತು ಬಾಳುವುದಕ್ಕೆ ಸದಾಸಿದ್ದರಾಗಿದ್ದಾರೆ. ಮಾತ್ರವಲ್ಲ ಈ ಸಂಧಾನ ಸಫಲತೆಗೆ ಗೌರವವಿತ್ತು ಸಹಪಂಕ್ತಿ ಭೋಜನದ ರಸದೂಟವನ್ನು ಮನದಣಿಯೆ ಉಣ್ಣಲು ಪಾಂಡವರು ಒಪ್ಪಿದ್ದಾರೆ. ರಾಜಾ ಧೃತರಾಷ್ಟ್ರ, ನಿನ್ನ ಮಕ್ಕಳನ್ನು ಯಾರೂ ಸಂರಕ್ಷಿಲಾರರು. ನೀನೊಬ್ಬನೆ ಅಂತಹ ಸಂರಕ್ಷಣೆ ಮಾಡಬಲ್ಲವನು. ನೀನೀಗ ಮನಸ್ಸು ಮಾಡಬೇಕಾದ ಸಂಧಿಕಾಲ. ಮನುಷ್ಯನನ್ನು ಮನುಷ್ಯ ಪ್ರೀತಿಯಿಂದ ಕಂಡರೆ ಅದೇ ಸ್ವರ್ಗ. ದ್ವೇಷಿಸ ಹೊರಟರೆ ಅದು ನರಕವಾಗುತ್ತದೆ. ಈ ಮರ್ತ್ಯಲೋಕವನ್ನು ಸ್ವರ್ಗವಾಗಿಸುವ ಸುವರ್ಣಾವಕಾಶ ನಿನ್ನ ಕೈಯಲ್ಲಿದೆ. ದಯಾಪೂರಿತನಾಗಿ ವ್ಯಾಮೋಹ ತೊರೆದು ಕುಲೋನ್ನತಿಯನ್ನೂ ಶ್ರೇಯಸ್ಸನ್ನೂ ನೀಡಬಲ್ಲ ತೀರ್ಮಾನ ಕೈಗೊಳ್ಳುವ ಸುಮನಸ್ಸು ನಿನ್ನದಾಗಲಿ” ಎಂದು ಹರಸಿ ವಿವರಿಸಿದನು ಶ್ರೀಕೃಷ್ಣ ಪರಮಾತ್ಮ.
ಮುಂದುವರಿಯುವುದು…













