27.3 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -29

ಭರತೇಶ್ ಶೆಟ್ಟಿ, ಎಕ್ಕಾರ್

ಮೇನಕೆಯ ತಳಕು – ಬಳಕು, ವಯ್ಯಾರ – ಶೃಂಗಾರ ಕಂಡೊಡನೆ ತಪಸ್ಸಿನೆಡೆ ಏಕಾಗ್ರವಾಗಿದ್ದ ಕೌಶಿಕ ಮುನಿಯ ಚಿತ್ತ ತಿರುಗಿತು. ಇತ್ತ ಅಂಗನೆಯ ಅಂಗ ಸೌಂದರ್ಯದೆಡೆ ಸೆಳೆಯಲ್ಪಟ್ಟಿತು. ನಾಗವೇಣಿಯ ಮುಂಗುರುಳು ಹಾಲುಗೆನ್ನೆಯೆಂಬ ಅಂಗಣದಲ್ಲಿ ಮಂದ ಮಾರುತನ ಜೊತೆ ಆಡುತ್ತಿದೆಯೋ? ಇಲ್ಲ ತನ್ನನ್ನು ಕರೆಯುತ್ತಿದೆಯೋ ? ಎಂಬಂತೆ ಭಾಸವಾಗುತ್ತಿದೆ ತಪೋನಿಧಿ ಕೌಶಿಕರಿಗೆ. ಚಂದಿರವದನೆಯ ಅದುರುವ ಅಧರಗಳು, ಬಯಕೆಯ ಪಿಸುಗುಟ್ಟನ್ನಾಡಲು ಒದ್ದಾಡುತ್ತಿವೆಯೋ? ಚಂಚಲ ನೇತ್ರಗಳು ಓರೆ ನೋಟದಲ್ಲೇ ಮಾದಕತೆ, ಚಾಂಚಲ್ಯ ತುಂಬಿ ಸನ್ನೆ ಮಾಡುತ್ತಿವೆಯೋ? ಎಂಬಿತ್ಯಾದಿ ಉನ್ಮಾದ ಮೂಡಿತು. ಪ್ರಯೋಗಿಸಲ್ಪಟ್ಟ ಮದನನ ಶರ ಪಂಚಕಗಳಾದ ಅಶೋಕ, ಚೂತ, ಅರವಿಂದ, ನವಮಲ್ಲಿಕಾ, ನೀಲೋತ್ಫಲಗಳು ಫಲಿಸಲಾರಂಭಿಸಿದೆ. ಮೇನಕೆಯ ಪೂರ್ಣ ಶರೀರ ಅವಲೋಕಿಸತೊಡಗಿದ ಋಷಿವರ – ಬಾಗಿದ ನೀಳ ತೋಳುಗಳು, ಸಿಂಹ ಕಟಿ, ನೆಲ ತೀಡುತ್ತಿರುವ ಕಾಲ್ಬೆರಳುಗಳು, ಆಹಾ !!! ಬ್ರಹ್ಮನ ಸೃಷ್ಟಿಯ ಕೌಶಲ ಕೌತುಕವೋ ಈ ಸೌಂದರ್ಯ? ಉಬ್ಬಿರಬೇಕಾದಲ್ಲಿ ಉಬ್ಬು, ತಗ್ಗಿರಬೇಕಾದಲ್ಲಿ ತಗ್ಗು, ಏರಿಳಿತಗಳ ಪರಿಪೂರ್ಣತೆ, ಎತ್ತರದ ನಿಲುವು, ಸಪುಷ್ಟ ಅಂಗಸೌಷ್ಟವ. ಇದಕ್ಕಿಂತ ಮಿಗಿಲಾದ ಸೊಬಗಿನ್ನೆಲ್ಲಿರಲು ಸಾಧ್ಯ ? ಎಂಬಷ್ಟರ ಮನಸ್ಥಿತಿ ಕೌಶಿಕ ಮುನಿಗಾಗ ತೊಡಗಿತು. ಇತ್ತ ಮೇನಕೆಯ ತನು ಮನಗಳು ಮನ್ಮಥನ ಶರಾಘಾತದ ಪರಿಣಾಮ ಪ್ರತಿಫಲಿಸುತ್ತಿದೆ. ಆದರೂ ದೇವಾಂಗನೆ ಮೇನಕೆ ತನ್ನ ತುಡಿತಗಳನ್ನು ನಿಯಂತ್ರಿಸಬಲ್ಲಳು. ಬಳಿ ಬರುವ ಪುಣ್ಯ ಪುರುಷನ ಕಾತರವನ್ನು ಕುಣಿಸಿ, ಕಾಡಿಸಿ ಆಡಿಸಿ ಉತ್ತುಂಗಕ್ಕೇರಿಸುವ ಕಲೆ ವೃತ್ತಿಯ ಪ್ರವೃತ್ತಿಯಿಂದ ಆಕೆಗೆ ಕರಗತವಾಗಿತ್ತು. ಹೀಗೆ ತಾನೇ ಬಯಸಿದ್ದರೂ ಕಾಯಿಸುತ್ತಿರುವ ಮೇನಕೆಯ ಸವಾಲು ಕೌಶಿಕ ಮುನಿಗೆ ಎದುರಾಗುತ್ತಿದೆ. ಹುಚ್ಚು ಕುದುರೆಗೆ, ಮೇವು ನೀಡಿ ಪಳಗಿಸಿ, ಬಳಿಕ ಸವಾರನಾಗಿ ತನ್ನ ಗುರಿಯೆಡೆ ನಡೆಸುವ ತುಡಿತದ ದುಡಿಮೆ ಈಗ ಮುನಿವರನದ್ದು ಆಗಬೇಕಾಯಿತು.

ಋಷಿ ಸಂಕಲ್ಪದಂತೆ ಪರ್ಣಾಶ್ರಮ ಸಿದ್ಧವಾಯಿತು. ಈರ್ವರಲ್ಲೂ ಹಿಂಗಲಾರದ ಕಾಮದಾಹ ಉತ್ಕರ್ಷೆಯ ಉಚ್ಛ್ರಾಯ ಶಿಖರವೇರಿತ್ತು. ಪರಿಣತ ದೇವಾಂಗನೆಯೇ ಆಗಿದ್ದರೂ, ನುಂಗಿ ಮುಗಿಸಲಾಗದ ತುತ್ತಾಗಿಬಿಟ್ಟನು ಮುನಿಪುಂಗವ!!!

ಹೀಗೆ ಕ್ಷಣ, ದಿನ, ವಾರ, ಮಾಸ, ಋತು, ಸಂವತ್ಸರ ಕಳೆಯಲು ಮೇನಕೆ ಮುದ್ದಾದ ಹೆಣ್ಣು ಮಗುವೊಂದರ ತಾಯಿಯಾದಳು. ಕೌಶಿಕ ಮುನಿ ಕಾಡು ಸೇರಿದ್ದು ಬ್ರಹ್ಮಜ್ಞಾನ ಬಯಸಿ, ಆದರೆ ಪಡೆದದ್ದು ಪಿತೃತ್ವ. ಮೇನಕೆಗಾದರೋ ತನ್ನ ಕರ್ತವ್ಯ ಪೂರೈಸಿದ ಸಂತೃಪ್ತಿ.

ನವಜಾತ ಶಿಶು ಪ್ರಕೃತಿದತ್ತ ಪ್ರಥಮ ಶಿಕ್ಷಣ ಅಳುವುದಲ್ಲವೇ? ಹಾಗೆಯೇ ವಿದ್ಯಾರ್ಥಿಯಾಗಿ ಅಳುತ್ತಿದೆ. ಆದರೆ ಇವರಿಬ್ಬರಿಗೂ ಕೇಳದಾಗಿದೆ. ವಿಶ್ವಾಮಿತ್ರರಿಗೆ ತನ್ನ ಗುರಿಯ ನೆನಪಾಗಿ ತಪಸ್ಸಿನೆಡೆ ಮನಸ್ಸು ಸೆಳೆದು ಹೊರಟು ನಿಂತರು. ಮೇನಕೆ ತನಗಿತ್ತ ಮಹತ್ಕಾರ್ಯ ಸಂಪನ್ನವಾಗಿ ಸ್ವರ್ಗವೇರಲು ಸಿದ್ಧಳಾಗಿದ್ದಾಳೆ. ಇಬ್ಬರಿಗೂ ಮಗು ಬೇಡವಾಗಿದೆ. ಪರಸ್ಪರ ವಾದ- ವಾಗ್ಯುದ್ದವಾಗಿ, ತಾಯಿಯಾದರೂ ಕಾಲದ ನಿಯತಿಯನ್ನು ಮೀರಲಾಗದ ಮೇನಕೆ ದಿವ್ಯಶರೀರ ಬಲದಿಂದ ಹೊರಟು ಸ್ವರ್ಗವೇರಿದಳು. ಕೌಶಿಕ (ವಿಶ್ವಾಮಿತ್ರ) ಋಷಿಯಲ್ಲವೇ? ವ್ಯಾಮೋಹ, ಬಂಧನ ಅವರನ್ನುಬಸುಲಭವಾಗಿ ಬಂಧಿಸಬಲ್ಲುದೇ? ಮಗುವನ್ನೊಮ್ಮೆ ನೋಡಿ, ಹಸಿರೆಲೆಗಳನ್ನು ಹಾಸಿ ಅಲ್ಲೇ ಮಲಗಿಸಿ, ತಪಸ್ಸನಾಚರಿಸಲು ಸೂಕ್ತ ಕ್ಷೇತ್ರ ಅರಸಿ ಹೊರಟೇ ಬಿಟ್ಟರು!. ಹೆತ್ತವರಿಗೆ ಬೇಡವಾದ ಮಗು ಲೋಕದ ಕಾಲಚಕ್ರದ ಚಲನೆಗೆ ಪೂರಕವಾಗಲು ಬೇಕಾಗಿತ್ತು.

ಹೆಣ್ಣು ಮಗು ಏಕಾಂಗಿಯಾಗಿ ಅಳುತ್ತಿರಬೇಕಾದರೆ, ಶಕುಂತ ಪಕ್ಷಿಗಳು ಬಳಿ ಬಂದು ರೆಕ್ಕೆ ಬಿಚ್ಚಿ ಸುತ್ತ ನಿಂತು ಮಾನಿಸಿದವು. ಕೆಲವು ಹಕ್ಕಿಗಳು ರಸ ಬರಿತ ಹಣ್ಣುಗಳನ್ನು ಕೊಕ್ಕಿನಲ್ಲಿ ಹಿಡಿದು ತಂದು – ಒತ್ತಿ ಮಗುವಿನ ಬಾಯಿಗೆ ರಸ ಸುರಿಸಿ ಹಸಿವು ತಣಿಸಿದವು.

ಹೀಗೆ ನಾಲ್ಕಾರು ದಿನ ಕಳೆದಿರಬಹುದು. ಅತ್ತ ಗಮಿಸಿದ ಮಹಾತ್ಮ ಕಣ್ವ ಋಷಿಗಳನ್ನು ಕಂಡು ಶಕುಂತ ಪಕ್ಷಿಗಳು ಹಾರಿ ಮರವೇರಿ ಕುಳಿತವು. ಮಗುವಿನ ಸ್ವರ ಕೇಳಿ ಅತ್ತ ಬಂದವರೇ ನೋಡಿ, ಕೈಚಾಚಿ ಎತ್ತಿಕೊಂಡರು. ಮನ ಸೆಳೆಯಿತು ಯೋಚನೆ ಹಿಂದುಳಿಯಿತು. ಮಗುವಿನ ಮೇಲೆ ಪ್ರೀತಿ ಕರುಣೆ ಮುಂದಾಯಿತು. ತನ್ನಾಶ್ರಮಕ್ಕೊಯ್ದು ಶಕುಂತ ಪಕ್ಷಿಗಳಿಂದ ರಕ್ಷಿಸಲ್ಪಟ್ಟ ಮಗುವಿಗೆ ಶಕುಂತಳಾ ಎಂದು ನಾಮಕರಣ ಮಾಡಿ ಬೆಳೆಸುತ್ತಾ ಸಂಸ್ಕಾರ, ವಿದ್ಯೆ, ಆಚಾರ, ವಿಚಾರ ಕಲಿಸುತ್ತಾ ಸಲಹಿದರು. ಪರಿಣಾಮ ಜ್ಞಾನ – ಬುದ್ಧಿರ್ಬಲ, ಸ್ಥೈರ್ಯ, ಗಾಂಭಿರ್ಯ, ಲಾವಣ್ಯ, ಸೌಂದರ್ಯ ಮೈತಳೆದು ಕಾಂತಿಯುಕ್ತಳಾಗಿ ಕಣ್ವಾಶ್ರಮದ ಆಕರ್ಷಣೆಯಾಗಿ ಬೆಳೆಯುತ್ತಿದ್ದಳು.

ಇತ್ತ ಬೇಟೆಗಾಗಿ ಬಂದ ರಾಜಾ ದುಶ್ಯಂತ ಜಿಂಕೆಯೊಂದನ್ನು ಬೆನ್ನಟ್ಟುತ್ತಾ ಎಷ್ಟು ಶೀಘ್ರಗಮನನಾದರೂ, ವೇಗವೇರಿಸಿದರೂ ಹರಿಣದ ಬಳಿ ಸೇರಲಾಗಲಿಲ್ಲ. ಅತಿವೇಗವಾಗಿ ಸಾಗಿ ಬರುತ್ತಿರಬೇಕಾದರೆ, “ಇದು ಕಣ್ವಾಶ್ರಮದ ಜಿಂಕೆ, ಕೊಲ್ಲಬಾರದು” ಎಂಬ ಆಜ್ಞೆ ಕೇಳಿ ಬಂತು. ತಕ್ಷಣ ತನ್ನ ಧನುರ್ಬಾಣಗಳನ್ನು ಕೆಳಗಿಳಿಸಿದ ದುಶ್ಯಂತ. ಜಿಂಕೆಯ ನಡೆಯನ್ನೇ ಅನುಸರಿಸಿ ಹೋದ. ಅದು ಅತಿ ಸೌಂದರ್ಯವತಿಯ ಬಳಿ ಸಾರಿ ನಿಂತಿತು. ಆಕೆ ಬಾಗಿ ಬರಸೆಳೆದು ಕೊಂಡಳು. ದುಶ್ಯಂತ ಆ ಸೌಂದರ್ಯಕ್ಕೆ ಮನಸೋತು ತನ್ನ ಇರವನ್ನೇ ಮರೆತು ದಿಟ್ಟಿಸಿ ನೋಡತೊಡಗಿದ.

ಮುಂದುವರಿಯುವುದು…..

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page