ಭಾಗ 283
ಭರತೇಶ್ ಶೆಟ್ಟಿ ,ಎಕ್ಕಾರ್

ಧೃತರಾಷ್ಟ್ರನು ವಿದುರನ ನೀತಿ ಮಾತು ಕೇಳಿ ಸಂಪೂರ್ಣ ಒಪ್ಪಿಕೊಂಡವನಂತೆಯೆ ಆಗಿ ಹೋದನು. ತಮ್ಮನನ್ನು ಉದ್ದೇಶಿಸಿ “ವಿದುರಾ! ನೀನು ಮೊದಲಿನಿಂದಲೂ ಇದೇ ಮಾತು ಹೇಳಿಕೊಂಡು ಬಂದಿರುವೆ. ನನಗೆ ನೀನೇನು ಹೇಳುತ್ತಿರುವೆ ಹಾಗು ಅದರ ಪರಿಣಾಮ ಸ್ಪಷ್ಟವಾಗಿ ಮನವರಿಕೆಯಾಗಿದೆ. ಆದರೇನು ಮಾಡಲಿ? ನಾನೇನಾದರೂ ಈ ಮಾತುಗಳನ್ನು ನನ್ನ ಮಗನಾದ ದುರ್ಯೋಧನನಲ್ಲಿ ಹೇಳಿದರೆ ಶಕುನಿಯೂ ಜೊತೆಯಾಗಿ ಒಂದಿಲ್ಲೊಂದು ತಂತ್ರ ಹೆಣೆದು ಬದಲಾಯಿಸಿ ಬಿಡುತ್ತಾರೆ. ನೀನು ಪ್ರಹ್ಲಾದನ ಕಥೆಯನ್ನು ಹೇಳಿ ಮನ ಪರಿವರ್ತನೆಗೆ ಪೂರ್ಣ ಪ್ರಯತ್ನ ಮಾಡಿರುವೆ. ನಾನೆಲ್ಲಿ! ಆ ಮಹಾತ್ಮ ಪ್ರಹ್ಲಾದನೆಲ್ಲಿ? ಪುತ್ರ ವ್ಯಾಮೋಹದ ಬಲೆಗೆ ಸಿಲುಕಿ ಒದ್ದಾಡುವ ಈ ದುರ್ಬಲನಿಗೆ ಮನೋನಿಗ್ರಹ ಸಾಧ್ಯವೊ ಹೇಳು? ಒಂದು ಸತ್ಯ ನನಗೆ ಅರ್ಥವಾಗುತ್ತಿದೆ, ವಿಧಿಯ ಲೀಲೆಯ ಮುಂದೆ ಯಾರ ಆಟವೂ ಸಾಗದು. ದೈವೇಚ್ಚೆ ಏನಿದೆಯೋ ಅದನ್ನು ತಡೆಯಲೂ ಸಾಧ್ಯವಿಲ್ಲ. ಸಂಚಿತ ಪಾಪ ಪುಣ್ಯ, ಪಾಲಿತ ಧರ್ಮ ಅಧರ್ಮಗಳನ್ನು ತೂಗಿದರೆ ಪಾಂಡವರು ಬಹಳಷ್ಟು ಎತ್ತರದಲ್ಲಿದ್ದಾರೆ. ನಿಯತಿಯ ನಿರ್ಣಯ, ಫಲಾಫಲಗಳ ಪ್ರಾಪ್ತಿ ಇದಕ್ಕೆ ಪೂರಕವಾಗಿಯೆ ಸಾಗಲಿದೆ ಎಂದು ನನಗರ್ಥವಾಗಿದೆ.” ಹೀಗೆ ಅವರಿಬ್ಬರೂ ಮಾತನಾಡುತ್ತಾ ಸಮಸ್ಯೆ ನಿಯಂತ್ರಿಸುವ ಕುರಿತಾಗಿ ಚರ್ಚಿಸುತ್ತಾ ಕುಳಿತು ರಾತ್ರಿ ಬೆಳಗಾಯಿತು.
ಮುಂಜಾನೆ ಧೃತರಾಷ್ಟ್ರ ಓಲಗಸ್ಥನಾಗಿ ಹಸ್ತಿನಾವತಿಯ ರಾಜ ಸಿಂಹಾಸನ ಅಲಂಕರಿಸಿದ್ದಾನೆ. ಉಪಪ್ಲಾವ್ಯದಲ್ಲಿ ಪಾಂಡವರನ್ನು ಕಂಡು ಸಂದೇಶವಾಹಕನಾಗಿ ಕಾರ್ಯ ನಿರ್ವಹಿಸಲು ನಿಯೋಜಿತನಾಗಿ ಹೋಗಿ ಬಂದಿದ್ದ ಸಂಜಯನು ಆಸ್ಥಾನದಲ್ಲಿ ಅಲ್ಲಿಂದ ತಂದ ಸಮಾಚಾರ ಹೇಳಲು ಸಿದ್ಧನಾಗಿ ಉಪಸ್ಥಿತನಿದ್ದಾನೆ. ಕಾತರದಿಂದ ಕೇಳುವುದಕ್ಕಾಗಿ ಭೀಷ್ಮಾದಿ ಆಚಾರ್ಯರೂ, ಮೈತ್ರಿಯಾಗಿ ಬಂದ ಅರಸರೂ, ಕರ್ಣ, ಜಯದ್ರಥ, ಶಕುನಿಯಾದಿಗಳ ಜೊತೆ ಕೌರವನ ಸಹೋದರರೂ ಇದ್ದಾರೆ. ಮಹಾರಾಜ ಧೃತರಾಷ್ಟ್ರ ಸಂಜಯನನ್ನು ಕರೆದು ಪಾಂಡವರ ಭೇಟಿಯ ಸುದ್ಧಿ ಸಭೆಯಲ್ಲಿ ಪ್ರಸ್ತುತ ಪಡಿಸಲು ಅಪ್ಪಣೆಯಿತ್ತನು.
ಸಂಜಯನು “ಮಹಾಪ್ರಭು, ಪಾಂಡವರಿಂದ ನಾನು ಸತ್ಕಾರ ಸಹಿತ ಸ್ವಾಗತಿಸಲ್ಪಟ್ಟೆನು. ಧರ್ಮರಾಯ ನಮ್ಮವರೆಲ್ಲರ ಬಗ್ಗೆಯೂ ಪ್ರತ್ಯೇಕವಾಗಿ ಕೇಳಿ ಕುಶಲೋಪರಿ ವಿಚಾರಿಸಿದ್ದಾನೆ. ವಿಶ್ರಾಂತಿಯ ಬಳಿಕ ಮರುದಿನ ಶ್ರೀಕೃಷ್ಣನನ್ನು ಮುಂದಾಳಾಗಿರಿಸಿ, ಧರ್ಮರಾಯನ ಮೈತ್ರಿಯಲ್ಲಿ ಜೊತೆಯಾಗಿರುವ ರಾಜರೆಲ್ಲರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಅಲ್ಲಿ ನೀವು ತಿಳಿಸಿದ ಸರ್ವ ವಿಚಾರವನ್ನೂ ಮಂಡಿಸಿದೆ. ಅಲ್ಲಿದ್ದವರೆಲ್ಲರೂ ಯುದ್ದೋತ್ಸಾಹದಿಂದ ಸಂಗ್ರಾಮವೆ ಉತ್ತರ ಎಂದು ಏರಿ ಬಂದರು. ಧರ್ಮರಾಯ ತಾಳ್ಮೆಯಿಂದ ಅವರೆಲ್ಲರನ್ನೂ ಸಂತೈಸಿ, ದೊಡ್ಡಪ್ಪನಾದ ನಿಮ್ಮ ಮಾತನ್ನು ಶಿರಸಾವಹಿಸಿ ಮರ್ಯಾದೆಯಿಂದ ಸ್ವೀಕರಿಸಿ ಪಾಲಿಸುವ ವಚನವಿತ್ತಿದ್ದಾನೆ. ನೀವೇನು ಹೇಳುವಿರೋ ಅದನ್ನು ಪಾಲಿಸಲು ಸದಾ ಸಿದ್ದನೆಂದು ಹೇಳಿದ್ದಾನೆ. ನಿಮ್ಮ ಬಗ್ಗೆ ಬಹುವಿಧದ ಕೃತಜ್ಞತಾ ಭಾವ ಹೊಂದಿದ್ದಾನೆ. ಇಂತಹ ಸಂದರ್ಭದಲ್ಲೂ ಅಷ್ಟು ಸಹಿಷ್ಣುತೆ ಧರ್ಮಬುದ್ಧಿಯುಳ್ಳ ಧರ್ಮರಾಯನ ಹೊರತು ಅನ್ಯ ಯಾರಲ್ಲೂ ಇರಲು ಸಾಧ್ಯವಿಲ್ಲ. ಕೊನೆಗೆ ನೀವು ಯುಕ್ತವಾದ ರೀತಿಯಲ್ಲಿ ಯೋಚಿಸಿ, ಚಂದ್ರವಂಶದ ಶ್ರೇಯಸ್ಸಿಗೆ ಪೂರಕವಾಗುವಂತೆ ನಿರ್ಣಯ ಕೈಗೊಳ್ಳುವ, ವ್ಯವಹರಿಸುವ ಪೂರ್ಣಾಧಿಕಾರ ಧರ್ಮರಾಯನಿಗಿತ್ತ ವಿಚಾರವನ್ನೂ ತಿಳಿಯಪಡಿಸಿದೆ. ಅದರಂತೆ ಧರ್ಮರಾಯ ಶ್ರೀಕೃಷ್ಣನನ್ನು ಸಂಧಾನಕಾರನಾಗಿ ನಮ್ಮಲ್ಲಿಗೆ ಕಳುಹಿಸುತ್ತೇನೆಂದೂ, ಈಡೇರಿಸಬಹುದಾದ ಸರಳ ಬೇಡಿಕೆಗಳನ್ನು ಕೃಷ್ಣನ ಮುಖೇನ ತಿಳಿಯಪಡಿಸುವುದಾಗಿಯೂ ಹೇಳಿದ್ದಾನೆ. ಈ ಸಂಧಿಯನ್ನು ಒಪ್ಪಿ ಉಭಯ ಪಕ್ಷಗಳ ನಡುವೆ ನಡೆಯಬಹುದಾದ ನರ ಯಜ್ಞವನ್ನು ತಡೆದು, ರಕ್ತ ಹೊಳೆಯಾಗಿ ಹರಿದು, ರಣ ಧಾರುಣಿ ರುಧಿರ ಸರೋವರವಾಗುವುದನ್ನು ತಡೆಯಬೇಕೆಂದು ವಿನಂತಿಸಿದ್ದಾನೆ” ಎಂದು ನಿಖರ ವರದಿಯಂತೆ ಸಂಗತಿಗಳನ್ನು ನಿವೇದಿಸಿದನು. ತನ್ನ ವೈಯಕ್ತಿಕ ಅಭಿಪ್ರಾಯವನ್ನೂ ಹೇಳಲು ಅನುಮತಿ ಕೇಳಿದನು. “ಮಹಾರಾಜಾ, ಈಗಷ್ಟೇ ವನವಾಸ ಅಜ್ಞಾತವಾಸ ಪೂರೈಸಿ ಬಂದಿರುವ ನಿರ್ಧನರೂ, ಸೌಭಾಗ್ಯ ಸೌಕರ್ಯ ರಹಿತರೂ ಆದ ಸ್ಥಿತಿಯಲ್ಲಿರಬೇಕಾಗಿದ್ದ ಪಾಂಡವರನ್ನು ನೋಡುವಾಗ ವಿಶೇಷವೇ ಎನಿಸಿತು. ಅಷ್ಟ ಐಶ್ವರ್ಯ ಸಂಪನ್ನರಾಗಿ, ರಾಜ ವೈಭವದ ಸಕಲೈಶ್ವರ್ಯ ಸಮೃದ್ಧಿಯೊಂದಿಗೆ ಸಂತೃಪ್ತ ಭಾವದಿಂದಿದ್ದಾರೆ. ನಾವಾದರೊ ಇಲ್ಲಿ ಎಲ್ಲಾ ಇದ್ದೂ ವ್ಯಾಕುಲಚಿತ್ತರಾಗಿದ್ದೇವೆ. ಜನಬಲ, ಅಸ್ತ್ರ – ಶಸ್ತ್ರ ಬಲ, ಜ್ಞಾನ ಬಲ ಎಲ್ಲಕ್ಕಿಂತ ಮಿಗಿಲಾಗಿ ಧರ್ಮಬಲ, ಪುಣ್ಯಬಲ, ದೈವಬಲ ತುಂಬಿ ಶೋಭಿಸುವ ಪಾಂಡವರು ಅಜೇಯರಾಗಿ ಗೋಚರಿಸುತ್ತಿದ್ದಾರೆ. ಪುರದ ಏಳಿಗೆ ಬಯಸುವ ಸೇವಕನಾಗಿ ನನ್ನ ವಿನಂತಿ ಇಷ್ಟೇ, ಪಾಂಡವರ ಜೊತೆ ಸಂಧಿಯೊಂದೆ ದಾರಿ. ಅನ್ಯ ಯಾವ ಮಾರ್ಗ ಅನುಸರಿಸಿದರೂ ನಮಗೆ ಕ್ಷೇಮವಾಗದು. ಧರ್ಮಾತ್ಮರಾದ ಪಾಂಡವರು ನಮ್ಮವರೇ ಆಗಿದ್ದಾರೆ. ಅವರ ಜೊತೆಗಿನ ಮೈತ್ರಿ ಎಂದಿಗೂ ದ್ರೋಹ, ವಂಚನೆ, ಅವಿಶ್ವಾಸ ಇತ್ಯಾದಿ ನಕರಾತ್ಮಕ ವಿಷಯಗಳಿಗೆ ಎಡೆ ನೀಡದೆ ಪರಿಶುದ್ಧವಾಗಿ ಉಳಿದು ಬೆಳೆಯುತ್ತದೆ. ನಮಗದು ಪರಮ ಶ್ರೇಯಸ್ಕರ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಸ್ವೀಕರಿಸುವುದು -ಬಿಡುವುದು ನಿಮ್ಮ ತೀರ್ಮಾನಕ್ಕೆ ಬಿಟ್ಟ ವಿಚಾರ”
ಧೃತರಾಷ್ಟ್ರ ಮೊದಲೆ ಮೃದುವಾಗಿದ್ದನು. ವಿದುರನ ಜೊತೆ ಸಮಾಲೋಚನೆಯಿಂದ ಮನಸ್ಸು ಧರ್ಮ ಪಥವನ್ನು ಅನುಸರಿಸಲು ಸಿದ್ಧವಾಗಿತ್ತು. ಈಗ ಸಂಜಯನ ಮಾತು ಕೇಳಿದ ನಂತರ ಭಯಗೊಂಡನು. ತನ್ನ ಪುತ್ರ ದುರ್ಯೋಧನನ್ನು ಕರೆದು “ಮಗಾ! ಪಾಂಡು ಚಕ್ರವರ್ತಿ ನನ್ನ ಸೋದರ. ಆತನೂ ಅಪ್ರತಿಮ ಸಾಧಕ, ಉತ್ತಮ ರಾಜನಾಗಿ, ಧರ್ಮಾತ್ಮನೂ ಆಗಿದ್ದನು. ಈಗ ಅವನ ಮಕ್ಕಳಂತೂ ಅಪರಂಜಿಯಂತೆ ಪರಿಶುದ್ಧ ಗುಣವಂತರಾಗಿದ್ದಾರೆ. ಅವರ ಜೊತೆ ವ್ಯರ್ಥ ಕಲಹ ಬಯಸುವುದು ಶ್ರೇಯಸ್ಕರವಲ್ಲ. ಅವರದ್ದಾದ ದಾಯಭಾಗ ನೀಡಿ ಈ ಸಮಸ್ಯೆ ಪರಿಹರಿಸುವುದು ಒಳಿತು” ಎಂದನು.
ಆಲಿಸಿದ ಭೀಷ್ಮಾಚಾರ್ಯರಿಗೂ ಸಂತೋಷವಾಯಿತು, “ರಾಜಾ! ನಿನ್ನ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಅತ್ಯುತ್ತಮ ನಿರ್ಣಯ ನಿನ್ನಿಂದ ಪ್ರಕಟವಾಗಿದೆ. ಈ ನಿಲುಮೆಯಿಂದ ಸರ್ವರಿಗೂ ಶುಭವಾಗಲಿದೆ. ಸಂಧಾನವಾಗಲಿ – ಎಲ್ಲರಿಗೂ ಸುಖವಾಗಲಿ” ಎಂದರು.
ಈ ಮಾತನ್ನು ಕೇಳಿ ಕರ್ಣನಿಗೆ ಅತಿರೇಕ ಎನ್ನಬಹುದಾದಷ್ಟು ಸಿಟ್ಟು, ಆಕ್ರೋಶ ಮನಮಾಡಿತು. “ಯಾಕೆ ಎಲ್ಲರೂ ಕ್ಷಾತ್ರ ಗುಣ ಮರೆತು ಮಾತನಾಡುತ್ತಿದ್ದೀರಿ? ನಿಮ್ಮಲ್ಲಿ ಯಾರಿಗೂ ಶೌರ್ಯ, ಸಾಹಸ, ಧೈರ್ಯ ಇಲ್ಲವೇ? ಪಾಂಡವರು ಶ್ರೇಷ್ಠರು ಎಂದು ಹೇಳಲು ನಾಚಿಕೆ ಆಗುತ್ತಿಲ್ಲವೇ? ಹಾಗಾದರೆ ಈಗ ಹಸ್ತಿನಾವತಿ ಅಸಮರ್ಥರ ಆಳ್ವಿಕೆಯಲ್ಲಿದೆ ಎನ್ನುತ್ತಿದ್ದೀರಾ? ಪಾಂಡವರು ಸಾಮ್ರಾಜ್ಯ ಬೇಕಿದ್ದರೆ ಯುದ್ದವನ್ನು ಮಾಡಲಿ. ನಿಮಗೆಲ್ಲರಿಗೂ ಅವರ ಬಗೆಯಲ್ಲಿ ಭಯವಿದ್ದರೆ, ಪ್ರಾಣದ ಮೇಲೆ ಅತಿ ವ್ಯಾಮೋಹ ಇದ್ದರೆ ಸುಮ್ಮನೆ ಉಳಿಯಬಹುದು. ನಾನೊಬ್ಬನೇ ಪಾಂಡವರನ್ನು ಗೆದ್ದು, ನನ್ನ ಮಿತ್ರ ಕೌರವನ ಸಾಮ್ರಾಜ್ಯ ಉಳಿಸಿಕೊಡುವೆ. ನನಗೆ ಪಾಂಡವರು ನಗಣ್ಯರು. ಹಾಗಾಗಿ ಸಂಧಾನ ಸಾಧ್ಯವಿಲ್ಲ – ಸಂಗ್ರಾಮವೊಂದೇ ಪರಿಹಾರ” ಎಂದನು.
ಸಹನಾಮೂರ್ತಿಯಾದ ಭೀಷ್ಮರಿಗೆ ಕರ್ಣನ ಬಂಡತನ ವಿಪರೀತ ಕ್ರೋಧವನ್ನು ಉಂಟು ಮಾಡಿತು. “ಎಲವೋ ಕರ್ಣ, ನಿನ್ನಂತಹ ಮೂರ್ಖ ಈ ಲೋಕದಲ್ಲಿ ಇನ್ನೋರ್ವ ಇರಲಾರನು. ಪಾಂಡವ ಸೇನೆ ಬಿಡು, ಅರ್ಜುನ ಓರ್ವನನ್ನು ಗೆಲ್ಲಲಾದೀತೆ? ದ್ರೋಣ ಶಿಷ್ಯನಾಗಿದ್ದು ಈಗಾಗಲೆ ಏಕಮೇವ ಧನುರ್ಧರನಾಗಿದ್ದಾನೆ. ಆ ಬಳಿಕ ಅರ್ಜುನನ ಜ್ಞಾನ – ಅಸ್ತ್ರ ಸಂಪಾದನೆ, ರಣ ಕೌಶಲ್ಯ ಅಸಾಧರಣವೂ – ಅತಿಮಾನುಷ ಎನ್ನಬಹುದಾದಷ್ಟು ವೃದ್ಧಿಸಿದೆ. ಆ ಬಗ್ಗೆ ಮೂಢನಾದ ನೀನೇನು ತಿಳಿದಿರುವೆ? ಪಾರ್ಥನಿಗೆ ಶಿವಲೋಕದ ಪೂರ್ಣಾನುಗ್ರಹವಾಗಿದೆ – ಹರನ ಪಾಶುಪತ, ಗೌರಿಯ ಅಂಜಲಿಕಾಸ್ತ್ರ, ಗಣೇಶ, ಕಾರ್ತಿಕೇಯ, ಶಿವಗಣಗಳ ಆಯುಧಗಳು ಪಾರ್ಥನಲ್ಲಿವೆ. ದೇವಲೋಕದ ಅಷ್ಟ ದಿಕ್ಪಾಲಕರೂ ಅನುಗ್ರಹಿಸಿ ತಮ್ಮ ಶಕ್ತ್ಯಾಯುಧಗಳನ್ನು ಅನುಗ್ರಹಿಸಿದ್ದಾರೆ. ಅಗ್ನಿದತ್ತ ದಿವ್ಯರಥ – ಗಾಂಡೀವ, ದಿವ್ಯಾಶ್ವಗಳು, ಕಪಿಧ್ವಜ, ಗಂಧರ್ವನ ಚಾಕ್ಷುಷ ವಿದ್ಯೆಯ ಜೊತೆ ಇನ್ನೆಷ್ಟೋ ವರ ಬಲಗಳೂ, ಅನುಗ್ರಹಗಳೂ ಆತನಿಗಾಗಿದೆ ಎಂಬ ವರ್ತಮಾನವಿದೆ. ಇದೆಲ್ಲದರ ಜೊತೆ ಈಗ ವಾಸುದೇವ ಶ್ರೀ ಕೃಷ್ಣನ ಸಾರಥ್ಯ ಆತನಿಗೆ ಒದಗಿದೆ. ಆತನ ಎದುರು ನಿಲ್ಲುವುದಕ್ಕೆ ಯೋಧನಾದವನಿಗೆ ಯೋಗ್ಯತೆ ಎಷ್ಟು ಬೇಕಾದೀತು ಎಂದು ಯೋಚಿಸಿ ನೋಡು. ಈ ತನಕ ಹಲವು ಪ್ರಕರಣಗಳಲ್ಲಿ ಇದೆಲ್ಲದರ ಅನುಭವ ನಿನಗಾಗಿದೆ. ನಿನ್ನ ಪ್ರಾಣವೊಂದನ್ನುಳಿದು ಮತ್ತೆಲ್ಲವನ್ನೂ ಕಿತ್ತು ಕೊಂಡು ಬಿಟ್ಟಿದ್ದಾನೆ. ಆತನಿತ್ತ ಪ್ರಾಣ ಭಿಕ್ಷೆಯ ಉಸಿರೆಳೆದು ಬಿಡುತ್ತಿರುವೆ ಎಂಬುವುದನ್ನು ನೀನು ಮರೆಯಬೇಡ. ಪಾಂಚಾಲದ ಸ್ವಯಂವರ ಮಂಟಪ, ಘೋಷ ಯಾತ್ರೆ, ಚಿತ್ರಸೇನ ಕಾಳಗ, ಉತ್ತರ ಗೋಗ್ರಹಣ ಇತ್ಯಾದಿ ಪ್ರಕರಣಗಳಲ್ಲಿ ರಣಕ್ಕೆ ಬೆನ್ನು ಹಾಕಿ ಓಡಿಹೋದ ರಣಹೇಡಿಯಾದ ನಿನ್ನಂತಹ ಮೂಢ ಈ ಮಾತು ಹೇಳುವುದೇ? ನಿನಗೆ ಸವ್ಯಸಾಚಿ ಧನಂಜಯ ನಗಣ್ಯನೇ? ನಾವು ನಿನ್ನ ಈ ಮಾತು ಕೇಳಿ ಸಿದ್ಧರಾಗಬೇಕೇ? ನಿನ್ನ ಈ ಉದ್ದಟತನಕ್ಕೆ ಕಾರಣ ನಿನಗಿಲ್ಲಿ ದೊರೆತ ಸಲುಗೆ, ಅದನ್ನು ಸದುಪಯೋಗಗೊಳಿಸಿ ಧರ್ಮಯುಕ್ತವಾದ ದಾರಿಯಲ್ಲಿ ನಡೆಯುವುದನ್ನು ಕಲಿತುಕೋ” ಎಂದು ಅಬ್ಬರಿಸಿದರು.
ಅಪಮಾನಿತನಾದ ಕರ್ಣಸಭೆಯಲ್ಲಿ ನಿಲ್ಲಲಾಗದೆ ಸಭಾತ್ಯಾಗ ಮಾಡಿ ಹೊರ ನಡೆದನು. ದುರ್ಯೋಧನನಿಗೆ ಅಸಮಧಾನವೂ, ಕೋಪವೂ ಮಿಳಿತವಾಗಿ ಮುಖಭಾವ ಬದಲಾಯಿತು, ಹುಬ್ಬುಗಳು ಗಂಟಿಕ್ಕಿಕೊಂಡವು.
ಮುಂದುವರಿಯುವುದು…



















