ಭಾಗ 18
ಭರತೇಶ್ ಶೆಟ್ಟಿ, ಎಕ್ಕಾರ್

ಅಲುಗಾಡದೆ ಮೇಲೆತ್ತಿದ ಕೈ ಊರ್ಧ್ವಮುಖವಾಗಿ ಸ್ತಂಭನಗೊಂಡಾಗ ಅನ್ಯ ಮಾರ್ಗವಿಲ್ಲದೆ ಅದೇ ಸ್ಥಿತಿಯಲ್ಲಿ ಶ್ರೀ ಹರಿಯನ್ನು ದೇವರಾಜ ಇಂದ್ರ ಸ್ತುತಿಸಿದ. ಸರ್ವರನ್ನು ಪಾಲಿಸುವ ಶ್ರೀಮನ್ನಾರಾಯಣ ಇಂದ್ರನ ಮೊರೆ ಆಲಿಸಿ ಬಂದಾಗ ಘಟಿಸಿದ ವಿದ್ಯಮಾನಗಳು ತಿಳಿಯಿತು. ಸ್ಥಂಭನೆಗೊಂಡಿರುವ ಇಂದ್ರನ ಕೈಯನ್ನು ಶ್ರೀಹರಿ ನೇವರಿಸಿದಾಗ ಪುನರಪಿ ಚಲನೆ ಹೊಂದಿ ಮೊದಲಿನಂತಾಯಿತು. ತದನಂತರ ಋಷಿ ಪತ್ನಿ ಖ್ಯಾತಿಯಲ್ಲಿ ಪರಿ ಪರಿಯಾಗಿ ರಕ್ಕಸನನ್ನು ಬಿಟ್ಟು ಕೊಡಲು ನಾರಾಯಣನು ಕೇಳಿಕೊಳ್ಳುತ್ತಾನೆ. ಜಗತ್ತಿನ ಪಾಲನೆ ಮಾಡುವಲ್ಲಿ ನನ್ನ ಕರ್ತವ್ಯವೆಸಗಲು ಅವಕಾಶ ಮಾಡಿಕೊಡು ಎಂದು ವಿನಮ್ರತೆಯಿಂದ ನಿವೇದಿಸಿಕೊಳ್ಳುತ್ತಾನೆ. ಇದ್ಯಾವುದಕ್ಕೂ ಜಗ್ಗದೆ ಪ್ರತಿಯಾಡಿದ ಭೃಗುವಲ್ಲಭೆ ನಮ್ಮ ಆಶ್ರಮದಲ್ಲಿ ರಕ್ಷಿತನಾಗಿರುವವನ್ನು ಬಿಟ್ಟು ಕೊಡಲಾಗದು ಎಂದು ನಿರಾಕರಿಸುತ್ತಾಳೆ. ಆಗ ಅನ್ಯ ಮಾರ್ಗವಿಲ್ಲದೆ ಖ್ಯಾತಿದೇವಿ ಶ್ರೀಹರಿ ಸುದರ್ಶನ ಚಕ್ರದಿಂದ ಬಲಿಯಾಗುವಂತಾಯಿತು.
ಆಶ್ರಮಕ್ಕೆ ಮರಳಿ ಬಂದ ಭೃಗು ಮಹರ್ಷಿ ಸತಿಯನ್ನು ಕಾಣದೆ ಹುಡುಕಿದರು. ಆಕೆಯ ಪಾರ್ಥಿವ ಶರೀರ ರುಂಡ ಮುಂಡ ಪ್ರತ್ಯೇಕವಾಗಿ ಧರೆಗುರುಳಿದ ಸ್ಥಿತಿಯಲ್ಲಿದೆ. ಈ ರೀತಿ ತನ್ನ ಧರ್ಮ ಪತ್ನಿಯ ಹತ್ಯೆಗೈದವರು ಯಾರೆಂದು ಜ್ಞಾನ ದೃಷ್ಟಿಯಿಂದ ನೋಡಿದರು. ವಿಷಯ ಅರಿತು ಹರಿಯ ಬಗ್ಗೆ ಅತ್ಯುಗ್ರ ಕೋಪ ತಾಳಿದರು. ಭೃಗು ಕೋಪ ಭಗವಾನ್ ವಿಷ್ಣುವಿಗೆ ಶಾಪವಾಗಿ ಪರಿವರ್ತನೆಗೊಂಡಿತು. “ಹತ್ತು ಜನ್ಮದಲ್ಲಿ ಭೂಮಿಯಲ್ಲಿ ಹುಟ್ಟುವಂತವನಾಗು. ಅದರಲ್ಲೂ ಒಂದು ಜನುಮದಲ್ಲಿ ಪತ್ನಿ ವಿಯೋಗ ಅನುಭವಿಸಿ ನನ್ನ ವೇದನೆ ಏನೆಂದು ಅನುಭವಿಸು” ಎಂದು ಶ್ರೀಮನ್ನಾರಾಯಣನನ್ನೇ ಶಪಿಸಿದರು.
ಯಾರನ್ನಾದರು ಶಪಿಸಿದರೆ ಅಥವಾ ಅನುಗ್ರಹಿಸಿದರೆ ಹೊಂದಿದ ಪುಣ್ಯಬಲ ವಿನಿಯೋಗವಾಗುತ್ತದೆ. ಈಗ ತ್ರಿಮೂರ್ತಿಗಳಿಗೂ ಶಪಿಸಿದ ಭೃಗು ಮಹರ್ಷಿ ಪುಣ್ಯವನ್ನು ಕಳಕೊಂಡಿದ್ದಾರೆ ಅಥವಾ ಪುಣ್ಯಶೂನ್ಯರಾಗಿದ್ದಾರೆ ಎಮ್ನಬಹುದು. ಮತ್ತೆ ಅಂತಹ ದಿವ್ಯ ಬಲ ಸಂಚಯಕ್ಕಾಗಿ ತಪೋ ಮುಖರಾಗಿ ವಿಷ್ಣುವನ್ನು ಕುರಿತಾಗಿ ಸುದೀರ್ಘ ಕಾಲ ಘೋರ ತಪಸ್ಸನ್ನಾಚರಿಸಿ ಒಲಿಸಿಕೊಂಡರು. ಪ್ರಸನ್ನನಾಗಿ ಪ್ರಕಟನಾದ ಶ್ರೀಹರಿಯಲ್ಲಿ ತಾನಿತ್ತ ಶಾಪವನ್ನು ಮುನಿ ವಚನ ಹುಸಿಯಾಗದಂತೆ ನಿಜವಾಗಿಸಲು ಬೇಡಿಕೊಳ್ಳುತ್ತಾರೆ. ದುರುಳರ ವಧೆ – ಇಳೆಯ ಭಾರ ಇಳಿಸುವ ಕೈಂಕರ್ಯಕ್ಕೆ ಈ ಶಾಪ ಅನುಕೂಲವಾಯಿತು ಎಂದು ನುಡಿದ ಹರಿ ಶಾಪ ವಾಕ್ಯ ಸ್ವೀಕರಿಸಿ ಅಂತೆಯೇ ಆಚರಿಸುವ ಅಭಯವನ್ನು ದಯಪಾಲಿಸುತ್ತಾನೆ.
ಭೃಗು ಶಾಪವಾಕ್ಯದಂತೆ ಶ್ರೀ ಹರಿ ಅವತಾರಗಳನ್ನೆತ್ತಿ ಭೂಭಾರ ಹರಣ, ಧರ್ಮ ಪಾಲನೆ ಮಾಡಲಾರಂಭಿಸಿದ. ಮತ್ಸ್ಯಾವತಾರದಿಂದ – ತಮಾಸುರ ವಧೆ, ವರಾಹ ಅವತಾರ- ಹಿರಣ್ಯಾಕ್ಷ ವಧೆ, ನರಸಿಂಹ ಅವತಾರ – ಹಿರಣ್ಯ ಕಶ್ಯಪ ವಧೆ, ಕೂರ್ಮಾವತಾರ – ಸಮುದ್ರ ಮಥನ ಕಾಲ ಮಂದರ ಪರ್ವತೋದ್ಧರಣ, ವಾಮನ ಅವತಾರ – ಬಲಿ ಚಕ್ರವರ್ತಿಯನ್ನು ಪಾತಾಳ ತಳ್ಳುವಿಕೆ, ಪರಶುರಾಮ, (ರಾಮ, ಕೃಷ್ಣ, ( ಮುಂದೆ ಕಲಿಯುಗದಲ್ಲಿ ಬುದ್ಧ, ಕಲ್ಕಿ )ಹೀಗೆ ಹತ್ತು) ಅವತಾರಗಳೆತ್ತುವರೇ ಹೇತುವಾಯಿತು.
ಕಾಲ ಚಕ್ರ ಸಾಗುತ್ತಿರಲು ದಂಬೋದ್ಭವನೆಂಬ ದಾನವ ಬ್ರಹ್ಮ ದೇವನನ್ನು ತಪಸ್ಸಿನ ಮೂಲಕ ಒಲಿಸಿ ವಿಶೇಷ ವರ ಬಲ ಪಡೆದುಕೊಳ್ಳುತ್ತಾನೆ. ಅದ್ಭುತವಾದ ಸಹಸ್ರ ಕವಚಗಳನ್ನು ವರಬಲವಾಗಿ ಹೊಂದುತ್ತಾನೆ. ಎಂತಹ ವಿಕ್ರಮಿಯಾದರೂ ಯುದ್ಧ ಮುಖೇನ ಈತನ ಶರೀರಕ್ಕಂಟಿರುವ ಒಂದು ಕವಚ ಭೇದಿಸಿದರೆ ಆ ಕೂಡಲೆ ಎದುರಾಳಿ ಮೂರ್ಛಿತನಾಗಿ ಬೀಳುವಂತಹ ವರಬಲವದು. ಬಿದ್ದವನು ಎಚ್ಚೆತ್ತುಕೊಳ್ಳುವುದರೊಳಗೆ ಭೇದಿಸಲ್ಪಟ್ಟ ಕವಚ ಪುನರ್ ಸೇರಿಕೊಳ್ಳುತ್ತಿತ್ತು. ಆ ಅವಧಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವವನ್ನು ದಂಬೋದ್ಭವ ವಧಿಸಿ ಜಯ ಸಾಧಿಸುತ್ತಾ ಅಜೇಯನಾಗಿ ಮೆರೆಯುತ್ತಿದ್ದ.
ಇಂತಹ ಸ್ಥಿತಿಯಲ್ಲಿ ಸೋಲರಿಯದ ದಾನವನ ಹರಣ ಮಾಡಿ ಲೋಕ ಪಾಲಿಸುವ ಹೊಣೆ ಶ್ರೀ ಹರಿಗೆ ಅನಿವಾರ್ಯವಾಯಿತು. ಅದಕ್ಕಾಗಿ ತನ್ನ ಛಾಯೆಗೆ ಜೀವ ಕಳೆಯಿತ್ತು “ನರ” ಎಂಬ ಪ್ರತಿರೂಪ ಸೃಜಿಸುತ್ತಾನೆ. ಜೊತೆಯಾಗಿ “ನರ – ನಾರಾಯಣ” ರೆಂಬ ಋಷಿಗಳಾಗಿ ಭುವಿಯಲ್ಲಿ ಅವತರಿಸುತ್ತಾರೆ. ಹಾಗೆ ಅವತರಿಸಿದ ನಾರಾಯಣ ತನ್ನ ಉರು ಅಥವಾ ತೊಡೆಯಿಂದ ಅತಿ ಚೆಲುವೆಯಾದ ಓರ್ವಳನ್ನು ಸೃಷ್ಟಿ ಮಾಡುತ್ತಾನೆ. ಅಮಿತ ಲಾವಣ್ಯವತಿಯಾದ ಅವಳಿಗೆ “ಊರ್ವಶಿ” ಎಂದು ಹೆಸರಿಟ್ಟು ಅನುಗ್ರಹಿಸಿ ದಂಬೋದ್ಭವನ ಬಳಿ ಕಳುಹಿಸುತ್ತಾನೆ. ಲೋಕ ಕಂಟಕನಾಗಿ ಮೆರೆಯುತ್ತಿದ್ದ ದಂಬೋದ್ಭವ ಆಕೆಯ ಚೆಲುವು, ರೂಪರಾಶಿಗೆ ಮನಸೋತು ಸುಖಿಸುತ್ತಾ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಮಾಡುವಲ್ಲಿ ದೇವೋತ್ತಮನ ಉದ್ದೇಶ ಲೋಕ ಕಂಟಕನಾದ ರಕ್ಕಸ ಯಾರನ್ನೂ ಪೀಡಿಸದಂತೆ ಮೋಹಬಲೆಯಲ್ಲಿ ಸಿಲುಕಿಸಿ ದಿಗ್ಭಂದಿಸಿಡುವುದು. ಹೀಗೆ ಮಾಡಿದ ಬಳಿಕ ಸುದೀರ್ಘ ಕಾಲ ನರ ನಾರಾಯಣರು ತಪಸ್ಸನ್ನು ಆಚರಿಸಿ ಕರ್ಮ ಭೂಮಿಯಲ್ಲಿ ವಿಶೇಷ ಬಲ ಸಂಪಾದಿಸಿ ದಂಬೋದ್ಭವನೊಡನೆ ಯುದ್ಧಕ್ಕೆ ಸಿದ್ಧರಾಗಿ ಶಂಖನಾದಗೈಯುತ್ತಾರೆ. ಯುದ್ಧಾರಂಭಗೊಂಡು ‘ನರ’ ರೂಪ ಯುದ್ದ ಮುಖೇನ ಒಂದು ಕವಚ ಭೇದನ ಮಾಡಿ ದಂಭೋದ್ಭವನಿರುವ ವರಬಲದಂತೆ ಮೂರ್ಛಿತನಾಗಿ ಬೀಳುತ್ತಾನೆ. ಆಗ ನರನನ್ನು ರಕ್ಕಸ ವಧಿಸಲು ಬಿಡದೆ ‘ನಾರಾಯಣ ರೂಪ’ ಯುದ್ದ ಮುಂದುವರಿಸಿ ಮತ್ತೊಂದು ಕವಚ ಭೇದನ ಮಾಡುವುದು. ಹೀಗೆ ಆವರ್ತನಗೊಳ್ಳುತ್ತಾ ಸಾಗಿದ ಯುದ್ದದಲ್ಲಿ ಕವಚಗಳು ಭೇದಿಸಲ್ಪಟ್ಟು ಸಹಸ್ರ ಕವಚಗಳಲ್ಲಿ ಕೊನೆಯ ಒಂದು ಕವಚ ಮಾತ್ರ ಉಳಿದಿರುವಾಗ ದಂಬೋದ್ಭವನಿಗೆ ಇವರು ಸಾಮಾನ್ಯರಲ್ಲ. ಹಾಗಾದರೆ ಯಾರಿವರು ಎಂದು ಅರಿವಾಗಿ ಸಮರ ತೊರೆದು ಶರಣಾಗುತ್ತಾನೆ. ನರ ನಾರಾಯಣರಿಗೆ ವಂದಿಸಿ, ಅಸಾಮಾನ್ಯ ಶಕ್ತರು ನೀವಾಗಿದ್ದೀರಿ. ನಿಮ್ಮ ನಿಜ ತಿಳಿಯುವ ಕೌತುಕ ಮನಮಾಡಿದೆ ಎಂದು ಕೇಳುತ್ತಾನೆ. ಆಗ ಶ್ರೀಮನ್ನಾರಾಯಣ ನಿಜರೂಪ ತೋರಿದಾಗ ರಕ್ಕಸನಿಗೆ ಜ್ಞಾನೋದಯವಾಗುತ್ತದೆ. ನನ್ನ ಈ ಅಸುರ ಜನ್ಮ ಕೊನೆಗಾಣಿಸಿ ಪಾಪ ಕೃತ್ಯಗಳಿಂದಲೇ ತುಂಬಿ ಹೋಗಿದೆ. ಮುಂದಣ ಜನ್ಮದಲ್ಲಿ ಮತ್ತೆ ನಾನು ಹುಟ್ಟಿ ಬಂದು ದಾನ, ಧರ್ಮ, ಸತ್ಕರ್ಮಗಳನ್ನು ಮಾಡಿ ಪುಣ್ಯ ಸಂಪಾದಿಸುವಂತಾಗಬೇಕು. ಹಾಗೆ ಬದುಕಿ ಕೊನೆಗೆ ನಿಮ್ಮೀರ್ವರಿಂದಲೇ ನನಗೆ ಮೋಕ್ಷ ಪ್ರಾಪ್ತಿಯಾಗುವಂತೆ ಅನುಗ್ರಹಿಸಿ ಎಂದು ಬೇಡಿ ಕೊಳ್ಳುತ್ತಾನೆ. ಭಕ್ತವತ್ಸಲ ಶ್ರೀ ಹರಿ ಶರಣಾಗತ ರಕ್ಕಸನ ಸದಾಶಯಕ್ಕೆ ಅಸ್ತು ಎಂದು ಕರುಣೆದೋರಿದ. ದಂಬೋದ್ಭವ ಒಂದು ಕವಚ ಸಮೇತ ಮತ್ತೆ ಹುಟ್ಟಿ ಬರುವ ಆಶಯದೊಂದಿಗೆ ಜನ್ಮಾಂತ್ಯಗೊಳಿಸಿದ.
ಮುಂದುವರಿಯುವುದು….



















