28.1 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 193

ಭರತೇಶ್ ಶೆಟ್ಟಿ, ಎಕ್ಕಾರ್

ಚಿನ್ಮಯ ಚಿಂತೆಯನ್ನು ಮಾಡದೆ ಸದಾನಂದ ಚಿತ್ತನಾಗಿ ನಿಂತಿದ್ದಾನೆ. ಭಕ್ತನ ಏಟು ಆತನಿಗೆ ಪೂಜೆಯೆಂಬಂತೆ ಭಾಸವಾಗಿ ಸ್ವೀಕಾರವಾಗಿದೆಯೋ ಎಂಬಂತಿದೆ ಶಿವನ ಪ್ರಸನ್ನತೆ, ರುದ್ರನ ರಮಣೀಯತೆ. ಅರೆ! ಅರ್ಜುನನ ಗಾಂಡೀವವೂ ಶಬರೇಶ್ವರನ ಕೈಯಲ್ಲಿದೆ. ಅದನ್ನು ಊರಿ ನಿಂತು, “ಇನ್ನೇನಿದೆ ನಿನ್ನಲ್ಲಿ? ಆಯಿತೆ ನಿನ್ನ ಹೋರಾಟ – ಹಾರಾಟ” ಎಂದು ಮೂದಲಿಸಿದಾಗ, ಅರ್ಜುನನಿಗೆ ಅಸಹನೀಯ ರೋಷ ಕೋಪ ಉಕ್ಕೇರಿ ಬಂತು. ಅಲ್ಲೇ ಪಕ್ಕದಲ್ಲಿದ್ದ ಮರದ ಗೆಲ್ಲೊಂದನ್ನು ಜಗ್ಗಿ ಮುರಿದು ಕಿರಾತನತ್ತ ನುಗ್ಗಿ ಬೀಸಿದನು. ಅದೂ ಸೆಳೆಯಲ್ಪಟ್ಟಿತು. ಸೆಳೆದ ಸೆಳೆತಕ್ಕೆ ಗೆಲ್ಲನ್ನು ಹಿಡಿದಿದ್ದ ಅರ್ಜುನನೂ ಬೀಸಲ್ಪಟ್ಟು ತುಸು ದೂರ ಬಿದ್ದು ಬಿಟ್ಟನು. ಅಸಹಾಯ ಶೂರನಾಗಿ “ಅಯ್ಯೋ! ಶಿವಾ ಶಿವಾ.. ಶಂಕರಾ… ನಾನು ಬಂದಿರುವುದು ನಿನ್ನ ತಪಸ್ಸಿಗೆ. ಎಲ್ಲಿಂದ ಬಂತೋ ಆ ಹಾಳು ಹಂದಿ. ಈ ಕಾಡ ಕಿರಾತನಲ್ಲಿ ಯಾಕಾದರೋ ವ್ಯಾಜ್ಯ ಬೆಳೆಸಿ ಅಹಂಕಾರಿಯಾಗಿ ನಾನೇ ವಿಕ್ರಮಿ ಎಂಬಂತೆ ವರ್ತಿಸಿದೆನೋ? ಶಂಕರನ ಭಕ್ತನಾಗಿ ತಪೋ ನಿರತನಾಗಿದ್ದ ನಾನು ಕದನ ಕಣಕ್ಕಿಳಿಯುವ ಹೊತ್ತು ದೇವನಾದ ನಿನ್ನನ್ನು ಮರೆತು ಕಾದಾಡಿದ ಫಲವೇ ಈ ಸೋಲು? ಮಹಾದೇವನನ್ನು ಪೂಜಿಸಿ ಮತ್ತೆ ಈ ಕಾಡ ಕಿರಾತನನ್ನು ಎದುರಿಸುವೆ. ಪರಮೇಶ್ವರನ ಇಚ್ಚೆಯಂತೆಯೇ ಮುಂದೇನಾಗಬೇಕೋ ಅದು ಆಗಲಿ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತೇನೆ” ಎಂದು ಮನದಲ್ಲಿ ನಿರ್ಧರಿಸಿದನು. ತುಸು ಕಾಲಾವಕಾಶಕ್ಕಾಗಿ ಶಬರಶಂಕರನಲ್ಲಿ ಕೇಳಿಕೊಂಡನು. ಕಿರು ತೊರೆಗಿಳಿದು ಸ್ನಾನ ಮಾಡಿ ಶುಚಿರ್ಭೂತನಾದನು. ಕಾಡ ಸುಮಗಳನ್ನು ಕೊಯ್ದು ತಂದು, ಮಣ್ಣು ಮರಳುಗಳಿಂದ ಲಿಂಗ ರೂಪ ರಚಿಸಿದನು. ಅದರಲ್ಲಿ ಶಿವ ಪರಮಾತ್ಮನನ್ನು ಆವಾಹಿಸಿ ಶ್ರದ್ದೆಯಿಂದ ಷೋಡಷ ಉಪಚಾರಗೈದನು. ವೇದವ್ಯಾಸ ಉಪದೇಶಿತ ಶಿವ ಮಂತ್ರವನ್ನು ಭಕ್ತಿಯಿಂದ ಉಚ್ಚರಿಸುತ್ತಾ ಮನಸ್ಸನ್ನು ನಿಗ್ರಹಿಸಿ ಧ್ಯಾನಸ್ಥನಾದನು. ತದೇಕಚಿತ್ತದಿಂದ ಭಾವ ವಿಕಾರತೆಗಳಿಲ್ಲದೆ ಪೂಜಿಸುತ್ತಿದ್ದಾನೆ ಅರ್ಜುನ. ನಾನು ನನ್ನಿಂದ ಎಂಬ ಅಹಂಭಾವವೂ ಪೂರ್ಣ ನಾಶವಾಗಿ ಶರಣಾಗತಿಯಿಂದ ಆರ್ತನಾಗಿ ಭಗವಂತಾ ಶಂಭೋ ಶಂಕರ, ಪರಮೇಶ್ವರ ಮಹೇಶ್ವರಾ, ಭಕ್ತವತ್ಸಲಾ ಕಾಪಾಡು ದೇವಾ. ನಿನ್ನ ಭಕ್ತನ ಭಕ್ತಿಯ ಸೇವೆಯನ್ನು ಸ್ವೀಕರಿಸಿ ಅನುಗ್ರಹಿಸು ದೇವಾ…” ಎಂದು ಒಂದೊಂದೇ ಸುಮಗಳನ್ನು ಲಿಂಗಕ್ಕೆ ಅರ್ಪಿಸಿದನು. ಬಳಿಕ ಸಾಷ್ಟಾಂಗ ನಮಿಸಿ “ದೇವಾ ನನ್ನ ಇಷ್ಟಾರ್ಥ ಸಿದ್ಧಿಯಾಗಿ, ಜಯವಾಗುವಂತೆ ಅನುಗ್ರಹಿಸು ದೇವಾ” ಎಂದು ನಮಿಸಿ ಪ್ರಾರ್ಥಿಸಿದನು. ಆ ಬಳಿಕ ಎದ್ದು ಹೋರಾಟಕ್ಕೆ ಸಿದ್ಧನಾಗಿ ಶಬರನತ್ತ ನೋಡಿದರೆ ಲಿಂಗಕ್ಕೆ ಅರ್ಪಿಸಿದ ಸುಮಗಳು ಆತನ ಶಿರವನ್ನಲಂಕರಿಸಿವೆ. ಅರೇ ಏನಾಶ್ಚರ್ಯವಿದು? ಹೀಗೆ ಹೇಗಾಯಿತು? ಎಂಬಂತೆ ಯೋಚನೆಗೆ ಒಳಗಾದ ಪಾರ್ಥ. ಓಹೋ! ಸಂಸ್ಕಾರವಿಲ್ಲದ ಕಾಡ ಕಿರಾತ ನಾನು ದೇವರಿಗೆ ಹೂವನ್ನರ್ಪಿಸಿ ನಮಸ್ಕಾರ ಮಾಡುವ ಸಂದರ್ಭ ಲಿಂಗದಿಂದ ಹೂವನ್ನೆತ್ತಿ ತನ್ನ ತಲೆಯೇರಿಸಿಕೊಂಡಿದ್ದಾನೆ. ಇಲ್ಲಾ ಕಿರಾತ ಕುಲವೂ ಶಿವನನ್ನು ಪೂಜಿಸುವವರೇ! ಹಾಗೆ ಮಾಡಿರಲಿಕ್ಕಿಲ್ಲ. ಸಂದೇಹ – ಗೊಂದಲ ಬೇಡ, ಪರಾಂಬರಿಸಿ ನೋಡುವೆ. ಹೀಗೆ ತೀರ್ಮಾನಿಸಿ ಮೊದಲ ಪೂಜೆಯ ಸಮರ್ಪಣೆಗಳನ್ನು ವಿಸರ್ಜಿಸಿ, ಪುನರಪಿ ಶುದ್ದಗೊಳಿಸಿ ಮತ್ತೆ ಹೊಸ ಹೂವುಗಳನ್ನು ಕೊಯ್ದು ತಂದನು. ಮಹಾ ಮಂತ್ರ ಉಚ್ಚರಿಸುತ್ತಾ ಮಹಾದೇವನನ್ನು ಶುದ್ದ ಭಕ್ತಿಯಿಂದ ಅರ್ಚಿಸಿ ಹೂವನ್ನು ಲಿಂಗಕ್ಕೆ ಅಲಂಕರಿಸಿ ನಮಸ್ಕರಿಸಿದನು.

ತಿರುಗಿ ಕಿರಾತನತ್ತ ನೋಡಿದರೆ ಹೂವು ಮತ್ತೆ ಆತನ ತಲೆಯೇರಿದೆ. ಏನಿದು ವಿಶೇಷ.. ಅರ್ಜು‌ನ ಗೊಂದಲಕ್ಕೊಳಗಾದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page