ಭಾಗ 187
ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೮೮ ಮಹಾಭಾರತ
ದೃಷ್ಟದ್ಯುಮ್ನನ ಮಾತು ಕೇಳಿ ಕೃಷ್ಣ ಮುಗುಳುನಗೆ ಬೀರಿದನು. ಇದನ್ನೆಲ್ಲಾ ಕೇಳುತ್ತಿದ್ದ ಧರ್ಮರಾಯನಿಗೆ ಮಾತ್ರ ಧರ್ಮಸಂಕಟವಾಯಿತು. ಎದ್ದು ಕೃಷ್ಣನ ಬಳಿ ಬಂದು ನಿಂತು ನುಡಿಯತೊಡಗಿದ – “ಕೃಷ್ಣಾ, ನನ್ನಿಂದಾದ ಕೃತ್ಯಕ್ಕೆ ನನ್ನನ್ನೆ ನಿಂದಿಸಲೆ? ದ್ಯೂತವಾಡಿ ಸೋತಿದ್ದೇನೆ. ರಾಜೋಚಿತ ಆಹ್ವಾನವೆಂದು, ದೊಡ್ಡಪ್ಪನ ಕರೆಯೆಂದು ಒಪ್ಪಿ ಹೋಗಿ ಆಡಿದ ಪರಿಣಾಮದಿಂದ ಈ ಸ್ಥಿತಿಗೆ ಕಾರಣನಾಗಿದ್ದೇನೆ. ಈಗ ನಾನು ಒಪ್ಪಿದ ಪಣವನ್ನು ಮುರಿದು ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಅಸತ್ಯ – ಅಧರ್ಮದ ಪಥದಲ್ಲಿ ನಡೆಯುವವರಾಗಿದ್ದರೆ, ವನವಾಸಕ್ಕಾಗಿ ಇಲ್ಲಿಯವರೆಗೆ ಬರುವ ಅಗತ್ಯವೆ ಇರಲಿಲ್ಲ. ಅನ್ಯಾಯವೆಸಗಿದ ಅಧರ್ಮಿಗಳ ದಂಡನೆಗಾಗಿ ಅಲ್ಲಿಯೆ ನಾವೂ ಧರ್ಮಮಾರ್ಗ ತೊರೆದು ಪಾತಕವೆಸಗಿದ ಅವರನ್ನು ಕೊಂದು ಕೆಡಹಿಯಾಗಿರುತ್ತಿತ್ತು. ಸತ್ಯ ವಚನ ನಿಷ್ಠರಾಗಿ ಪ್ರತಿಜ್ಞೆಗೈದು ಬರುವ ಅಗತ್ಯವಿರಲಿಲ್ಲ. ಪಣದಂತೆ ಒಪ್ಪಿ ಬಂದಿರುವ ನಮಗೆ ಹದಿಮೂರು ವರ್ಷ ಪೂರೈಸಿದ ನಂತರವೂ ನೀವೆಲ್ಲ ಜೊತೆಯಾಗಿರಬೇಕು. ಈಗ ಉದ್ಘೋಷಿಸಿದ ವಿಕ್ರಮಗಳು ಆ ಹೊತ್ತಿನಲ್ಲಿ ಸಂದರ್ಭ ಒದಗಿ ಬಂದರೆ ನಿಮ್ಮೆಲ್ಲರಿಂದಲೂ ಪ್ರಕಟವಾಗುವಂತಾಗಲಿ” ಎಂದನು.
ಧರ್ಮರಾಯನ ಧರ್ಮದ ನುಡಿಗೆ ಕೃಷ್ಣ ಸಹಿತವಾಗಿ ಅಲ್ಲಿದ್ದವರೆಲ್ಲರೂ ಸಹಮತ ಸೂಚಿಸಿದರು. ಬಳಿಕ ಕೃಷ್ಣ “ಅಯ್ಯಾ ಧರ್ಮರಾಯ, ನೀನು ಯಮಧರ್ಮರಾಯನ ವರಪುತ್ರ. ಕೌರವಾದಿ ದುಷ್ಟರಿಗೆ ಹದಿಮೂರು ಸಂವತ್ಸರ ಕಾಲ ಆಯಸ್ಸನ್ನು ದಯಪಾಲಿಸಿದ ಹಾಗಾಯಿತು. ನ್ಯಾಯಮಾರ್ಗದಲ್ಲಿಯೆ ನಿಮ್ಮ ಸಾಧನೆಯೂ, ಸಂಪಾದನೆಯೂ ನಡೆಯಲಿ. ಸತ್ಯ ಪಾಲಕರಾದ ನಿಮ್ಮ ಪ್ರತಿಜ್ಞೆಗಳು ಪೂರೈಸಲ್ಪಡಲಿ. ಲೋಕದ ಜನತೆಗೆ ಆದರ್ಶವಾಗಲಿ. ಅಲ್ಲಿಯವರೆಗೆ ನಾವು ಕಾಲದ ಪ್ರತೀಕ್ಷೆಯಲ್ಲಿರುತ್ತೇವೆ” ಎಂದು ಹರಸಿದನು.
ಅಂದಿನ ರಾತ್ರಿ ಭೋಜನ ಸ್ವೀಕರಿಸಿ ಬಂಧುಗಳೆಲ್ಲರೂ ನೆಲದ ಮೇಲೆ ಹುಲ್ಲು ಹಾಸಿ ಪವಡಿಸಿದರು. ಮರು ದಿನ ದೃಷ್ಟದ್ಯುಮ್ನಾದಿಗಳು ಮರಳಿ ಪಾಂಚಾಲದತ್ತ ಹೊರಟರೆ, ಕೃಷ್ಣನು ಅಗತ್ಯ ವಿಚಾರಗಳನ್ನು ಚರ್ಚಿಸಿ ತನ್ನ ಅಭಿಪ್ರಾಯ ಸಲಹೆಗಳನ್ನು ಪಾಂಡವರಿಗೆ ತಿಳಿಸಿ ದ್ವಾರಕೆಗೆ ಹೊರಟು ಹೋದನು. ಕೃಷ್ಣ ನಿರ್ಗಮಿಸಿದ ನಂತರ ಕಾಮ್ಯಕಾವನ ಕಳಾಹೀನವಾದಂತೆ ಭಾಸವಾಗಿ ಬಿಕೋ ಎನ್ನತೊಡಗಿತು. ಪಾಂಡವರಿಗೂ ಕೃಷ್ಣ ಸಖ್ಯವಿಲ್ಲದೆ ಅರೆಕ್ಷಣ ಕಳೆಯುವುದಕ್ಕೂ ಕಷ್ಟ ಎಂಬಷ್ಟರ ಮಟ್ಟಿನ ನಂಟು ಬೆಳೆದು ದುಃಖ ಉಮ್ಮಳಿಸಿ ಬರುತ್ತಿತ್ತು.
ಧರ್ಮರಾಯನು ಧೌಮ್ಯರ ಜೊತೆ ಸುದೀರ್ಘ ಜಿಜ್ಞಾಸೆ ನಿರತನಾಗಿದ್ದನು. ಹಾಗೆ ಬಹಳಷ್ಟು ವಿಚಾರ ಮಂಥನಗೊಳಿಸಿದ ಬಳಿಕ, “ಪೂಜ್ಯರೇ ಇಲ್ಲಿ ಏಕೋ ಮನಸ್ಸಿಗೆ ವ್ಯಾಕುಲತೆ ಆವರಿಸಿದೆ. ಈ ಸ್ಥಳ ತೊರೆದು ಅನ್ಯ ಪ್ರದೇಶ ಸೇರ ಬೇಕು ಅನಿಸುತ್ತಿದೆ. ವನವಾಸವೆಂದರೆ ಒಂದೆಡೆ ಸ್ಥಿರವಾಗಿ ನೆಲೆ ನಿಂತು ಕಾಲಕಳೆಯುವುದು ಯಾಕೊ ಸರಿ ಕಾಣುತ್ತಿಲ್ಲ. ನನಗಾಗುತ್ತಿರುವ ಈ ಭಾವನೆಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು. ಧೌಮ್ಯರಿಗೂ ಇದು ಸರಿ ಎಂಬಂತೆ ಭಾಸವಾಗಿ “ಪ್ರಕೃತಿ ವಿಶೇಷಗಳ ಜೊತೆ ವ್ಯವಹರಿಸುವುದಕ್ಕೂ ಅವಕಾಶ ಆದೀತು ಬೇರೆ ಕಡೆಗೆ ಹೋಗೋಣ” ಎಂದು ಸಮ್ಮತಿ ನೀಡಿದರು.
ಎಲ್ಲರೂ ಹೊರಟು ಸಿದ್ಧರಾದರು. ದ್ರೌಪದಿಯೂ ದಿವ್ಯ ಅಕ್ಷಯ ಪಾತ್ರೆಯ ಜೊತೆ ಸನ್ನದ್ಧಳಾದಳು. ವನ ಸೌಂದರ್ಯ ಸವಿಯುತ್ತಾ, ಝರಿ, ತೊರೆ, ಗಿರಿ ಶಿಖರ, ಖಗ ಮೃಗ ಸಂಕುಲ, ತರು ಲತೆ, ಮರ ಬಳ್ಳಿಗಳ ಕೌತುಕಮಯ ಸೃಷ್ಟಿಯನ್ನು ಆಸ್ವಾದಿಸುತ್ತಾ ಸಾಗಿ ಬಂದು “ದ್ವೈತ ವನ” ಎಂಬ ಕಾಡಿಗೆ ಬಂದು ಸೇರಿದರು. ಅಲ್ಲಿ ಒಂದು ಸರೋವರವೂ ಇತ್ತು. “ದ್ವೈತ ಸರೋವರ” ಎಂಬ ಆ ಪುಷ್ಕರಣಿಯ ತಟ ಪ್ರದೇಶ ವಾಸಯೋಗ್ಯ ಸ್ಥಳ ಎಂದು ನಿರ್ಧರಿಸಿ ಅಲ್ಲೇ ಕುಟೀರ ಆಶ್ರಮಗಳ ವ್ಯವಸ್ಥೆ ಮಾಡಿಕೊಂಡು ವಿಶ್ರಾಂತರಾದರು.
ಪಾಂಡವ ಸಹೋದರರು ದಿನದ ಹೊತ್ತು ವನಸುಮ, ಫಲ, ಗೆಡ್ಡೆ, ಹಂಪಲು ಸಂಗ್ರಹಿಸಿ ತರುವುದು, ಬೇಟೆ ಆಡುವುದು ಹೀಗೆ ಕಾಲ ಕಳೆಯುತ್ತಿದ್ದರು. ಧೌಮ್ಯರು ಸುಂದರ ಆಶ್ರಮ ರಚಿಸಿ ಗುರುಗಳಂತೆ ಪಾಂಡವರಿಗೆ ಧರ್ಮ ಶಿಕ್ಷಣ ಬೋಧಿಸುತ್ತಿದ್ದರು. ಜೀವನದ ದ್ವಿತೀಯಾರ್ಧದಲ್ಲಿ ಮತ್ತೊಮ್ಮೆ ಗುರುಕುಲವಾಸದ ಭಾಗ್ಯ ಪಾಂಡವರಿಗೆ ಒದಗಿದಂತಾಗಿತ್ತು.
ಹೀಗೆ ದಿನಗಳು ಕಳೆಯುತ್ತಿರಲು, ಒಂದು ದಿನ ಭಗವಾನ್ ವೇದವ್ಯಾಸರು ಪಾಂಡವರ ಆಶ್ರಮದಲ್ಲಿ ಪ್ರತ್ಯಕ್ಷರಾದರು.
ಮುಂದುವರಿಯುವುದು…



















