29.7 C
Udupi
Wednesday, April 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 186

ಭರತೇಶ್ ಶೆಟ್ಟಿ ,ಎಕ್ಕರ್

ಧೃತರಾಷ್ಟ್ರನ ಒತ್ತಾಯದ ಅಪ್ಪಣೆಯಂತೆ ಹಸ್ತಿನೆಯಿಂದ ಹೊರಟು ವಿದುರನನ್ನು ಹುಡುಕುತ್ತಾ ಬರುತ್ತಿದ್ದ ಸಂಜಯ ಕಾಮ್ಯಕಾವನದತ್ತ ಆಗಮಿಸಿದನು. ಪಾಂಡವರಿದ್ದಲ್ಲಿ ವಿದುರ ಬಂದು ಸೇರಿರಬಹುದೆಂಬ ಊಹೆ ಆತನದ್ದಾಗಿತ್ತು.

ಸಂಜಯ ಬರುತ್ತಿರುವುದನ್ನು ಕಂಡು ಧರ್ಮರಾಯ ಮುಂದಾಗಿ ಎದುರ್ಗೊಂಡು ಸ್ವಾಗತಿಸಿ, ಹಸ್ತಿನೆಯ ಸರ್ವ ಬಂಧುಗಳ ಕ್ಷೇಮವಾರ್ತೆ ವಿಚಾರಿಸಿ ಕೇಳಿ ತಿಳಿದನು. ಬಳಿಕ ಸಂಜಯನನ್ನು ಸತ್ಕರಿಸಿ ಉಪಚರಿಸಿದನು.

ಸಂಜಯ ವಿದುರನನ್ನು ಕಂಡು ಧೃತರಾಷ್ಟ್ರನ ದೀನ ಸ್ಥಿತಿಯನ್ನೂ, ವೇದನೆ, ಅಸಹಾಯಕ ಕರೆಯನ್ನೂ ವಿವರಿಸಿ ವಿದುರನಿಲ್ಲದೆ ಧೃತರಾಷ್ಟ್ರ ಬಹಳ ನೊಂದಿದ್ದು, ಮರಳಿ ಕರೆ ತರಲು ಆಜ್ಞಾಪಿಸಿ ಕಳುಹಿಸಿರುವ ಸಕಲ ವಿಚಾರಗಳನ್ನು ತಿಳಿಸಿ ಹೇಳಿದನು. ಕೇಳಿದ ವಿದುರನಿಗೂ ನನ್ನಣ್ಣ ದುಡುಕ ಸ್ವಭಾವದವ, ಗೊತ್ತಿದ್ದೂ ನಾನು ಉದ್ವೇಗಕ್ಕೊಳಗಾಗಿ ಅವಸರಪಟ್ಟೆನೆ? ಎಂದೆಣಿಸಿತು. ಧರ್ಮರಾಯನ ಅಭಿಮತವೂ ಹಸ್ತಿನೆಯಲ್ಲಿ ನಾನಿದ್ದು ಪರಿಸ್ಥಿತಿಗಳನ್ನು ಸಂಭಾಳಿಸುವಲ್ಲಿ ಭೀಷ್ಮಾಚಾರ್ಯರಿಗೆ ಸಹಾಯಕನಾಗಿರುವ ಅನಿವಾರ್ಯತೆ ಇದೆ. ಹೀಗೆ ತರ್ಕಿಸಿ ಸಂಜಯನೊಂದಿಗೆ ಹೊರಡಲು ತೀರ್ಮಾನಿಸಿದನು. ಮಧ್ಯಾಹ್ನದ ಭೋಜನ ಸ್ವೀಕರಿಸಿ ಸೂರ್ಯ ನಡು ನೆತ್ತಿಯಿಂದ ವಾಲಿದ ಬಳಿಕ ಪಾಂಡವರಿಗೆ ಶ್ರೇಯಸ್ಸನ್ನು ಹರಸಿ ಸಂಜಯ ಮತ್ತು ವಿದುರ ಜೊತೆಯಾಗಿ ಹಸ್ತಿನೆಯತ್ತ ಹೊರಟರು.

ವಿದುರ ಮರಳಿ ಹಸ್ತಿನೆಗೆ ಸಂಜಯನ ಜೊತೆ ಬರುತ್ತಿರುವ ವಿಚಾರ ತಿಳಿದ ಧೃತರಾಷ್ಟ್ರ ಕಾತರದಿಂದ ಕಾಯುತ್ತಿದ್ದನು. ವಿದುರ ಬಂದೊಡನೆ ಬರಸೆಳೆದು ಬಿಗಿದಪ್ಪಿ “ನಿನ್ನ ಅಣ್ಣನಾದ ನನ್ನ ಮಾತಿನಿಂದ ನಿನಗೆ ಬೇಸರವಾಯಿತೇ? ನಿನ್ನನ್ನು ಬಿಟ್ಟಿರಲಾಗದು ನನಗೆ ಎಂಬ ಸತ್ಯ ಗೊತ್ತಿದ್ದೂ ಬಿಟ್ಟು ಹೋದೆ ಎಂದಾದರೆ ನಾನು ಆ ಮಟ್ಟದ ನೋವನ್ನು ನಿನಗಿತ್ತಿದ್ದೇನೆ. ನನ್ನ ಅಪರಾಧವನ್ನು ಕ್ಷಮಿಸುವೆಯಾ” ಎಂದು ವಿದುರನ ಎರಡೂ ಕೈಗಳನ್ನು ಜೋಡಿಸಿ ಹಿಡಿದು ಅದರ ಮೇಲ್ಮೈಯಲ್ಲಿ ತನ್ನ ಕೈಗಳೆರಡನ್ನು ಕೈ ಮುಗಿಯುವ ಭಂಗಿಯಲ್ಲಿ ಹಿಡಿದುಕೊಂಡು ಬೇಡಿದನು. ವಿದುರನ ಮನ ಕರಗಿತು – ಕೊರಗಿತು… ಛೇ, “ನಾನೂ ವಿವೇಕಶೂನ್ಯನಾಗಿ ದುಡುಕಿದೆ ಅಣ್ಣಾ, ನನ್ನನ್ನು ಕ್ಷಮಿಸಿ ಬಿಡು” ಎಂದು ವಿನಮ್ರನಾಗಿ ಬೇಡಿದನು. ಎಂತಹ ಭ್ರಾತೃಪ್ರೇಮ! ಇಬ್ಬರೂ ಮತ್ತೆ ಆಲಿಂಗಿಸಿ ಬಿಗಿದಪ್ಪಿ ಹಿಡಿದು – “ಆದದ್ದನ್ನು ಮರೆತು ಬಿಡೋಣ. ಪ್ರೀತಿ ವಾತ್ಸಲ್ಯದಿಂದ ಇರೋಣ” ಎಂದು ಹೇಳಿ ಸಮಾಧಾನಗೊಂಡರು.

ಇತ್ತ ದುರ್ಯೋಧನ, ಶಕುನಿಯಾದಿ ಗಡಣಕ್ಕೆ ವಿದುರನ ಪುನರಾಗಮನ ನುಂಗಲಾರದ ಬಿಸಿ ತುಪ್ಪವಾಗಿತ್ತು. ಈಗ ಒಂದು ಹೊಸ ತಲೆನೋವು ಕಾಡಲಾರಂಭಿಸಿತು, ಧೃತರಾಷ್ಟ್ರ ವಿದುರನ ಜೊತೆಗೆ ಅತಿ ಪ್ರೀತಿಯಿಂದ ಇದ್ದಾನೆ. ವಿದುರ ಧರ್ಮರಾಯನಲ್ಲಿಗೆ ಹೋಗಿ ಬಂದವನು. ಏನಾದರು ಹೊಸ ಆಜ್ಞೆ ಮಹಾರಾಜನಿಂದಾದರೆ? ವನವಾಸದಿಂದ ಪಾರು ಮಾಡಲು ವಿದುರನ ತಂತ್ರವೇ ಇದು? ಹೀಗೆಲ್ಲಾ ದುರ್ಯೋಧನ ತರ್ಕಿಸಿ ತಲೆ ಚಚ್ಚಿಕೊಳ್ಳುತ್ತಿದ್ದಾನೆ. ಅಲ್ಲಿದ್ದವರೆಲ್ಲರಿಗೂ ಕಲ್ಪನೆಯಿಂದಲೇ ಒಮ್ಮೆ ಮೈ ಬೆವರಿತು. ಆಗ ಶಕುನಿ ವಿಕಟ ನಗೆ ಬೀರುತ್ತಾ “ದುರ್ಯೋಧನಾ! ನಮ್ಮವರನ್ನಾದರೂ ನಾನು ಪೂರ್ತಿ ನಂಬುವುದಿಲ್ಲ. ಆದರೆ ಧರ್ಮರಾಯನ ಮೇಲೆ ಪೂರ್ಣ ವಿಶ್ವಾಸವಿದೆ. ಒಂದೊಮ್ಮೆಗೆ ರಾಜಾಜ್ಞೆಯಾದರೂ, ಪಣದಂತೆ ಒಪ್ಪಿ ಹೊರಟ ಕಾರ್ಯ ಪೂರೈಸದೆ, ಅರ್ಧದಲ್ಲಿ ಬಂದು ವಚನ ಭ್ರಷ್ಟನಾಗಿ, ನಾಳೆಯ ದಿನ ಲೋಕಾಪವಾದಕ್ಕೆ ಲಾಂಛನವಾಗುವ ಗುಣ ಆತನದ್ದಲ್ಲ. ಹಾಗಾಗಿ ಏನೇ ತಂತ್ರ ಕುತಂತ್ರಗಳಾದರೂ ಹದಿಮೂರು ವರ್ಷ ವನವಾಸಕ್ಕೆ ಹೋದ ಪಾಂಡವರು, ಈ ವಿದುರನಂತೆ ಮತ್ತೆ ಕರೆದರೆಂದು ಬರುವುದಿಲ್ಲ. ಚಿಂತೆ ಬಿಟ್ಟು ಬಿಡಿ” ಎಂದು ಸಮಾಧಾನಿಸಿದನು.

ಆದರೂ ಕೌರವನ ಮನದ ಸಂದೇಹ ಪರಿಹಾರವಾಗದೆ ಉಳಿದಂತಿತ್ತು. ಕರ್ಣ ಅದನ್ನು ಮನಗಂಡು “ಈಗಲೇ ನಾವು ಸೇನಾ ಸಮೇತರಾಗಿ ಹೋಗಿ ಆ ಪಾಂಡವರನ್ನು ಮುಗಿಸಿ ಬಿಡೋಣ” ಎಂದನು. ಶಕುನಿ ಗೊಳ್ಳೆಂದು ನಕ್ಕು, “ಏನು ತಮಾಷೆಯೋ ನಿನ್ನದು? ಸ್ವಯಂವರ ಮಂಟಪದಲ್ಲಿ ಆರ್ಯಾವರ್ತದ ರಾಜ ಮಹಾರಾಜರಿದ್ದರು. ಎಲ್ಲರು ಸಂಘಟಿತರಾಗಿ ಕಾದಾಡಿದರೂ ನಿರಾಯುಧರನಾಗಿದ್ದ ಸ್ನಾತಕ ವೇಷದ ಭೀಮ ಸ್ವಾಗತ ಗೋಪುರದ ಸ್ಥಂಭ ಕಿತ್ತು ನಮ್ಮನ್ನು ಹಿಗ್ಗಾಮುಗ್ಗಾ ಹೊಡೆದೋಡಿಸಿದಾಗ ದಿಕ್ಕೆಟ್ಟು ಓಡದೆ ವಿಧಿಯಿರಲಿಲ್ಲ. ಅಲ್ಲೂ ನಮ್ಮ ಕೈಸಾಗಲಿಲ್ಲ. ಆ ಸಂದರ್ಭ ಅರ್ಜುನ ದ್ರೌಪದಿಯ ರಥವನ್ನು ಬೆಂಬತ್ತಿ ಹೋದ ನೀನು ಹೋರಾಡಿ ಪೆಟ್ಟು ತಿಂದು ಗಾಯಾಳಾಗಿ ಬಂದು ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಾಯಿತು. ನಂತರದಲ್ಲಿ ಮತ್ತೆ ನಿನ್ನ ಇಂತಹುದೆ ವೀರಾವೇಶದ ಅಭಿಪ್ರಾಯ ಕೇಳಿ ಪಾಂಚಾಲವನ್ನು ಸೇನಾ ಸಮೇತರಾಗಿ ಮುತ್ತಿಗೆ ಹಾಕಿ ಅಲ್ಲೂ ನಮಗೆ ದುಸ್ಥಿತಿಯೆ ಪ್ರಾಪ್ತವಾಯಿತು. ಪಾಂಡವರು ಧರ್ಮಪಾಲಕರಾದ ಕಾರಣ ನಮ್ಮ ಜೀವವೊಂದನ್ನು ಉಳಿಸಿ ಕಳುಹಿದ್ದಾರೆ. ಇಷ್ಟು ಅನುಭವವಿದ್ದೂ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ ನಮಗೆ ಪ್ರಜಾ ಜನರ ಮುಂದೆ ತಲೆಯೆತ್ತಿ ನಡೆಯುವ ಅರ್ಹತೆಯೂ ಇಲ್ಲವಾದೀತು. ನಾನು ಹೇಳುವ ವಿಚಾರ ಸ್ಪಷ್ಟವಾಗಿ ಕೇಳಿ. ಪಾಂಡವರು ಕೈಗೆತ್ತಿಕೊಂಡಿರುವ ವನವಾಸ ಪೂರೈಸಿಯೆ ಮರಳುವುದು. ಸದಾ ಅವರ ಚಲನವಲನದ ಮೇಲೆ ಗಮನವಿರಿಸಿ ಅಜ್ಞಾತವಾಸ ಕಾಲದಲ್ಲಿ ಪತ್ತೆ ಹಚ್ಚಿ ಹಿಡಿದು ಮತ್ತೆ ವನವಾಸಕ್ಕೆ ಕಳುಹಿಸಬೇಕು. ಈ ಮಧ್ಯೆ ಸುಮ್ಮನಿರದೆ ನಮ್ಮ ಬಲವರ್ಧನೆಗೊಳಿಸಿ ನಾವೂ ಅವರನ್ನೆದುರಿಸಲು ಸಾಮರ್ಥ್ಯ ಗಳಿಸಿಕೊಳ್ಳಬೇಕು. ಏಕೆಂದರೆ ಶ್ರಮಜೀವಿಗಳೂ, ಧರ್ಮಿಷ್ಟರೂ ಆದ ಪಾಂಡವರು ಪಣ ಪೂರೈಸಿ ಬಂದರೆ ನಂತರ ಯುದ್ದವಾದರೂ ಆದೀತು. ಹಾಗಾಗಿ ಸರ್ವ ಸಾಮರ್ಥ್ಯ ಸಂಪಾದಿಸಿ ಬಲಾಢ್ಯ ಸೇನೆ, ಆಯುಧ, ಯುದ್ಧ ಸಿದ್ಧತೆ ನಾವು ಮಾಡಿಕೊಂಡಿರಬೇಕು. ಆ ವರೆಗೆ ನಿಶ್ಚಿಂತರಾಗಿರಿ” ಎಂದು ಸ್ಪಷ್ಟವಾಗಿ ಎಚ್ಚರಿಸಿ ಶಕುನಿ ಎಲ್ಲರನ್ನೂ ಶಾಂತಗೊಳಿಸಿದನು.

ಪಾಂಡವರ ಜೂಜಾಟ, ಸೋಲು, ವನವಾಸ ಹೀಗೆ ಸಕಲ ಸಮಾಚಾರ ಪರಮಾತ್ಮನಿಗೆ ವೇದ್ಯವಾಗಿತ್ತು. ಆದರೆ ಪಾಂಡವರು ವನವಾಸಕ್ಕೆ ತೆರಳುವಾಗ ಸುಭದ್ರೆ ಮತ್ತು ಅಭಿಮನ್ಯುವನ್ನು ತವರು ಮನೆ ದ್ವಾರಕೆಗೆ ಕಳುಹಿಸಿದ್ದರು. ಹೀಗೆ ಮರಳಿ ತಾಯಿ ಮನೆಗೆ ಬಂದ ಸುಭದ್ರೆ ಅಭಿಮನ್ಯುವಿನಿಂದ ಶ್ರೀಕೃಷ್ಣ ಸಕಲ ವಿಚಾರಗಳನ್ನು ಮತ್ತೊಮ್ಮೆ ಸವಿವರವಾಗಿ ಕೇಳಿ ತಿಳಿದನು. ಸುಭದ್ರೆಗೆ ಸಾಂತ್ವಾನ ಹೇಳುತ್ತಾ “ತಂಗಿ, ವ್ಯಥೆ ಪಡಬೇಡ. ಕಾಮ್ಯಕಾವನದಲ್ಲಿರುವ ಪಾಂಡವರನ್ನು ಕಂಡು ಮಾತನಾಡಿಸುವೆ, ಧೈರ್ಯ – ಸ್ಥೈರ್ಯ ತುಂಬಿ ಹರಸಿ ಬರುತ್ತೇನೆ” ಎಂದು ಹೇಳಿ ದ್ವಾರಕೆಯಿಂದ ಹೊರಟನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page