ಭರತೇಶ್ ಶೆಟ್ಟಿ,ಎಕ್ಕಾರ್
ಭಾಗ 184

ಕಿಮ್ಮೀರನಿಗೆ ನರ ರಕ್ತದ ವಾಸನೆ ಮೂಗಿಗೆ ಬಡಿಯುತ್ತಿರುವುದರಿಂದ ಮಹಾದಾನಂದವಾಗುತ್ತಿದೆ. ಮನುಷ್ಯರ ಹಸಿ ಮಾಂಸದ ಆಸೆ ಉಲ್ಲಾಸವನ್ನು ಇಮ್ಮಡಿಗೊಳಿಸುತ್ತಿದೆ. ಸದ್ದು ಮಾಡಿದರೆ ಎಚ್ಚರಗೊಂಡು ಓಡಿದರೆ ಮತ್ತೆ ಕೆಲಸ ಕಷ್ಟವಾದೀತೆಂದು ಮೆತ್ತನೆ ಹೆಜ್ಜೆಗಳನ್ನಿಕ್ಕುತ್ತಾ ಬರುವ ರಕ್ಕಸನ ನಡಿಗೆಯ ಸಪ್ಪಳ ಭೀಮನಿಗೆ ಕೇಳಿಸಿತು. ಏಕಾಗ್ರತೆಯಿಂದ ಕಿವಿಗೊಟ್ಟು ಕೇಳಿದ ಭೀಮ ಗ್ರಹಿಸಿ ಎದ್ದು ಹೊರಬಂದು ನಿಂತನು. ಮತ್ತಷ್ಟು ಏಕಾಗ್ರ ಚಿತ್ತದಿಂದ ಗಮನಿಸುತ್ತಾ ತುಸು ದೂರ ಬಂದಾಗ ಬರುತ್ತಿರುವ ರಕ್ಕಸನಿಗೆ ಇದಿರಾದನು. ಎದುರಿಗೆ ಕಾಣ ಸಿಕ್ಕಿದ ಮನುಷ್ಯನನ್ನು ಹಿಡಿದು ಮುಕ್ಕಲು ಧುಮುಕಿದ ಕಿಮ್ಮೀರನನ್ನು ದೂಡಿಕೊಂಡು ಹತ್ತಾರು ಹೆಜ್ಜೆಗಳ ಅಂತರದಷ್ಟು ಸಹಸ್ರ ಗಜ ತ್ರಾಣಿ ಭೀಮ ಕ್ರಮಿಸಿದನು. ಆಗ ಅವರೊಳಗೆ ಹೊಡೆದಾಟ ಆರಂಭವಾಯಿತು. ರಕ್ಕಸನ ರಟ್ಟೆಗಳಲ್ಲಿ ತ್ರಾಣವಿತ್ತು ವಿನಃ ಯುದ್ದ ಕೌಶಲವಿರಲಿಲ್ಲ. ಭೀಮನೋ ಮಲ್ಲಯುದ್ದ ಕುಶಲಿಗ. ಒಂದೆರಡು ಪಟ್ಟುಗಳಲ್ಲಿ ನಿಯಂತ್ರಣ ಸಾಧಿಸಿ ತನ್ನ ಹಿಡಿತಕ್ಕೆ ರಕ್ಕಸನನ್ನು ಸೆಳೆದು ಘಾಸಿ ಗೊಳಿಸಿದನು. ಆಯಕಟ್ಟಿನ ಹೊಡೆತಗಳಿಂದ ಸಂದು ಸಂದುಗಳ ಕೀಲು ತಪ್ಪಿಸಿ ಎದ್ದು ನಿಲ್ಲದಂತೆ ನೆಲದಲ್ಲಿ ಹೊರಳಾಡುವಂತೆ ಮಾಡಿದನು. ನಂತರ ಹೊಟ್ಟೆ – ತಲೆಗಳಿಗೆ ಮಾರಣಾಂತಿಕ ಗುದ್ದುಗಳನ್ನಿಕ್ಕಿದ ರಭಸಕ್ಕೆ ರಕ್ತ ಕಾರುವಂತೆ ಮಾಡಿದನು. ರಾಕ್ಷಸ ಕಿಮ್ಮೀರ ಸುಲಲಿತವಾಗಿ ಭೀಮನಿಂದ ಸೋಲಿಸಲ್ಪಟ್ಟು, ಘಾತಗಳನ್ನು ಸಹಿಸಲಾಗದೆ ಕಿರುಚುತ್ತಾ ಹತಪ್ರಾಣನಾದನು. ರಕ್ಕಸನ ವಿಕಾರ ಕಿರುಚಾಟಕ್ಕೆ ಪಾಂಡವರಿಗೆ ಎಚ್ಚರವಾಗಿ ಓಡಿ ಬಂದಾಗ ಭೀಮ ಮೈಕೊಡವುತ್ತಾ ರಕ್ಕಸನ ಹೆಣದ ಬಳಿ ನಿಂತಿದ್ದಾನೆ. ಬಂದ ಆಪತ್ತು ದೂರವಾಯಿತೆಂದು ಎಲ್ಲರೂ ನಿರಾಳರಾದರು. ಮರಳಿ ಪರ್ಣಕುಟೀರ ಸೇರಿ ವಿಶ್ರಾಂತರಾದರು.
ಮರುದಿನ ಹೀಗೆಯೆ ಎಲ್ಲರೂ ಸೇರಿ ಜೊತೆಗಿರಬೇಕಾದರೆ ಅಲ್ಲಿಗೆ ವಿದುರ ಬಂದು ತಲುಪಿದನು. ಧರ್ಮರಾಯನು ಎದ್ದು ಮುನ್ನಡೆದು ಬಂದು ಸ್ವಾಗತಿಸಿ ಕರೆತಂದು – ಯಥೋಚಿತ ಸತ್ಕಾರ ಮಾಡಿದನು. ಬಳಿಕ ಬಂದ ವಿಷಯ ವೃತ್ತಾಂತಗಳನ್ನೆಲ್ಲಾ ಸವಿವರವಾಗಿ ಕೇಳಿ ದುಃಖಕ್ಕೊಳಗಾದನು. ನಂತರ ಏಕಾಂತದಲ್ಲಿ ಕುಳಿತು ಸಂಧಿಗ್ದ ಪರಿಸ್ಥಿತಿಯ ಧರ್ಮಸೂಕ್ಷ್ಮಗಳನ್ನು ಚರ್ಚಿಸಿದರು. ಧರ್ಮರಾಯನು ವಿವೇಚಿಸಿ ಹೇಳತೊಡಗಿದನು “ಅಯ್ಯಾ ವಿದುರ ಮಹಾಶಯರೆ, ನಮ್ಮ ಪಿತನಾದ ಪಾಂಡು ಚಕ್ರವರ್ತಿಯವರು ನಮ್ಮ ಬಾಲ್ಯ ಪ್ರಾಯದಲ್ಲೇ ಇಹಲೋಕ ತೊರೆದ ಕಾರಣ ಪಿತೃ ಸೇವೆಯಿಂದ ವಂಚಿತರಾಗಿದ್ದೇವೆ. ಆ ಬಳಿಕ ದೊಡ್ಡಪ್ಪನೆ ಪಿತೃ ಸ್ಥಾನಕ್ಕೆ ಯೋಗ್ಯತೆ ಪಡೆದರೂ ನಾವು ಒಂದಲ್ಲ ಒಂದು ಕಾರಣದಿಂದ ಅವರ ಸೇವೆ ಮಾಡುವ ಭಾಗ್ಯದಿಂದ ವಂಚಿತರೆ ಆಗಿದ್ದೇವೆ. ನಮ್ಮ ದೊಡ್ಡಪ್ಪ ವೃದ್ದನೂ – ಅಂಧನೂ ಆಗಿದ್ದಾರೆ. ಮೇಲಾಗಿ ಅವರ ಮಕ್ಕಳು ಅವಿವೇಕಿಗಳೂ ಅಧರ್ಮಿಗಳೂ ಆಗಿದ್ದಾರೆ. ಅವರ ಮಕ್ಕಳ ಕೃತ್ಯಗಳನ್ನು ಅವಲೋಕಿಸಿದಾಗ ಛಲಭಾವ ಒಮ್ಮೆಗೆ ನಮ್ಮಲ್ಲೂ ಮೂಡುತ್ತದೆ. ದುಷ್ಟರಾದ ಅವರು ಮಾಡಿದ ಕರ್ಮ ಅನುಭವಿಸಲಿ ಎಂಬಂತೆ ನನಗೂ ಕೆಲವೊಮ್ಮೆ ಭಾವನೆ ಮೂಡುತ್ತದೆ. ಆದರೆ ಛಲ – ಬಲಗಳ ಹೊಯ್ದಾಟದಲ್ಲಿ ಬಂಧುತ್ವ ನಾಶವಾಗಬಾರದು. ಬಾಂಧವ್ಯದಲ್ಲಿ ಹಿರಿತನವೂ ಪ್ರಧಾನವೆ ಆಗುತ್ತದೆ. ಹಾಗಾಗಿ ನೀವು ನಮ್ಮ ಆಶಯದಂತೆ ಧೃತರಾಷ್ಟ್ರ ಮಹಾರಾಜರ ಜೊತೆಗಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಾ, ಸಾಮ್ರಾಜ್ಯವನ್ನು ಪರಿವೃತ ದುಷ್ಟಕೂಟದ ಸ್ವಾರ್ಥದಿಂದ ರಕ್ಷಿಸುತ್ತಾ ಬಂದರೆ, ದೊಡ್ಡಪ್ಪನ ಸೇವೆ ಮಾಡುತ್ತಾ ಸಹಕರಿಸಿದರೆ ನಮ್ಮ ಪಾಲಿನ ಪಿತೃ ಋಣದ ಭಾರವೂ ತುಸು ಕಡಿಮೆಯಾಗುತ್ತದೆ. ಅದಕ್ಕೂ ಹೊರತಾಗಿ ಸೋದರರಾದ ನೀವೀರ್ವರು ಅನ್ಯೋನ್ಯರು. ಒಂದೊಮ್ಮೆಗೆ ನಿಮ್ಮ ಮೇಲೆ ದೊಡ್ಡಪ್ಪ ಮುನಿಸಿಕೊಂಡಿದ್ದರೂ, ಅವರಿಗೆ ನೀವಿಲ್ಲದ ಅರಮನೆ ಹಿತವೆಣಿಸದು” ಎಂದು ವಿಶ್ಲೇಷಿಸುತ್ತಾ ವಿವರಿದನು ಧರ್ಮರಾಯ.
ವಿದುರನಿಗೂ ಧರ್ಮರಾಯನ ವಿಶಾಲ ಹೃದಯ, ಧರ್ಮಬುದ್ದಿ ಸತ್ಯವೆಂದು ಅರಿವಾಗಿ ಒಪ್ಪುವಂತಾಯಿತು. ಸಂಬಂಧದಲ್ಲಿ ಅಣ್ಣ, ಹೊಣೆಗಾರಿಕೆಯಲ್ಲಿ ಮಹಾರಾಜನೂ ಆದ ಧೃತರಾಷ್ಟ್ರ ದುಡುಕು ಸ್ವಭಾವದವನು. ಮುಂಗೋಪಿಯಾದ ಆತ ಕ್ರೋಧಾವೇಶಕ್ಕೊಳಗಾಗಿ ಹೀಗೆ ವರ್ತಿಸಿದ್ದರೂ, ಈಗ ನಾನಿಲ್ಲದೆ ಒಂಟಿತನ ಕಾಡುತ್ತಿರಬಹುದು. ನೊಂದುಕೊಂಡಿರಬಹುದು ಎಂಬಂತೆ ಯೋಚಿಸತೊಡಗಿದ. ತಾನೂ ಶಾಂತಚಿತ್ತನಾಗಿ ವಿವೇಚಿಸದೆ ದುಡುಕಿ ಅವಸರಪಟ್ಟೆ ಎಂಬಂತೆ ಮನದೊಳಗೆ ಗೊಂದಲವಾಗಿ ತರ್ಕಿಸತೊಡಗಿದನು.
ಹೀಗೆ ಯೋಚನಾ ಮಗ್ನನಾಗಿರುವಾಗ ಹಸ್ತಿನೆಯಿಂದ ಸಂಜಯ ಬರುತ್ತಿರುವ ಸುದ್ದಿ ಕಾಮ್ಯಕಾವನಕ್ಕೆ ಮುಟ್ಟಿತು.
ಮುಂದುವರಿಯುವುದು…













