
ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮಳೆ ಬಂದಾಗ ಆ ನೀರನ್ನು ಮತ್ತೆ ಆಕಾಶಕ್ಕೆ ಕಳಿಸುವುದಕ್ಕೆ ಆಗುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮಳೆ ಹಾನಿ ವಿಚಾರವಾಗಿ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಇದು ಅನಿರೀಕ್ಷಿತ ಮಳೆ. ಯಾವತ್ತಾದರೂ ಅಕ್ಟೋಬರ್ ತಿಂಗಳಲ್ಲಿ ಈ ರೀತಿ ಮಳೆ ಬಿದ್ದದ್ದು ನಾವು ನೋಡಿದ್ದೀವಾ? ಮಳೆ ಬರುತ್ತಿದೆ ಎದುರಿಸಬೇಕು. ಮಳೆ ಬಂದಾಗ ಆ ನೀರನ್ನು ಮತ್ತೆ ಆಕಾಶಕ್ಕೆ ಕಳಿಸುವುದಕ್ಕೆ ಆಗುವುದಿಲ್ಲ. ಬಿದ್ದ ಮಳೆ ನೀರು ಭೂಮಿ ಮೇಲೆಯೇ ಹರಿದು ಹೋಗಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.
ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ಪ್ರಕರಣ ಬಗ್ಗೆ ಪ್ರಚಾರ ಮಾಡಬಹುದು. ನಾವು ಕೂಡ ಅದರ ಬಗ್ಗೆ ಏನು ನಡೆದಿದೆ ಅದನ್ನು ಹೇಳುತ್ತೇವೆ. ಅದು ಅಧಿಕಾರಿಗಳ ಮಟ್ಟದಲ್ಲಿ ಆಯಿತಾ? ರಾಜಕಾರಣಿಗಳ ಮಟ್ಟದಲ್ಲಿ ಆಯಿತಾ? ಎಂದು ಹೇಳುತ್ತೇವೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ಇದನ್ನು ನಾವು ಚುನಾವಣಾ ಪ್ರಚಾರ ವೇಳೆ ತಿಳಿಸುತ್ತೇವೆ. ದದ್ದಲ್ ಅವರನ್ನು ವಿಚಾರಣೆಗೆ ಕರೆದಿದ್ದರು. ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ ಎಂದು ಹೇಳಿದರು.































































































































