
ಮಡಿಕೇರಿ: ವಾರವಿಡೀ ಕೆಲಸದ ಒತ್ತಡದಲ್ಲಿರುವ ಜನರು ವಾರಾಂತ್ಯ ಬಂದರೆ ಗೆಳೆಯರು, ಕುಟುಂಬಸ್ಥರೊಂದಿಗೆ ಮಜಾ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಮಡಿಕೇರಿಗೆ ಆಗಮಿಸ್ತಾರೆ. ಹೀಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತಂದು ನೀರು ಕುಡಿದು ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಿದ್ದು ಈ ಬಾಟಲಿಗಳನ್ನು ಮಡಿಕೇರಿ ನಗರಸಭೆ ಸಿಬ್ಬಂದಿ ಸಂಗ್ರಹಿಸಿ ವಿಲೇವಾರಿ ಮಾಡಲು ಹರಸಾಹಸ ಮಾಡಬೇಕಾಗುತ್ತದೆ.
ಸದ್ಯ ಮಡಿಕೇರಿಯಲ್ಲಿ ಕಸ ವೈಜ್ಞಾನಿಕವಾಗಿ ವಿಲೇವಾರಿ ಆಗದ ಕಾರಣ ಸಹಸ್ರಾರು ಕೆಜಿ ಪ್ಲಾಸ್ಟಿಕ್ ಬಾಟಲಿಗಳನ್ನ ತೆಗೆದುಕೊಂಡು ಹೋಗಿ ಬೆಟ್ಟದ ಮೇಲೆ ಡಂಪ್ ಮಾಡಲಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಬಾಟಲ್ ಗಳು ಟನ್ಗಟ್ಟಲೆ ಸಂಗ್ರಹವಾಗಿದ್ದು ಈ ಸಮಸ್ಯೆಯಿಂದ ಮುಕ್ತವಾಗಲು ಇದೀಗ ಮಡಿಕೇರಿ ನಗರಸಭೆ ಮಡಿಕೇರಿ ನಗರದಲ್ಲಿ ಎರಡು ಲೀಟರ್ವರೆಗಿನ ಪ್ಲಾಸ್ಟಿಕ ವಾಟರ್ ಬಾಟಲಿಗಳ ಮಾರಾಟವನ್ನ ನಿಷೇಧಿಸಿ ಆದೇಶಿಸಿದೆ.
ಈ ಸಂಬಂಧ ನಗರದ ವರ್ತಕರು, ಹೋಮ್ ಸ್ಟೇ ರೆಸಾರ್ಟ್ ಮಾಲೀಕರು ಹಾಗೂ ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಮೀಟಿಂಗ್ ಮಾಡಿದ್ದು, ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಮಾಡದಂತೆ ಮನವೊಲಿಕೆ ಮಾಡಿದೆ. ಮಡಿಕೇರಿ ನಗರದಲ್ಲಿ ಈಗಾಗಲೇ ಮೂರು ಕಡೆ ಜಲ ಶುದ್ಧೀಕರಣ ಘಟಕ ಇದ್ದು ಅಲ್ಲಿ 1 ರೂ. ಹಾಗೂ 5 ರೂ. ನಾಣ್ಯ ಹಾಕಿದರೆ ಬೇಕಾದಷ್ಟು ಕುಡಿಯುವ ನೀರು ದೊರಯುತ್ತದೆ. ಅದರ ಜೊತೆಗೆ ನಗರದ ಹಲವು ಕಡೆ ವಾಟರ್ ಫಿಲ್ಟರ್ಗಳನ್ನೂ ಅಳವಡಿಸಲು ಕೂಡ ಯೋಜನೆ ಸಿದ್ಧವಾಗಿದೆ. ನಗರದಲ್ಲಿ ಕಸದ ಹೊರೆ ತಗ್ಗಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.
ಮಡಿಕೇರಿ ನಗರಕ್ಕೆ ಬರುವ ಪ್ರವಾಸಿಗರು ಕೂಡ ಪ್ಲಾಸ್ಟಿಕ್ ಬಾಟಲಿ ತರದಂತೆ, ನಗರದ ಪ್ರವೇಶದಲ್ಲಿ ಮತ್ತು ನಗರದ ಒಳಗಡೆ ಸೂಚನಾ ಫಲಕ ಅಳವಡಿಸಲಾಗಿದೆ. ಸದ್ಯ ಈ ಯೋಜನೆಯನ್ನ ಪ್ರಾಯೋಗಿಕವಾಗಿ ಮಡಿಕೇರಿ ನಗರದಲ್ಲಿ ಮಾತ್ರ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯನ್ನು ಪ್ಲಾಸ್ಟಿಕ್ ಬಾಟಲಿ ಮುಕ್ತ ಮಾಡುವ ಸಂಬಂಧ ಜಿಲ್ಲಾಡಳಿತ ಯೋಚಿಸುತ್ತಿದೆ.





















