
ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರಾಯಚೂರಿನಲ್ಲಿ ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ವಿಚಾರವಾಗಿ ಮಾತನಾಡಿದ ವೇಳೆ ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆ ನಡೆಯುತ್ತಿತ್ತು. ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶದಲ್ಲಿ ಹೋಗಿದೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ ಪ್ರಕರಣದಂತ ತೊಂದರೆಗಳು ಆಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಯಾ ಪ್ರಾಂತದ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ಸನಾತನ ಧರ್ಮ ಪರಿರಕ್ಷಣ ಸಂಬಂಧ ಯೋಜನೆಯನ್ನ ನಾವು ಕೂಡ ಬೆಂಬಲಿಸುತ್ತೇವೆ. ನಮ್ಮ ಊರಿನ ಆಚಾರ-ಸಂಪ್ರದಾಯ ಬಗ್ಗೆ ಬೇರೆ ಯಾರೋ ಬಂದು ಹೇಳುವುದಲ್ಲಾ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ವಿದ್ವಾಂಸರು, ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು ಎಂದು ಹೇಳಿದರು.













