ಕಥೆ (ಭಾಗ- 29)
ಚೇತನ್ ವರ್ಕಾಡಿ

ಮಧು ಕೆಮ್ಮುತ್ತಿದ್ದ. ನೀರಿನ ಜಗ್ಗು ಕೆಳಗಡೆ ಬಿದ್ದು ನೀರು ಚೆಲ್ಲಿ ಹೋಗಿತ್ತು. ಗಂಟಲು ಒಣಗಿ ನೀರಿಗಾಗಿ ಹುಡುಕಾಡುತ್ತಿದ್ದ.ಕಣ್ಣುಗಳು ಅತ್ತಿಂದ ಇತ್ತ ಯಾರು ಬರುತ್ತಾರೋ ಎಂದು ಹುಡುಕಾಡುತ್ತಿರುವಾಗಲೆ ಮಂಗಳ ಬಂದು ರೂಮಿಗೆ ಮುಟ್ಟಿದ್ದಳು.ಮಧುವಿನ ಸಂಕಟವನ್ನರಿತ ಮಂಗಳ ಅಡುಗೆ ಮನೆಯತ್ತ ಓಡಿ ಬೇಗ ಒಂದು ಲೋಟ ನೀರು ತಂದವಳೆ ಹಾಸಿಗೆಯಲ್ಲಿ ಕುಳಿತು ಮಧುವಿನ ತಲೆಯನ್ನು ಮಡಿಲಲ್ಲಿರಿಸಿ ನಿಧಾನವಾಗಿ ನೀರು ಕುಡಿಸಿದಳು.ಹೋದ ಜೀವ ಬಂದಂತೆ,ಒಣಗಿದ ಗಂಟಲು ಸುಧಾರಿಸಿಕೊಂಡು ಕೆಮ್ಮು ಕೂಡ ನಿಂತುಹೋಯಿತು.ಮಂಗಳಳ ಕಣ್ಣು ಮಧುವನ್ನೇ ನೋಡತೊಡಗಿತು.ಅದೇನೋ ಮಾತನಾಡುವಂತಿತ್ತು ಆದರೆ ಏನೆಂದು ತಿಳಿಯೋಣವೆಂದರೆ ಮಧುವೇ ಮೌನಿಯಾಗಿದ್ದ.ಸಹಜ ಸ್ಥಿತಿಗೆ ಬಂದ ಮಧುವನ್ನು ಸರಿಯಾಗಿ ಮಲಗಿಸಿ ಇನ್ನೇನು ಅಡುಗೆ ಕೆಲಸದತ್ತ ಮುಖಮಾಡಲು ಕುಳಿತ ಜಾಗದಿಂದ ತಿರುಗಿ ಏಳಬೇಕಾದರೆ ಮಧುವಿನ ಕೈಯೊಂದು ಮಂಗಳಳ ಕೈಯನ್ನು ಗಟ್ಟಿಯಾಗಿ ಹಿಡಿದಿತ್ತು.ಇದ್ಯಾವುರ ಯೋಚನೆಯೆ ಇಲ್ಲದೆ ಮಧು ಆ ಕಡೆ ತಿರುಗಿ ನಿದ್ರೆಗೆ ಜಾರಿದ.ಮಂಗಳಳಿಗೆ ಒಂದು ಕಡೆ ಆಶ್ಚರ್ಯವಾದರೆ ಇನ್ನೊಂದು ಕಡೆಯಿಂದ ಹೆದರಿಕೆಯೂ ಹೆಚ್ಚುತ್ತಿತ್ತು.ಹೌದು ಯಾವುದೇ ಚಲನವಲನವೇ ಇಲ್ಲದ ಮಧು ಅವನಿಗೆ ತಿಳಿಯದಂತೆ ನನ್ನ ಕೈಗಳನ್ನಾದರೂ ಯಾಕೆ ಹಿಡಿದಿರಬಹುದು!ಅಲ್ಲದೆ ನಾನೊಬ್ಬಳು ಕೆಲಸದಾಕೆ ಈ ಮನೆಯ ಹಿರಿಯರು ಒಂದು ವೇಳೆ ಈ ಕಡೆ ಬಂದು ನೋಡಿದರೆ ಏನೇನೋ ತಪ್ಪು ತಿಳಿಯುವರೋ ಎಂದು ಮನದಲ್ಲಿಯೇ ಆಲೋಚಿಸಿದವಳು!ಹಿಡಿದ ಕೈಯನ್ನು ಬಿಡಿಸಿ ,ಬಿದ್ದಿದ್ದ ಜಗ್ಗನ್ನು ಮೇಲಕ್ಕೆತ್ತಿ ಚೆಲ್ಲಿದ ನೀರನ್ನು ಒರಸಿ ಅಲ್ಲಿಂದ ತನ್ನ ಕೆಲಸದ ಕಡೆಗೆ ಗಮನ ಹರಿಸಿದಳು..
ಗಿಡಕ್ಕೆ ನೀರು ಹಾಕುತ್ತಿದ್ದ ಸೋಮಶೇಖರರಾಯರು ತನ್ನ ಕೆಲಸ ಮುಗಿಸಿ ಒಳಬಂದರು.ಹೊರಗಡೆ ದೇವಸ್ಥಾನಕ್ಕೆಂದು ಹೋಗಿದ್ದ ಸುಗಂಧಿಯೂ ತನ್ನ ಪೂಜಾಸೇವೆಯನ್ನು ಭಗವಂತನಿಗೆ ಸಮರ್ಪಿಸಿ ಹಿಂತಿರುಗಿ ಮನೆಗೆ ಮುಟ್ಟಿದಳು.
ಮಂಗಳ ಮಧುವಿನಲ್ಲಾದ ಸಣ್ಣ ಬದಲಾವಣೆಗೆ ಕಾರಣ ಏನಿರಬಹುದು ಅನ್ನೋದನ್ನ ಹುಡುಕತೊಡಗಿದಳು!ಆದರೆ ಅವಳ ಪ್ರಶ್ನೆಗೆ ಉತ್ತರ ಸಿಗುವಂತಿರಲಿಲ್ಲ.ಯಾರಲ್ಲೂ ಇದರ ಬಗ್ಗೆ ಚರ್ಚಿಸದ ಸುಮ್ಮನಾಗಿ ಬಿಟ್ಟಳು…
ಡಾ! ಪ್ರತಾಪ್ ಮನೋರೋಗದಲ್ಲೇ ಫೇಮಸ್ ಡಾಕ್ಟರ್ ಆಗಿ ಅಮೇರಿಕದಲ್ಲಿ ತನ್ನ ವೃತ್ತಿ ಜೀವನ ನಡೆಸುತ್ತಿದ್ದ.ಮಿಥುನ್‌ನ ಆಪ್ತ ಗೆಳೆಯನೂ ಆಗಿದ್ದ. ತನ್ನ ಗೆಳೆಯನ ಬಗ್ಗೆ ಮಿಥುನ್ ಪ್ರತಾಪ್‌ನ ಬಳಿ ಹೇಳಿಕೊಂಡಾಗ ಊರಿಗೆ ಬಂದಾಗ ಖಂಡಿತ ನೋಡಲು ಬರುತ್ತೇನೆ ಅಂದಿದ್ದ. ಆದಿನ ಬೇಗ ಬರಲಿ ಎಂದು ಕಾದು ಕುಳಿತಿದ್ದ ಮಿಥುನ್‌ಗೆ ಆ ದಿನ ಪ್ರತಾಪ್‌ನಿಂದ ಬಂದ ಉತ್ತರ….?
(ಮುಂದುವರಿಯುವುದು)













