ಕಥೆ (ಭಾಗ- 27)
ಚೇತನ್ ವರ್ಕಾಡಿ

ಮಧುವಿನ ತಾಯಿ ದೂರದಿಂದಲೇ ಇಬ್ಬರನ್ನು ಕಂಡವಳೆ ನಿಲ್ಲೋಕೆ ಹೇಳಿದಳು.ಮಿಥುನ್ಗೆ ಆಶ್ಚರ್ಯ ಆಂಟಿ ಈ ತರ ಯಾಕೆ ಹೇಳಿರಬಹುದು!ಮಂಗಳ ಈ ಮನೆಗೆ ಕೆಲಸಕ್ಕೆ ಸರಿಹೊಂದುವ ಹುಡುಗಿಯಲ್ಲವೆ!ಈ ರೀತಿ ಆಲೋಚಿಸುತ್ತಿರಬೇಕಾದರೆ ಬಲಗಾಲಿಟ್ಟು ಒಳಗಡೆ ಬಾ ಮಗಳೆ, ನಿನ್ನ ಕಾಲ್ಗುಣದಿಂದಾದರೂ ನನ್ನ ಮಗ ಚೇತರಿಸಿಕೊಳ್ಳಲಿ ಎಂದು ಹಳ್ಳಿಹುಡುಗಿ ಮಂಗಳಳನ್ನು ಪ್ರೀತಿಯಿಂದ ಬರಮಾಡಿಕೊಂಡರು.ಅಬ್ಬಾ ಎನ್ನುತ್ತಾ ಮಿಥುನ್ ಖುಷಿಯಿಂದ ಒಂದು ಉಸಿರು ಎಳೆದ.ಸುಗಂಧಿಗೆ ಮಂಗಳಳ ಮುದ್ದು ಮುಖವನ್ನು ಎಲ್ಲೋ ನೋಡಿದ ನೆನಪು ಎಲ್ಲವನ್ನೂ ಮತ್ತೆ ಮಿಥುನ್ನಲ್ಲಿ ಕೇಳಿ ತಿಳಿದರಾಯಿತು ಎಂದು ಯೋಚಿಸುತ್ತಾ ಇಬ್ಬರನ್ನೂ ಒಳಗಡೆ ಬರಮಾಡಿಕೊಂಡಳು.ಮಿಥುನ್ ತಾನು ಮದುವೆ ಆಗುವ ಹುಡುಗಿ ಮಂಗಳ ಅನ್ನೋ ವಿಷಯವನ್ನು ಇನ್ನು ಸುಗಂಧಿಯ ಬಳಿ ಹೇಳಿಕೊಂಡಿರಲಿಲ್ಲ.ಬಡಹುಡುಗಿಯ ಗುಣನಡತೆ ಆಂಟಿಗೆ ಇಷ್ಟವಾಗಲಿ ಆನಂತರ ಹೇಳಿಬಿಡುವ ಎಂದು ಸುಮ್ಮನಾದ..
ದೊಡ್ಡ ಬಂಗಲೆಯಂತಿದ್ದ ಮನೆಗೆ ಮಂಗಳ ಬಂದಿದ್ದೂ ಆಯಿತು!ಬಂದವಳೇ ಕೆಲಸ ಆರಂಭಿಸಿಯೂ ಆಯಿತು.ಅಲ್ಲಲ್ಲಿ ಬಿದ್ದಿದ್ದ ಸಣ್ಣಪುಟ್ಟ ಕಸವನ್ನು ಗುಡಿಸುತ್ತಾ ಎಲ್ಲಾ ಕಡೆ ಮುಗಿಯುತ್ತಿದ್ದಂತೆಯೇ ಮಧುವಿನ ರೂಮಿನ ಒಳಗಡೆ ಬಂದೇ ಬಿಟ್ಟಳು.ಒಂದು ಕ್ಷಣ ಅವನನ್ನೇ ನೋಡಿದ ಮಂಗಳ ಕಣ್ಣಂಚಿನಲ್ಲಿ ಕಣ್ಣೀರ ಹನಿ ಜಾರಿಹೋಯಿತು.ಪ್ರಾಣವಿದ್ದೂ ತನ್ನನ್ನೇ ತಾನು ಮರೆತಂದಿದ್ದ ಮಧು ಹಾಸಿಗೆಯ ಮೇಲೆ ಜೀವಂತ ಶವವಾಗಿ ಮಲಗಿಬಿಟ್ಟಿದ್ದ.ತನ್ನ ಹೃದಯ ಕದ್ದ ಮುದ್ದಿನ ರಾಜಕುಮಾರಿ ಮನೆಯೊಳಗೆ ಬಂದು ತನ್ನೇದುರು ನಿಂತಿದ್ದರೂ ಅದ್ಯಾವುದರ ಅರಿವೇ ಇಲ್ಲದೆ ಉಸಿರಾಡುತ್ತಿದ್ದ ಅಷ್ಟೆ…
(ಮುಂದುವರಿಯುವುದು)













