ಡಿಬಿಎಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ-169 (NH-169) ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮೂಡುಬಿದಿರೆ ಸಮೀಪದ ಮಿಜಾರು ಪ್ರದೇಶದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಹೆದ್ದಾರಿಯ ಒಂದು ಭಾಗ ಕೊಚ್ಚಿಹೋಗಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆರೋಪದಂತೆ, ಮಳೆನೀರಿನ ಹರಿವಿಗೆ ಅಗತ್ಯವಿದ್ದ ದೊಡ್ಡ ಕಲ್ವರ್ಟ್ ನಿರ್ಮಿಸದೆ ಸಣ್ಣ ಕಲ್ವರ್ಟ್ ಅಳವಡಿಸಿರುವುದರಿಂದ ನೀರು ಸರಾಗವಾಗಿ ಹರಿಯದೆ ರಸ್ತೆಯ ಅಡಿಭಾಗದ ಮಣ್ಣು ಹಾಗೂ ಜಲ್ಲಿಕಲ್ಲುಗಳು ಕೊಚ್ಚಿಹೋಗಿವೆ. ಪರಿಣಾಮವಾಗಿ ಹೆದ್ದಾರಿಯ ಒಂದು ಭಾಗ ಕುಸಿದಿದ್ದು, ತೆಂಕಮಿಜಾರು ಭಾಗದ ಇನ್ನೂ ಕೆಲವು ಸ್ಥಳಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ.
ರಸ್ತೆಯ ಪಾಯ ಹಾನಿಗೊಳಗಾಗಿದ್ದರೂ ಲಘು ಹಾಗೂ ವಾಣಿಜ್ಯ ವಾಹನಗಳ ಸಂಚಾರ ಮುಂದುವರಿದಿದೆ. ಮಳೆ ಇದೇ ರೀತಿ ಮುಂದುವರಿದರೆ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಡಿಬಿಎಲ್ ಕಂಪನಿಯೇ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಪರಿಶೀಲನೆ ನಡೆಸಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
































