
ಮಂಗಳೂರು: ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ರೆಸಾರ್ಟ್ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಮೈಸೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಿಶಿತ ಎಂಡಿ (21), ಪಾರ್ವತಿ ಎಸ್ (20) ಹಾಗೂ ಕೀರ್ತನಾ ಎನ್ (21) ಎಂಬ ಈ ಮೂವರು ಯುವತಿಯರು ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್ಗೆ ಆಗಮಿಸಿ ಕೊಠಡಿ ಪಡೆದಿದ್ದರು. ಇಂದು ಬೆಳಗ್ಗೆ 8:30ರ ಸುಮಾರಿಗೆ ಈಜಲೆಂದು ಈಜುಕೊಳಕ್ಕೆ ತೆರಳಿದ್ದರು. ಮೂವರೇ ಪೂಲ್ನಲ್ಲಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ಈ ಸ್ವಿಮ್ಮಿಂಗ್ ಪೂಲ್ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿದ್ದು ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿದ್ದನ್ನು ಗಮನಿಸಿ ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಜುವ ದೃಶ್ಯವನ್ನು ಐಫೋನ್ನಲ್ಲಿ ರೆಕಾರ್ಡ್ ಮಾಡಿದ್ದು ಈಜು ಕೊಳ ಸಂಪೂರ್ಣ ಕವರ್ ಆಗುವಂತೆ ಸ್ವಲ್ಪ ದೂರದಲ್ಲಿ ಐಫೋನ್ ಇರಿಸಿದ್ದರು. ಮೂವರು ಐದು ಅಡಿ ಹೊಂದಿದ್ದು ಮೂವರಿಗೂ ಈಜಲು ಬರುತ್ತಿರಲಿಲ್ಲ. ಆರಂಭದಲ್ಲಿ ಕೊಳದಲ್ಲಿ ನಡೆದಾಡಿಕೊಂಡು, ಮುಳುಗಿ ಏಳುತ್ತಿದ್ದರು. ಈ ಪೈಕಿ ಓರ್ವ ಯುವತಿ ಆರು ಅಡಿ ಆಳಕ್ಕೆ ಹೋಗಿದ್ದಾಳೆ. ಆಕೆ ರಕ್ಷಣೆಗೆ ಇನ್ನೊಬ್ಬಳು, ಕೊನೆಗೆ ಮತ್ತೊಬ್ಬಳು ಹೋಗಿರುವ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ.



















