
ತುಮಕೂರು: ಬುಧವಾರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸೇತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿ ಇದೇ ಏಪ್ರಿಲ್ 12ರಿಂದ ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಂಗಳೂರಿನಿಂದ ಹೊಸ ರೈಲು ಸಂಚರಿಸಲಿದೆ ಎಂದು ಘೋಷಣೆ ಮಾಡಿದರು.
ಬಟವಾಡಿ ಗೇಟ್ನಲ್ಲಿ ಇವತ್ತು 27 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭ ಮಾಡಲಾಗಿದ್ದು ಬಡ್ಡಿಹಳ್ಳಿ ಬಳಿ 43 ಕೋಟಿ ರೂ. ವೆಚ್ಚದಲ್ಲಿ, ಮೈದಾಳದ ಬಳಿ 51 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಮಾಡಲಾಗುತ್ತಿದೆ. 650 ಕೋಟಿ ರೂ. ವೆಚ್ಚದ 22 ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ. 23 ಕಾಮಗಾರಿಗಳ ಪೈಕಿ ಈಗಾಗಲೇ 10 ಕಾಮಗಾರಿಗೆ ಚಾಲನೆ ಕೊಡಲಾಗಿದ್ದು ಹಂತ ಹಂತವಾಗಿ ಕೆಲಸಗಳನ್ನು ಪ್ರಾರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಸೋಮಣ್ಣ ತಿಳಿಸಿದರು.





















