
ಶಿವಮೊಗ್ಗ: ಬನ್ನೇರುಘಟ್ಟ ಮೃಗಾಲಯದಲ್ಲಿ ಜನಿಸಿದ ಹೆಣ್ಣು ನೀರಾನೆ ಮರಿಯ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ದಿವಂಗತ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸ್ಮರಣಾರ್ಥ ಈ ಮರಿಗೆ ‘ಸಮೀಕ್ಷಾ’ ಎಂದು ಹೆಸರು ಇಡಲು ಸೂಚಿಸಲಾಗಿದೆ.
17 ವರ್ಷದ ನೀರಾನೆ ಆರೋಗ್ಯಕರವಾಗಿ ಮರಿಗೆ ಜನ್ಮ ನೀಡಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಜನಿಸಿದ್ದ ಮರಿ ಸೋಂಕಿನಿಂದ ಮೃತಪಟ್ಟ ಹಿನ್ನೆಲೆ, ಈ ಬಾರಿ ಯಾವುದೇ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೂನ್ 4ರಂದು ದಕ್ಷಿಣ ಆಫ್ರಿಕಾದಿಂದ ತರಲಾಗುವ ಚೀತಾಗಳ ಸಾರ್ವಜನಿಕ ವೀಕ್ಷಣೆ ವೇಳೆ ಈ ಮರಿಗೆ ಅಧಿಕೃತವಾಗಿ ನಾಮಕರಣ ನಡೆಯಲಿದೆ ಎಂದು ತಿಳಿಸಲಾಗಿದೆ.
ಶಿವಮೊಗ್ಗದ ತಾವರೆಕೊಪ್ಪ ಸಿಂಹಧಾಮದಲ್ಲಿ ಚಿಕಿತ್ಸೆ ವೇಳೆ ನೀರಾನೆಯ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸ್ಮರಣಾರ್ಥ ಈ ಹೆಸರನ್ನು ಇಡಲಾಗುತ್ತಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಂದರ್ಭದಲ್ಲೇ ಈ ಪ್ರಸ್ತಾಪ ಮಾಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.




























