
ಕಾರ್ಕಳ: ಜೋಗುಳಬೆಟ್ಟುವಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮೂರನೇ ತರಗತಿ ವಿದ್ಯಾರ್ಥಿ ಅಶ್ವಥ್ ಅವರ ಒಂದು ವರ್ಷದ ರಿಕ್ಷಾ ವೆಚ್ಚವನ್ನು ಸಮಾಜ ಸೇವಕ ಸತೀಶ್ ದೇವಾಡಿಗ (ಆನೆಕಜೆ) ಅವರು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಅಶ್ವಥ್ ಅವರು ಮಿಯಾರ್ ಅಡ್ಕರ ಪಲ್ಕೆ ಪ್ರದೇಶದಿಂದ ಪ್ರತಿದಿನ ಸುಮಾರು ಒಂದೂವರೆ ಕಿಲೋಮೀಟರ್ ದೂರ ನಡೆದುಕೊಂಡು ಶಾಲೆಗೆ ಬರುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ, ಮಗುವಿನ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಸತೀಶ್ ದೇವಾಡಿಗ ಅವರು ಒಂದು ವರ್ಷದ ಸಂಪೂರ್ಣ ರಿಕ್ಷಾ ವೆಚ್ಚವನ್ನು ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರೇಖಾ, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಬಸಂತ್, ಕಾರ್ಯದರ್ಶಿ ಸುಜಾತಾ ಶೆಟ್ಟಿ, ಸದಸ್ಯೆ ಲಲಿತಾ ಶೆಟ್ಟಿ, ವಿದ್ಯಾರ್ಥಿಯ ಪೋಷಕರಾದ ಅಂತು ಮತ್ತು ಶಕುಂತಲಾ ಉಪಸ್ಥಿತರಿದ್ದರು.ವಿದ್ಯಾರ್ಥಿಯ ಪೋಷಕರು, ಶಾಲಾ ಪೋಷಕರ ಸಂಘದ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಸತೀಶ್ ದೇವಾಡಿಗ ಅವರ ಈ ಉದಾರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.

































