
ಮಂಗಳೂರು: ರೋಟರಿ ಕ್ಲಬ್ ಮಂಗಳೂರು ವತಿಯಿಂದ 2022ರ ಮಾರ್ಚ್‌ನಲ್ಲಿ 35 ಲಕ್ಷ ರೂ. ಮೊತ್ತದಲ್ಲಿ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಾನವೀಯ ಸೇವೆ ರೂಪದಲ್ಲಿ ಪ್ರಾರಂಭವಾಗಿರುವ ‘ರೋಟರಿ ಅಮೃತ- ಎದೆಹಾಲಿನ ಘಟಕ’ ಅವಧಿ ಪೂರ್ವ ಜನನದ ಶಿಶುಗಳ ಜೀವ ಉಳಿಸುವಲ್ಲಿ ಜೀವ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಮಾನವೀಯ ಸೇವೆ ರೂಪದಲ್ಲಿ ಪ್ರಾರಂಭವಾಗಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕದಲ್ಲಿ 8,265 ತಾಯಂದಿರು ದಾನ ಮಾಡಿರುವ 508 ಲೀ. ಹಾಲನ್ನು ಪ್ಯಾಶ್ಚರೀಕರಣ ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿದ್ದ 366 ನವಜಾತ ಶಿಶುಗಳಿಗೆ ನೀಡಲಾಗಿದೆ. ‘ಅವಧಿ ಪೂರ್ವ ಅಂದರೆ, ಆರೇಳು ತಿಂಗಳಲ್ಲಿ ಮಗು ಹುಟ್ಟಿದರೆ, ತಾಯಿಯಲ್ಲಿ ಹಾಲಿರುವುದಿಲ್ಲ. ನೈಸರ್ಗಿಕ ಹಾಲಿನಿಂದ ಮಗುವಿನ ಹಸಿವು ನೀಗಿಸಲು ಮಿಲ್ಕ್ ಬ್ಯಾಂಕ್ ವರದಾನವಾಗಿದ್ದು, ಅದರಲ್ಲಿ ತಾಯಿ ಹಾಲಿನ ಎಲ್ಲ ಪೌಷ್ಟಿಕಾಂಶ ಇರುತ್ತವೆ. ಅವಧಿ ಪೂರ್ವ ಜನನದ ಶಿಶುವಿನ ಹೃದಯ, ಶ್ವಾಸಕೋಶ, ಕರುಳು ಸಹಿತ ಅವಯವಗಳು ಬೆಳೆದಿರುವುದಿಲ್ಲ. ನೈಸರ್ಗಿಕ ಹಾಲು ಕೊಟ್ಟರೆ ಬೆಳವಣಿಗೆ ಸುಲಭವಾಗುತ್ತದೆ.
ಈ ಕುರಿತು ಮಾತನಾಡಿದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಅವಧಿ ಪೂರ್ವ ಜನಿಸಿದ ಶಿಶುಗಳಲ್ಲಿ ಶೇ.32ರಷ್ಟು ಸಾವನ್ನಪ್ಪುತ್ತವೆ. ಎದೆ ಹಾಲು ಘಟಕದ ಪರಿಕಲ್ಪನೆಯಿಂದಾಗಿ ಈ ಶಿಶುಗಳು ಬದುಕುಳಿಯುವಂತಾಗಿದೆ. ಯಾವುದೇ ಕೃತಕ ಹಾಲು ಸಂಪೂರ್ಣ ಆಹಾರವಲ್ಲ, ಎದೆ ಹಾಲು ಮಾತ್ರ ಪರಿಪೂರ್ಣ ಹಾಲಾಗಿದ್ದು, ಶಿಶು ಮರಣ ಸಂಖ್ಯೆ ಕಡಿಮೆ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.













