
ಪಡುಬಿದ್ರೆ: ಪಡುಬಿದ್ರೆ ನಿವಾಸಿ ಸಸಿಹಿತ್ಲು ಮೇಳದ ನಿತಿನ್ ಕುಮಾರ್ ಎಂಬವರು ಸಾಲ ವಾಪಾಸು ನೀಡಲಿಲ್ಲ ಎಂಬ ಕಾರಣಕ್ಕೆ ಸಚಿನ್ ಅಮೀನ್ ಉದ್ಯಾವರ, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಸಿಯರ್ ನಿತಿನ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ಆರೋಪಿ ಸಚಿನ್ ಹಾಗೂ ಹಲ್ಲೆಗೊಳಗಾದ ನಿತಿನ್ ಇಬ್ಬರು ಯಕ್ಷಗಾನ ಕಲಾವಿದರಾಗಿದ್ದು ಗೆಳೆಯರಾಗಿದ್ದರು. ಆದರೆ ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಪಾವಂಜೆ ಮೇಳದ ಯಕ್ಷ ಕಲಾವಿದನಾಗಿದ್ದ ಸಚಿನ್ ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಸಿಯರ್ ಜನವರಿ 21ರಂದು ಮನೆಯೊಂದರಲ್ಲಿ ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಸತತವಾಗಿ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು, ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್ ಗೆ ಬಲತ್ಕಾರವಾಗಿ ಸಹಿ ಹಾಕಿಸಿಕೊಂಡಿದ್ದು ಬಳಿಕ ಸಂಜೆ ವೇಳೆಗೆ ಆರೋಪಿಗಳೇ ನಿತಿನ್ ಅವರನ್ನು ಪಡುಬಿದ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ನಿತಿನ್ ಜನವರಿ 21ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಕೆಲಸ ಮಾಡಿ ಜನವರಿ 22ರಂದು ಪಡುಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.





















