
ರಾಮನಗರ: ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇದರ ಮದ್ಯೆ ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಕರ್ನಾಟಕದ 50 ಮಂದಿ ಪ್ರವಾಸಿಗರು ಸಿಲುಕಿದ್ದು ಈ ಪೈಕಿ 4 ಮಂದಿ ಪ್ರವಾಸಿಗರು ರಾಮನಗರದವರಾಗಿದ್ದಾರೆ.
ಸೆ. 1ರಂದು ಬೆಂಗಳೂರಿನ ಏರ್‌ಪೋರ್ಟ್‌ನಿಂದ ಪ್ರವಾಸಿಗರು ನೇಪಾಳಕ್ಕೆ 13 ದಿನಗಳ ಪ್ರವಾಸಕ್ಕೆಂದು ಪ್ರಯಾಣ ಬೆಳೆಸಿದ್ದು ಬೆಂಗಳೂರಿಂದ ವಾರಣಾಸಿ, ಅಯೋಧ್ಯೆ ಬಳಿಕ ನೇಪಾಳ ಬಾರ್ಡರ್ ತಲುಪಿದ್ದರು. ನೇಪಾಳದ ಸೋನಾಲಿ ಬಾರ್ಡರ್‌ಗೆ ತಲುಪಿ ಸೆ.8ರಂದು ಪೊಕ್ರಾದಿಂದ ಕಠ್ಮಂಡು ಕಡೆ ಪ್ರಯಾಣ ಬೆಳೆಸಿದ್ದರು.
ಕಠ್ಮಂಡುವಿನ ಪಶುಪತಿನಾಥ ದೇವರ ದರ್ಶನ ಪಡೆದು ಹೊರ ಬರುವಾಗ ಗಲಾಟೆ ಆರಂಭವಾಗಿದೆ. ಸೆ.9ರಂದು 11 ಗಂಟೆಗೆ ಗಲಾಟೆ ಆರಂಭವಾಗಿದ್ದು, ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು ಕಠ್ಮಂಡುವಿನ ಪ್ರೈಮ್‌ಶೂಟ್ ಹೋಟೆಲ್‌ನಲ್ಲಿ ಕನ್ನಡಿಗರು ವಾಸ್ತವ್ಯ ಹೂಡಿದ್ದಾರೆ. ಇಂದು ಕಠ್ಮಂಡುವಿನಿಂದ ಜನಕ್ ಪುರ್‌ದ ಡಿಯೊಗರ್ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಪ್ರಯಾಣಿಸಲಿದ್ದು ಸೆ.13ರಂದು ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.



















