
ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG) 2026ರ ಮರು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಆರಂಭಿಸಿದೆ. ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತಾತ್ಕಾಲಿಕ ಕೀ ಉತ್ತರ ಪ್ರಕಟವಾದ ನಂತರ 10 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಎನ್‌ಟಿಎಗೆ ಸಲ್ಲಿಕೆಯಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಅಂತಿಮ ಕೀ ಉತ್ತರ ಬಿಡುಗಡೆ ಮಾಡಿ ಬಳಿಕವೇ ಫಲಿತಾಂಶ ಪ್ರಕಟಿಸಲು ಎನ್‌ಟಿಎ ಸಿದ್ಧತೆ ನಡೆಸುತ್ತಿದೆ.
ಈ ನಡುವೆ ಭೌತಶಾಸ್ತ್ರ ವಿಭಾಗದ ಒಂದು ಪ್ರಶ್ನೆಯನ್ನು ಮೌಲ್ಯಮಾಪನದಿಂದ ಕೈಬಿಡಲಾಗಿದ್ದು, ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ನಾಲ್ಕು ಬೋನಸ್ ಅಂಕಗಳನ್ನು ನೀಡಲಾಗುತ್ತದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಮತ್ತೊಂದು ಪ್ರಶ್ನೆಗೆ ಸಂಬಂಧಿಸಿದಂತೆ ಎರಡು ಉತ್ತರಗಳನ್ನು ಸರಿಯೆಂದು ಪರಿಗಣಿಸಲಾಗಿದ್ದು, ಅವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಪೂರ್ಣ ಅಂಕ ಸಿಗಲಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಮೂಲ ಪರೀಕ್ಷೆ ರದ್ದುಗೊಂಡ ಬಳಿಕ ಜೂನ್ 21ರಂದು ದೇಶದ 5,440 ಹಾಗೂ ವಿದೇಶದ 14 ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಂಗ್ಲಿಷ್, ಹಿಂದಿ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು ಎಲ್ಲಾ ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಂತಿಮ ಕೀ ಉತ್ತರ ಪ್ರಕಟಿಸಿ, ನಂತರ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.








































