
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ. ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ಶೀಘ್ರದಲ್ಲೇ ವಿಶೇಷ ಅಭಿಯಾನ ಹಮ್ಮಿಕೊಳ್ಳಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾತನಾಡಿದ ಅವರು, ಹೊಸದಾಗಿ ಹೆಸರು ಸೇರಿಸಲು ಅರ್ಹರು ನಮೂನೆ 6ರ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಕರಡು ಮತದಾರರ ಪಟ್ಟಿಯಲ್ಲಿ 56,99,660 ಮತದಾರರಿದ್ದಾರೆ. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಪತ್ತೆಯಾಗದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 24,06,044 ಜನರಿಗೆ ನೋಟಿಸ್ ನೀಡಲಾಗುತ್ತಿದೆ. ಈ ಪೈಕಿ ಬಹುತೇಕ ವಿಚಾರಣೆಗಳು ಪೂರ್ಣಗೊಂಡಿದ್ದು, ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸೂಚಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಸರು ಸೇರ್ಪಡೆಗಾಗಿ 2.19 ಲಕ್ಷ ಜನರು ನಮೂನೆ 6 ಸಲ್ಲಿಸಿದ್ದಾರೆ. ವಿವಿಧ ಅರ್ಜಿಗಳ ಪರಿಶೀಲನೆ ಬಳಿಕ ಸುಮಾರು 2 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಒಟ್ಟು ಮತದಾರರ ಸಂಖ್ಯೆ 59 ಲಕ್ಷಕ್ಕೆ ತಲುಪಬಹುದು ಎಂದು ರಾವ್ ಮಾಹಿತಿ ನೀಡಿದರು.
ಇನ್ನು, ನಮೂನೆ 7ರ ಅಡಿಯಲ್ಲಿ ಸಲ್ಲಿಕೆಯಾದ 5,549 ಅರ್ಜಿಗಳ ಪೈಕಿ 2,468 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಇದು ಒಟ್ಟು ಅರ್ಜಿಗಳ ಶೇ.44ರಷ್ಟಾಗಿದೆ.
ಬೂತ್ ಮಟ್ಟದ ಏಜೆಂಟ್ಗಳು (BLA) ನಮೂನೆ 7ರಡಿ ಗರಿಷ್ಠ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಮಿತಿಮೀರಿದ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಮಲ್ಲೇಶ್ವರಂನಲ್ಲಿ ನಮೂನೆ 7ರ ಅಡಿಯಲ್ಲಿ ಸಲ್ಲಿಸಲಾಗಿದ್ದ 1,103 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಇತರ ಪ್ರದೇಶಗಳಲ್ಲಿನ ಸಾಮೂಹಿಕ ಅರ್ಜಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.






















