32.8 C
Udupi
Sunday, April 26, 2026
spot_img
spot_img
HomeBlogನವೋಲ್ಲಾಸ ದಿನ - 9( ಸಿದ್ದಿಧಾತ್ರಿ ಅವತಾರ)

ನವೋಲ್ಲಾಸ ದಿನ – 9( ಸಿದ್ದಿಧಾತ್ರಿ ಅವತಾರ)

ಹೆಸರಿನ ಹಿನ್ನಲೆ, ಪೂರ್ವಕಥೆ ಮತ್ತು ಮಹತ್ವ

ಪ್ರಜ್ವಲಾ ಶೆಣೈ, ಕಾರ್ಕಳ

ನವವಿಧದಲ್ಲಿ ನವಭಕುತಿ ಎಂಬಂತೆ ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಂತಹ ದೇಶದಲ್ಲಿ ನವರಾತ್ರಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುವುದು. ಪ್ರತಿ ರಾಜ್ಯಕ್ಕೆ ಅನುಗುಣವಾಗಿ ನವರಾತ್ರಿ ಆಚರಣೆ ಕೂಡ ಭಿನ್ನವಾಗಿದೆ. ಆದರೆ ಹಬ್ಬದ ಸಡಗರ, ಸಂಭ್ರಮ ಮಾತ್ರ ಏಕರೂಪವಾಗಿದೆ.

ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ದೇವಿ ಅವತಾರ

ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ದುರ್ಗೆಯ ಒಂಭತ್ತನೆಯ ಹಾಗೂ ಕೊನೆಯ ಅವತಾರವಾದ ಸಿದ್ಧಿಧಾತ್ರಿದೇವಿಯನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ನವರಾತ್ರಿಯ 9ನೇ ದಿನವನ್ನು ಮಹಾನವಮಿ ಎಂದೂ ಕರೆಯುತ್ತಾರೆ. ಈ ದಿನ ದುರ್ಗಾದೇವಿಯು ಶಿವನ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆ ನಿಂತಳು ಎನ್ನಲಾಗಿದೆ. ಆದ್ದರಿಂದ ಶಿವನಿಗೆ ಅರ್ಧನಾರೀಶ್ವರ ಎಂಬ ಹೆಸರು ಬಂದಿತು ಎನ್ನುವ ಪ್ರತೀತಿಯಿದೆ.
ಸಿದ್ಧಿಧಾತ್ರಿ ದೇವಿ ನಾಲ್ಕು ಕೈಗಳನ್ನು ಹೊಂದಿದ್ದು ಚಕ್ರ ಗದೆ, ಶಂಖ ಹಾಗೂ ಕಮಲದ ಹೂವನ್ನು ಹಿಡಿದಿರುವಳು. ದೇವಿಯು ಸಂಪೂರ್ಣ ಅರಳಿದ ಕಮಲದ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ ಮತ್ತು ಸಿಂಹದ ಮೇಲೆ ದೇವಿ ಸವಾರಿ ಮಾಡುತ್ತಾಳೆ.

ಸಿದ್ಧಿದಾತ್ರಿ ದೇವಿ ಹೆಸರಿನ ಹಿನ್ನೆಲೆ
ದುರ್ಗೆಯ ಕೊನೆಯ ಅವತಾರವಾದ ಸಿದ್ಧಿಧಾತ್ರಿ ಎಂಬ ಹೆಸರು ಹೇಗೆ ಉದ್ಭವಿಸಿತು ಎಂದು ತಿಳಿಯುವುದಾದರೆ ಈ ಪದವು ಸಿದ್ಧಿ ಮತ್ತು ಧಾತ್ರಿ ಎಂಬ ಎರಡು ಪದಗಳ ಸಂಯೋಗದಿಂದ ಉಂಟಾಗಿದೆ. ಸಿದ್ಧಿ ಎಂದರೆ ಧ್ಯಾನ, ಸಾಮರ್ಥ್ಯ, ಪರಿಪೂರ್ಣತೆ ಎಂದರ್ಥ. ಧಾತ್ರಿ ಎಂದರೆ ಕೊಡುವವಳು ಎಂದರ್ಥ. ಅಂದರೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಯನ್ನು, ಪರಿಪೂರ್ಣತೆಯನ್ನು ಕೊಡುವವಳು. ಈಕೆಯನ್ನು ಲಕ್ಷ್ಮೀದೇವಿ ಎಂದೂ ಕರೆಯುತ್ತಾರೆ. ಲಕ್ಷ್ಮೀದೇವಿಯು ಸುಖ, ಸಂತೋಷ, ಸಂಪತ್ತು ಮತ್ತು ಯಶಸ್ಸನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆ ಇದೆ.


ಆಯುಧ ಪೂಜೆಯ ಹಿನ್ನೆಲೆ ಮತ್ತು ಪೂರ್ವಕಥೆ

ನವರಾತ್ರಿಯ ಒಂಭತ್ತನೆಯ ದಿನ ಎಲ್ಲೆಡೆಯೂ ಆಯುಧ ಪೂಜೆಯನ್ನು ಮಾಡಲಾಗುತ್ತದೆ. ಆಯುಧ ಪೂಜೆಯ ಆಚರಣೆ ಹೇಗೆ ಆರಂಭವಾಯಿತು ಎನ್ನುವುದಕ್ಕೆ ಇಲ್ಲೊಂದು ಪೂರ್ವಕಥೆ ಇದೆ. ದಂತ ಕಥೆಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೌರವರು ವಿರಾಟರಾಯನ ಗೋವುಗಳನ್ನು ಅಪಹರಿಸುತ್ತಾರೆ. ಅದನ್ನು ಬಿಡಿಸುವುದಕ್ಕಾಗಿ ಕೌರವರೊಡನೆ ಯುದ್ಧ ಮಾಡಲು ಶಮೀ( ಬನ್ನಿ ಮರ) ವೃಕ್ಷದ ಮೇಲೆ ಅಡಗಿಸಿ ಇಟ್ಟಿರುವ ಆಯುಧಗಳನ್ನು ಅರ್ಜುನನು ಕೆಳಗಿಳಿಸುತ್ತಾನೆ. ಮರಳಿ ಗಾಂಢೀವವನ್ನು ಧರಿಸುತ್ತಾನೆ. ಅದರ ಪ್ರತೀಕವಾಗಿ ರಾಜರು ಆಯುಧ ಪೂಜೆ ಮಾಡುವ ವಾಡಿಕೆ ಹುಟ್ಟಿಕೊಂಡಿತು ಎಂಬ ಪ್ರತೀತಿಯಿದೆ. ಜ್ಞಾನ, ಸಂಪತ್ತು ಮತ್ತು ಶಕ್ತಿ ದೇವತೆಯ ಆರಾಧನೆಯೊಂದಿಗೆ ಬದುಕಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ಆಯುಧಗಳೆಂದು ತಿಳಿದು ಪೂಜಿಸುವ ಸಂಪ್ರದಾಯ ಆರಂಭವಾಯಿತು. ಈ ದಿನದಂದು ಚಾಕು, ಚೂರಿಯಿಂದ ಹಿಡಿದು ದೇಶ ಕಾಯುವ ಬಂದೂಕು, ರೈತರ ಕೃಷಿ ಉಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಯಂತ್ರೋಪಕರಣಗಳು ಇತ್ಯಾದಿಗಳನ್ನು ಪೂಜಿಸಲಾಗುತ್ತದೆ. ನಂತರ ಬನ್ನಿ ಮರದ ಎಲೆಯನ್ನು ಹಂಚುವ ಸಂಪ್ರದಾಯವೂ ಇದೆ.

ಬನ್ನಿ ಮರದ ಎಲೆಗಳು ಸಮೃದ್ಧಿಯ ಸಂಕೇತ

ಸಂಪತ್ತು ಅಕ್ಷಯವಾಗಲಿ ಎಂದು ಹಾರೈಸಿ ಶಮೀ ವೃಕ್ಷದ ಎಲೆಯನ್ನು ಬಂಧು ಬಾಂಧವರಲ್ಲಿ ಹಂಚುವ ಪದ್ಧತಿಯು ಇದೆ. ಈ ಕ್ರಮದ ಹಿಂದೆಯೂ ಒಂದು ಆಸಕ್ತಿದಾಯಕ ಪೌರಾಣಿಕ ಕಥೆ ಇದೆ. ಹಿಂದೆ ಕೌಸ್ತ ಎಂಬ ಶಿಷ್ಯನು ಗುರುಕುಲದಲ್ಲಿ ವರತಂತು ಎಂಬ ಗುರುವಿನಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದನು. ಹಲವು ವರ್ಷಗಳ ಬಳಿಕ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಗುರುಕುಲದಿಂದ ತೆರಳುವ ಸಂದರ್ಭದಲ್ಲಿ
ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಕೌಸ್ತನು ಗುರುಗಳಲ್ಲಿ ಕೇಳಿದನು. ಆದರೆ ನಿಸ್ವಾರ್ಥ ಮನೋಭಾವದ ಗುರು ವರತಂತು
ಗುರುದಕ್ಷಿಣೆಯನ್ನು ನಿರಾಕರಿಸುತ್ತಾರೆ. ಗುರುದಕ್ಷಿಣೆ ನೀಡದಿದ್ದರೆ ವಿದ್ಯೆ ದಕ್ಕುವುದಿಲ್ಲ ಎಂಬ ಮಾತಿದೆ. ಏನನ್ನಾದರೂ ಸ್ವೀಕರಿಸಲೇಬೇಕು ಎಂದು ಶಿಷ್ಯನು ಪಟ್ಟು ಹಿಡಿಯುತ್ತಾನೆ. ಗುರುದಕ್ಷಿಣೆ ಪಡೆಯಲು ಇಷ್ಟವಿಲ್ಲದಿದ್ದರೂ ಗುರುವು ತನ್ನ ಶಿಷ್ಯನನ್ನು ಪರೀಕ್ಷಿಸುವ ಸಲುವಾಗಿ ತನಗೆ 14,000 ಬಂಗಾರದ ನಾಣ್ಯಗಳು ಬೇಕು ಎಂದು ತಿಳಿಸುತ್ತಾರೆ. ಇದನ್ನು ಕೇಳಿದ ಕೌಸ್ತನು ದಿಕ್ಕು ತೋಚದೆ ಕಂಗಾಲಾಗುವನು. ಶಿಷ್ಯನಾಗಿ ಗುರು ಕೇಳಿದ ದಕ್ಷಿಣೆ ಸಲ್ಲಿಸುವುದು ತನ್ನ ಕರ್ತವ್ಯ ಎಂದು ಚಿಂತಿಸಿ ರಾಜಾ ರಘುವಿನ ಬಳಿ ತೆರಳುತ್ತಾನೆ. ಆದರೆ ರಾಜಾ ರಘು ಆಗಷ್ಟೇ ದೊಡ್ಡ ಯಾಗ ಮಾಡಿ ಎಲ್ಲವನ್ನು ದಾನ ಮಾಡಿದ್ದ ಕಾರಣ ರಾಜನಲ್ಲಿ ಅಷ್ಟೊಂದು ಚಿನ್ನದ ನಾಣ್ಯಗಳು ಇರುವುದಿಲ್ಲ. ಆಗ ರಾಜಾ ರಘು ಕೌಸ್ತನಿಗೆ ತನಗೆ ಪ್ರಿಯವಾದ ಶಮೀ ವೃಕ್ಷದ ಕೆಳಗೆ ನಿಂತು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಲು ಸೂಚಿಸುತ್ತಾನೆ. ಸಂಪತ್ತಿನ ಅಧಿಪತಿಯಾದ ಕುಬೇರನನ್ನು ಪ್ರಾರ್ಥಿಸಿದಾಗ ಕುಬೇರ ತಥಾಸ್ತು ಎಂದು ಆಶೀರ್ವದಿಸುತ್ತಾನೆ. ಆಗ ಶಮೀ ವೃಕ್ಷದ ಕೆಳಗೆ ಕಾಯುತ್ತಿದ್ದ ಕೌಸ್ತನಿಗೆ ಮರದಿಂದ ಎಲೆಗಳು ಉದುರುವುದು ಕಾಣಿಸುತ್ತದೆ. ನೋಡಿದರೆ ಬಂಗಾರದ ಎಲೆಗಳು ಬನ್ನಿ ಮರದಿಂದ ಉದುರುತ್ತಿತ್ತು. ಹೀಗೆ 14000 ಎಲೆಗಳನ್ನು ಸಂಗ್ರಹಿಸಿ ಕೌಸ್ತನು ತನ್ನ ಗುರುಗಳಿಗೆ ಗುರುದಕ್ಷಿಣೆಯಾಗಿ ನೀಡುತ್ತಾನೆ. ಬನ್ನಿ ಮರದ ಎಲೆಯನ್ನು ನೀಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಅಂದಿನಿಂದ ಉಂಟಾಯಿತು.


ಸಿದ್ಧಿಧಾತ್ರಿ ದೇವಿಯ ಅಷ್ಟಸಿದ್ಧಿ ಸಾಮರ್ಥ್ಯ ಮತ್ತು ಮಹತ್ವ

ಸಿದ್ದಿಧಾತ್ರಿದೇವಿಯು ಎಲ್ಲಾ ಸಿದ್ಧಿಗಳನ್ನು ಹೊಂದಿದವಳು ಎನ್ನಲಾಗಿದೆ. ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿಯ ವಿಸ್ಮಯವಾಗಿದೆ.ದೇವಿಯು ಅಷ್ಟಸಿದ್ಧಿಗಳನ್ನು ಸಾಧಿಸಿ ಇಡೀ ವಿಶ್ವವನ್ನೇ ಗೆಲ್ಲ ಬಲ್ಲವಳು. ಅಷ್ಟಸಿದ್ಧಿಗಳ ಬಗ್ಗೆ ಪುರಾಣಗಳಲ್ಲಿ ಮನೋಜ್ಞವಾಗಿ ವರ್ಣಿಸಲಾಗಿದೆ.

  • ಅಣಿಮಾ – ಎಂದರೆ ದೇಹದ ಗಾತ್ರವನ್ನು ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯ. ಇದೇ ಸಿದ್ಧಿಯನ್ನು ಬಳಸಿ ಹನುಮಂತ ಲಂಕೆಯಲ್ಲಿ ಸೀತೆಯನ್ನು ಕಾಪಾಡಲು ತನ್ನ ದೇಹದ ಗಾತ್ರವನ್ನು ಕಡಿಮೆ ಮಾಡಿ ಕೊಂಡು ಲಂಕೆಯನ್ನು ಪ್ರವೇಶಿಸಿದ್ದನು.

*ಮಹಿಮಾ – ಎಂದರೆ ದೈತ್ಯಾಕಾರದ ರೂಪವನ್ನು ಹೊಂದುವುದು. ಈ ಸಿದ್ಧಿಯಿಂದಲೇ ಹಿಂದೆ ಭಗವಾನ್ ವಿಷ್ಣು ವಾಮನಾವತಾರವನ್ನು ತಾಳಿದ್ದು.

*ಗರಿಮಾ – ಇಚ್ಛೆಯಿಂದ ತೂಕದಲ್ಲಿ ಭಾರವನ್ನು ಎತ್ತಲು ಸಾಧ್ಯವಾಗದಂತೆ ಮಾಡುವ ಸಾಮರ್ಥ್ಯ.ಹನುಮಂತನು ಈ ಸಿದ್ಧಿ ಬಳಸಿ ತನ್ನ ಬಾಲವನ್ನು ಭಾರವಾಗಿಸಿ ಎತ್ತಲು ಸಾಧ್ಯವಾಗದಂತೆ ಮಾಡಿದ್ದನು.

*ಲಘಿಮಾ – ದೇಹವನ್ನು ತುಂಬಾ ಹಗುರಾಗಿಸುವಂತೆ ಮಾಡುವ ಸಾಮರ್ಥ್ಯ. ದೇಹವನ್ನು ತಾತ್ಕಾಲಿಕವಾಗಿ ಹಗುರಾಗಿಸಿ ಗಾಳಿಯಲ್ಲಿ ತೇಲುವಂತೆ ಮಾಡುತ್ತದೆ. ಅಂದರೆ ಅದು ಸ್ವಯಂ ನಿರ್ದೇಶಿತವಾಗಿ ಹಾರಾಡುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

*ಪ್ರಾಪ್ತಿ – ತನ್ನಿಷ್ಟದ ವಸ್ತುವನ್ನು ಪಡೆಯುವ ಸಾಮರ್ಥ್ಯ.ಬಯಸಿದ್ದನ್ನು ಸಾಧಿಸುವ ಸಾಮರ್ಥ್ಯ ಇದಾಗಿದೆ. ಈ ಸಿದ್ಧಿಯ ಮೂಲಕ ತಾನು ಬಯಸಿದ ಸ್ಥಳಕ್ಕೆ ಕ್ಷಣ ಮಾತ್ರದಲ್ಲಿ ತೆರಳಬಹುದು ಎನ್ನಲಾಗಿದೆ.

*ಪ್ರಾಕಾಮ್ಯ – ಈ ಸಿದ್ಧಿಯನ್ನು ಜಾದೂ ಎಂದು ಕರೆಯಲಾಗಿದೆ. ಇಚ್ಛಿಸಿದಂತೆ ಬೇರೆ ದೇಹವನ್ನು ಪ್ರವೇಶಿಸುವುದು,ದೇಹದಿಂದ ಹೊರಬರುವುದು ಇತ್ಯಾದಿ.

*ಇಶಿತ್ವ – ಇದು ಇಡೀ ಸೃಷ್ಟಿಯ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸುವ ಸಿದ್ಧಿಯಾಗಿದೆ.ಇದು ಅತ್ಯಂತ ಶಕ್ತಿಶಾಲಿಯಾದ ಸಿದ್ಧಿಯಾಗಿದ್ದು ಒಬ್ಬ ವ್ಯಕ್ತಿ ಪ್ರಕೃತಿಯ ನಿಯಮವನ್ನು ಮೀರಲು ಮತ್ತು ಇತರ ಎಲ್ಲಾ ಸಿದ್ಧಿಗಳ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಈ ಸಿದ್ಧಿಯ ಮೂಲಕ ತಮ್ಮ ದೇಹದಿಂದ ತಮ್ಮ ಆತ್ಮವನ್ನು ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿತಗೊಳಿಸಲು ಬಳಸಲಾಗುತ್ತದೆ ಎನ್ನಲಾಗಿದೆ.

*ವಶಿತ್ವ – ಇದು ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ.ಅಂದರೆ ತನ್ನ
ಇಚ್ಛೆಗನುಗುಣವಾಗಿ ಇತರರನ್ನು ನಿಗ್ರಹಿಸುವ ಅಲೌಕಿಕ ಅಥವಾ ಮಾಂತ್ರಿಕ ಶಕ್ತಿ ಇದಾಗಿದೆ.

ಮಹಾನವಮಿಯಂದು ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಸುಖ, ಸಂಪತ್ತು,ಸಮೃದ್ಧಿ ನೆಲೆ ಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.


ಯಾ ದೇವಿ ಸರ್ವ ಭೂತೇಷು
ಮಾ ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಎಂಬ ಮಂತ್ರದಿಂದ ದೇವಿಯನ್ನು
ಪ್ರಾರ್ಥಿಸಲಾಗುತ್ತದೆ. ದೇವಿಗೆ ಹೂವು,ಹಣ್ಣು, ಸಿಹಿ ತಿಂಡಿ,ತೆಂಗಿನಕಾಯಿ,ಖೀರು,ಪಂಚಾಮೃತ ನೈವೇದ್ಯ ಮಾಡಲಾಗುತ್ತದೆ.ತುಪ್ಪದ ದೀಪ ಹಚ್ಚಿ ಆರತಿ ಬೆಳಗಿ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ. ಶ್ರೀ ದೇವಿ ಸಿದ್ಧಿಧಾತ್ರಿ ಸರ್ವರಿಗೂ ಸನ್ಮಂಗಳವನ್ನು ಉಂಟುಮಾಡಲಿ
ಸರ್ವೇ ಜನಾಃ ಸುಖಿನೋ ಭವಂತು


spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page