ಹೆಸರಿನ ಹಿನ್ನಲೆ ಪೂರ್ವ ಕಥೆ, ಉಪಾಸನೆ ಮತ್ತು ಮಹತ್ವ
ಪ್ರಜ್ವಲಾ ಶೆಣೈ, ಕಾರ್ಕಳ

ನವರಾತ್ರಿಯ 9 ದಿನಗಳಲ್ಲಿ ಜಗನ್ಮಾತೆಯ ನವ ಅವತಾರಗಳನ್ನು ಕಣ್ತುಂಬಿಕೊಳ್ಳುವುದೇ ಚಂದ. ಅಸುರೀ ಶಕ್ತಿಯನ್ನು ಸಂಹರಿಸಿದ ದೇವಿಯನ್ನು ಆರಾಧಿಸುತ್ತಾ ನಮ್ಮಲ್ಲಿರುವ ರಾಕ್ಷಸೀ ಭಾವವನ್ನು ಹೋಗಲಾಡಿಸಿದಾಗ ಮಾತ್ರ ನವರಾತ್ರಿಯ ಆಚರಣೆ ಅರ್ಥಪೂರ್ಣ ಎನಿಸುವುದು.
‘ಷಷ್ಟಂ ಕಾತ್ಯಾಯಿನೀತಿ ಚ’ ಅಂದರೆ ನವರಾತ್ರಿಯ 6 ನೇ ದಿನ ಜಗನ್ಮಾತೆ ಕಾತ್ಯಾಯಿನಿ ದೇವಿಯನ್ನು ಪೂಜಿಸಬೇಕು ಎಂದರ್ಥ.
ನವರಾತ್ರಿಯ 6ನೇ ದಿನ ಕಾತ್ಯಾಯಿನೀ ದೇವಿ ಅವತಾರ
ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ದೇವಿಯ ಆರನೇ ಅವತಾರವಾದ ಕಾತ್ಯಾಯಿನೀ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನವನ್ನು ಮಹಾಷಷ್ಠಿ ಎಂದೂ ಕರೆಯುತ್ತಾರೆ. ಕಾತ್ಯಾಯಿನಿ ದೇವಿಯು 3 ಕಣ್ಣು, ಹಣೆಯ ಮೇಲೆ ಅರ್ಧಚಂದ್ರಾಕೃತಿಯ ಅಲಂಕಾರವನ್ನು ಹೊಂದಿದ್ದು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದಿದ್ದಾಳೆ. ಕಾತ್ಯಾಯಿನಿ ದೇವಿಗೆ ಬಹುಕೈಗಳಿವೆ ಎನ್ನಲಾಗಿದ್ದು ಪ್ರತಿ ಕೈಯಲ್ಲಿಯೂ ದೇವತೆಗಳಿಂದ ಉಡುಗೊರೆಯಾಗಿ ಸಿಕ್ಕ ಆಯುಧಗಳನ್ನು ಹಿಡಿದು ತನ್ನ ಶಕ್ತಿಯನ್ನು ಇಮ್ಮಡಿಗೊಳಿಸಿದ್ದಾಳೆ. ಶಿವನಿಂದ ತ್ರಿಶೂಲ, ಭಗವಾನ್ ವಿಷ್ಣುವಿನಿಂದ ಸುದರ್ಶನ ಚಕ್ರ, ಅಗ್ನಿ ದೇವರಿಂದ ಬಾಣವನ್ನು ,ವಾಯುದೇವರಿಂದ ಬಿಲ್ಲು, ಇಂದ್ರನಿಂದ ಗುಡುಗು, ಬ್ರಹ್ಮದೇವನಿಂದ ನೀರಿನ ಕಲಶದೊಂದಿಗೆ ರುದ್ರಾಕ್ಷಿ ಇತ್ಯಾದಿ ಆಯುಧಗಳನ್ನು ಪಡೆದು ಆದಿಶಕ್ತಿ,ಯುದ್ಧ ದೇವತೆ ಎನಿಸಿದ್ದಾಳೆ.ಸೃಷ್ಟಿಯಲ್ಲಿ ಅಸಮತೋಲನ
ಸೃಷ್ಟಿಸುತ್ತಿದ್ದ ದುಷ್ಟ ಮಹಿಷಾಸುರನ ಅಟ್ಟಹಾಸ ಅಂತ್ಯಗೊಳಿಸಿ ಮಹಿಷಮರ್ದಿನಿ ಎಂಬ ಬಿರುದು ಪಡೆದಿರುವಳು.
ಕಾತ್ಯಾಯಿನಿ ಹೆಸರಿನ ಹಿನ್ನೆಲೆ ಮತ್ತು ಪೂರ್ವಕಥೆ
ಕಾತ್ಯಾಯಿನಿ ಎಂಬ ಹೆಸರು ಹೇಗೆ ಹುಟ್ಟಿಕೊಂಡಿತು ಎನ್ನುವುದಕ್ಕೆ ಇಲ್ಲಿ ಒಂದು ಪೌರಾಣಿಕ ಕಥೆ ಇದೆ.
ದೇವಿ ದುರ್ಗೆಯ ಪರಮ ಭಕ್ತರಾದ ಮಹರ್ಷಿ
ಕಾತ್ಯಾಯನರಿಗೆ ಸಂತಾನ ಭಾಗ್ಯವಿರಲಿಲ್ಲ.ಮಹರ್ಷಿಗಳು ಸಂತಾನಕ್ಕಾಗಿ ಕಠಿಣ ತಪಸ್ಸು ಕೈಗೊಂಡರು.ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ದೇವಿ ಪ್ರತ್ಯಕ್ಷಳಾಗಿ ತಾನು ಕಾತ್ಯಾಯನ ಋಷಿಗಳ ಮಗಳಾಗಿ ಜನಿಸುವುದಾಗಿ ಆಶೀರ್ವಾದ ನೀಡಿದಳು. ಅದೇ ಸಂದರ್ಭದಲ್ಲಿ ಮಹಿಷಾಸುರನೆಂಬ ರಾಕ್ಷಸನ ಉಪಟಳ ಎಲ್ಲೆ ಮೀರಿತ್ತು.ಇದನ್ನು ತಡೆಯಲು ಯಾವ ದೇವಾನು ದೇವತೆಗಳಿಂದಲೂ ಆಗಲಿಲ್ಲ.
ಆತ ಸಿಂಹದ ಮೇಲೆ ಸವಾರಿ ಮಾಡುವ ಹೆಣ್ಣಿನಿಂದಲೆ ತನ್ನ ಸಾವು ಎಂದು ವರವನ್ನು ಪಡೆದಿದ್ದ.ಇದನ್ನರಿತ ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು ,ಮಹೇಶ್ವರರು ತಮ್ಮ ತೇಜೋಮಯ ಅಂಶದಿಂದ ದೇವಿಯನ್ನು ಸೃಷ್ಟಿಸಿದರು ಮತ್ತು ಕಾತ್ಯಾಯನ ಋಷಿಗಳ ಮನೆಯಲ್ಲಿ ಜನ್ಮ ತಾಳುವಂತೆ ಅನುಗ್ರಹಿಸಿದರು.ತ್ರಿಮೂರ್ತಿಗಳ ಸಂಗಮದ ಶಕ್ತಿಯಿಂದ ಜ್ವಾಲೆಯೊಂದು ಉದ್ಭವವಾಗಿ ಕಾತ್ಯಾಯನ ಋಷಿಯ ಮಗಳಾಗಿ ಹುಟ್ಟಿದವಳೇ ಕಾತ್ಯಾಯಿನಿ.ಕಾತ್ಯಾಯನ ಮಹರ್ಷಿಗಳ ಮಗಳಾಗಿ ಜನಿಸಿರುವುದರಿಂದ ಈಕೆಗೆ ಕಾತ್ಯಾಯಿನಿ ಎಂಬ ನಾಮಾಂಕಿತ ಬಂತು.
ಕಾತ್ಯಾಯಿನಿ ದೇವಿಯ ಉಪಾಸನೆ ಮತ್ತು ಮಹತ್ವ
ಯಾ ದೇವಿ ಸರ್ವ ಭೂತೇಷು
ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ
ಎಂಬ ಮಂತ್ರವನ್ನು ಹೇಳಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.ಕಾತ್ಯಾಯಿನಿ ಗುರುಗ್ರಹದ ಅಧಿಪತಿಯಾಗಿದ್ದು ಜ್ಞಾನ ಹಾಗೂ ಬುದ್ಧಿಶಕ್ತಿಯ ದೇವತೆ.ಈಕೆಯನ್ನು ಶೃದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಸಮೃದ್ಧಿ,ಸಂಪತ್ತು,ಲಭಿಸುವುದು ಎನ್ನಲಾಗಿದೆ.ಶತ್ರು ಬಾಧೆಯಿಂದ ದೂರವಿರಲು ಕೂಡ ದೇವಿಯನ್ನು ಪೂಜಿಸಲಾಗುತ್ತದೆ.ಅವಿವಾಹಿತರು ದೇವಿಯನ್ನು ಸ್ತುತಿಸುವುದರಿಂದ ಶೀಘ್ರ ಕಲ್ಯಾಣ ಪ್ರಾಪ್ತಿ ಯಾಗುವುದೆಂದೂ ಮತ್ತು ವಿವಾಹಿತರ ದಾಂಪತ್ಯ ಸಮಸ್ಯೆಗಳು ದೂರವಾಗುವುದೆಂದು ನಂಬಿಕೆ ಇದೆ.ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆ ನಿವಾರಿಸಿ ಅದೃಷ್ಟ ತರುವಳೆಂದು ಪುರಾಣಗಳಲ್ಲಿ ಹೇಳಲಾಗಿದೆ.ಹಿಂದೆ ಶ್ರೀಕೃಷ್ಣನನ್ನು ಪಡೆಯಲು ಗೋಪಿಕೆಯರು ಕಾತ್ಯಾಯಿನಿ ದೇವಿಯನ್ನು ಪೂಜಿಸಿದರು ಎಂಬ ದಂತಕಥೆ ಇದೆ.
ದೇವಿಗೆ ಕೆಂಪು,ಹಳದಿ,ಬಿಳಿ ಹೂಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ ,ಕುಂಕುಮ,ಅಕ್ಷತೆ,ವಸ್ತ್ರ,ಇತ್ಯಾದಿ ಸಮರ್ಪಿಸಿ ನೈವೇದ್ಯಕ್ಕೆ ಹಾಲು,ತುಪ್ಪ,ಸಿಹಿ, ಜೇನುತುಪ್ಪ ಸಮರ್ಪಿಸಲಾಗುತ್ತದೆ.ಷೋಡಶೋಪಚಾರದಿಂದ ದೇವಿಯನ್ನು ಪೂಜಿಸಿ ಮಂಗಳಾರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.
ಲೋಕಾ ಸಮಸ್ತಾ ಸುಖಿನೋ ಭವಂತು..














