28 C
Udupi
Saturday, April 25, 2026
spot_img
spot_img
HomeBlogನವೋಲ್ಲಾಸ ದಿನ - 4(ಕೂಷ್ಮಾಂಡಾ ದೇವಿ ಅವತಾರ)

ನವೋಲ್ಲಾಸ ದಿನ – 4(ಕೂಷ್ಮಾಂಡಾ ದೇವಿ ಅವತಾರ)

ದೇವಿಯ ಪೂರ್ವಕಥೆ, ಉಪಾಸನೆ ಮತ್ತು ಮಹತ್ವ

ಪ್ರಜ್ವಲಾ ಶೆಣೈ, ಕಾರ್ಕಳ


ನವರಾತ್ರಿ ಎಂದರೆ ದೇವಿಯ ನವರೂಪಗಳನ್ನು ಪೂಜಿಸುವುದು ಎಂದರ್ಥ. ನವರಾತ್ರಿಯು ವಿಶ್ವವನ್ನು ವ್ಯಾಪಿಸಿರುವ ಸಂಪೂರ್ಣ ಶಕ್ತಿಯ ಅಭಿವ್ಯಕ್ತಿಯಾಗಿದೆ.ದುಷ್ಟ ಸಂಹಾರಕ್ಕಾಗಿ ಹಾಗೂ ಶಿಷ್ಟರ ರಕ್ಷಣೆಗಾಗಿ ನವರಾತ್ರಿಯಲ್ಲಿ ದುರ್ಗೆಯು ವಿವಿಧ ಅವತಾರಗಳನ್ನು ತಾಳುತ್ತಾಳೆ. ದುರ್ಗಾ ಸಪ್ತಶತಿ ಎಂಬ ಗ್ರಂಥದಲ್ಲಿ ನವದುರ್ಗೆಯರ ಹೆಸರನ್ನು ಶಾಸ್ತ್ರೀಯವಾಗಿ ಅರ್ಥೈಸಲಾಗಿದೆ.


ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ಅವತಾರ

ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ದೇವಿಯ ನಾಲ್ಕನೇ ಅವತಾರವಾದ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ.
ಪ್ರಸನ್ನ ವದನಾಂಬುಜೇ ಶ್ರೀ ಪೀಠೇ ಸುರಪೂಜಿತೆ ಎಂದು ದೇವಿಯನ್ನು ಪೂಜಿಸುವರು. ಹೆಸರೇ ಸೂಚಿಸುವಂತೆ ಈಕೆ ಪ್ರಸನ್ನವದನೆ.ಸದಾ ಮಂದಸ್ಮಿತೆಯಾಗಿರುವ ದೇವಿಯ ಮುಖದಲ್ಲಿ ದೈವಿಕ ನಗು ಎದ್ದು ಕಾಣುತ್ತದೆ. ಸಿಂಹದ ಮೇಲೆ ಸವಾರಿ ಮಾಡುವ ಸಿಂಹವಾಹಿನಿಗೆ ಎಂಟು ತೋಳುಗಳಿವೆ. ಹೀಗಾಗಿ ದೇವಿಗೆ ಅಷ್ಟಭುಜಾದೇವಿ ಎಂಬ ಹೆಸರು ಬಂತು. ಅವಳ ಏಳು ಕೈಗಳಲ್ಲಿ ಕ್ರಮವಾಗಿ ಕಮಂಡಲ, ಬಿಲ್ಲು, ಬಾಣ, ಕಮಲದ ಹೂವು, ಮಕರಂದ ತುಂಬಿದ ಮಡಿಕೆ, ಚಕ್ರ ಹಿಡಿದಿದ್ದು ಎಂಟನೇ ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾಳೆ. ಕೈಯಲ್ಲಿರುವ ಆಯುಧಗಳು ಆಕೆಯ ಶಕ್ತಿಯ ಸಂಕೇತವಾಗಿದೆ.


ಕೂಷ್ಮಾಂಡ ಹೆಸರಿನ ಅರ್ಥ

ಕೂಷ್ಮಾಂಡ ಎನ್ನುವ ಪದವು ಹೇಗೆ ಜನ್ಮ ತಾಳಿತು ಎಂದು ನೋಡುವುದಾದರೆ ‘ಕು’ ಎಂದರೆ ‘ಸ್ವಲ್ಪ’ ‘ಉಷ್ಮಾ’ ಎಂದರೆ ‘ಉಷ್ಣ/ತಾಪ’ ಮತ್ತು ‘ಆಂಡಾ’ ಎಂದರೆ ಭ್ರೂಣ ಎಂದರ್ಥ. ದುರ್ಗಾ ಸಪ್ತಶತಿಯ ಉಲ್ಲೇಖದಲ್ಲಿ
ಕುತ್ಸಿತಃ ಉಷ್ಮಾಃ ಕೂಷ್ಷ್ಮಾಃ ಎಂದಿದೆ. ಅಂದರೆ ಸಹಿಲಸಾಧ್ಯವಾದ ತೀವ್ರ ತಾಪ ಎಂದರ್ಥ.ಈ ತಾಪವು ಉತ್ಪತ್ತಿ( ಜನ್ಮ),ಸ್ಥಿತಿ( ಬೆಳವಣಿಗೆ) ಮತ್ತು ಲಯ(ಮೃತ್ಯು) ಎಂಬ ತ್ರಿವಿಧದಲ್ಲಿ ಗೋಚರವಾಗುತ್ತದೆ.ಸಂಸ್ಕೃತದಲ್ಲಿ ಕೂಷ್ಮಾಂಡ ಎಂದರೆ ಬೂದುಗುಂಬಳಕಾಯಿ ಎಂದರ್ಥ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಕುಂಬಳಕಾಯಿ ಜ್ಞಾನವರ್ಧಕ, ತೇಜೋವರ್ಧಕ. ಇದು ದೇಹದ ತಾಪವನ್ನು ನಿವಾರಣೆ ಮಾಡಿ ತಂಪೆರೆಯುತ್ತದೆ. ಕೂಷ್ಮಾಂಡ ಎಂದರೆ ಬ್ರಹ್ಮಾಂಡ,ಭೂಮಂಡಲದ ಸೃಷ್ಟಿಕರ್ತೆ ಎನ್ನುವ ಅರ್ಥವೂ ಇದೆ. ಈಕೆ ಇಡೀ ಬ್ರಹ್ಮಾಂಡದ ಚೈತನ್ಯಶಕ್ತಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವವಳು.

ಕೂಷ್ಮಾಂಡಾ ದೇವಿಯ ಪೂರ್ವ ಕಥೆ
ದೇವಿಯ ಎಲ್ಲಾ ರೂಪಗಳಿಗಿಂತ ಕೂಷ್ಮಾಂಡಾ ದೇವಿಯ ರೂಪ ಅದ್ಭುತವಾಗಿದೆ. ಆದಿಶಕ್ತಿ ಎಂದು ಪ್ರಸಿದ್ಧಳಾಗಿರುವ ಕೂಷ್ಮಾಂಡಾ ದೇವಿ ಬ್ರಹ್ಮಾಂಡದ ಸೃಷ್ಟಿಕರ್ತೆ ಎಂಬ ಕತೆ ಇದೆ. ದೇವಿಯು ಮೊದಲು ಮೊಟ್ಟೆಯನ್ನು ಸೃಷ್ಟಿಸಿ ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದಳು ಎಂಬ ಪ್ರತೀತಿಯಿದೆ. ವಿಶ್ವವೇ ಇಲ್ಲದಿರುವಾಗ ಗಾಢ ಅಂಧಕಾರ ಕವಿದಿತ್ತು. ಆ ಸಂದರ್ಭದಲ್ಲಿ ದೇವಿ ಕೂಷ್ಮಾಂಡ ನಗುತ್ತಾಳೆ. ಆ ನಗುವಿನಿಂದ ಎಲ್ಲೆಡೆ ಬೆಳಕು ಪಸರಿಸುತ್ತದೆ. ತಾಯಿಯ ಮುಖದಲ್ಲಿರುವ ಕಾಂತಿಯ ಬೆಳಕಿನಿಂದ ಬ್ರಹ್ಮಾಂಡವು ಸೃಷ್ಟಿಸಲ್ಪಟ್ಟಿತು ಎನ್ನಲಾಗಿದೆ.ಸೂರ್ಯನಿಗೂ ಅಧಿಪತಿಯಾದ ದೇವಿಯು ಸೂರ್ಯನಿಗಿಂತ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುತ್ತಾಳೆ. ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಈಕೆ ಇರುವಲ್ಲಿ ಬೆಳಕು ಮತ್ತು ಜ್ಞಾನ ಸದಾ ಇರುವುದು. ಈಕೆ ಕಾಳಿದಾಸನಿಗೆ ಜ್ಞಾನ ನೀಡಿದವಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.


ಕೂಷ್ಮಾಂಡಾ ದೇವಿಯ ಉಪಾಸನೆ ಮತ್ತು ಮಹತ್ವ

ಯಾ ದೇವಿ ಸರ್ವಭೂತೇಷು
ಕೂಷ್ಮಾಂಡ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಎಂಬ ಮಂತ್ರದಿಂದ ದೇವಿಯನ್ನು ಪೂಜಿಸಬಹುದು.
ಜ್ಞಾನ ಹಾಗೂ ಬೆಳಕಿನ ಸಂಕೇತವಾದ ದೇವಿಯ ಆರಾಧನೆಯಿಂದ ಮನದ ಕ್ಲೇಶ ಕಳೆದು ಜ್ಞಾನದ ಹೊಂಬೆಳಕು ಮೂಡುತ್ತದೆ. ನಂಬಿದವರಿಗೆ ಆಕೆ ಸನ್ಮಾರ್ಗದಲ್ಲಿ ಮುನ್ನಡೆಸುತ್ತಾಳೆ ಎನ್ನುವ ನಂಬಿಕೆ ಇದೆ.ದೈಹಿಕ ,ಮಾನಸಿಕ,ಅಸ್ವಸ್ಥತೆಗಳು ಈಕೆಯ ಆರಾಧನೆಯಿಂದ ನಿವಾರಣೆಯಾಗುತ್ತದೆ. ಈಕೆಯ ನೆಚ್ಚಿನ ಬಣ್ಣ ಹಸಿರು.ಹಸಿರುವಸ್ತ್ರ,ಹಸಿರು ಬಣ್ಣದ ವಸ್ತುಗಳನ್ನು ಸಮರ್ಪಿಸಲಾಗುತ್ತದೆ.ಬಿಳಿ ಹಾಗೂ ಕೆಂಪು ಬಣ್ಣದ ಹೂಗಳಿಂದ ದೇವಿಯನ್ನು ಸಿಂಗರಿಸಲಾಗುತ್ತದೆ.ಷೋಡಶೋಪಚಾರಗಳಿಂದ ಪೂಜಿಸಿದರೆ ದೇವಿ ಪ್ರಸನ್ನಗೊಂಡು ಇಷ್ಟಾರ್ಥ ಸಿದ್ಧಿ ಗೊಳಿಸುತ್ತಾಳೆ ಎನ್ನುವ ನಂಬಿಕೆ ಇದೆ.ದೇವಿಗೆ ಕುಂಬಳ ಕಾಯಿ ಅತ್ಯಂತ ಪ್ರಿಯ ಎನ್ನಲಾಗಿದೆ. ಹೀಗಾಗಿ ನೈವೇದ್ಯಕ್ಕೆ ಮೊಸರನ್ನ,ಸಕ್ಕರೆ, ಸಿಹಿ ಅವಲಕ್ಕಿಯ ಜೊತೆಗೆ ಕುಂಬಳಕಾಯಿಂದ ತಯಾರಿಸಿದ ಹಲ್ವಾ ಸಮರ್ಪಿಸಬಹುದು.
ಲೋಕಾ ಸಮಸ್ತಾ ಸುಖಿನೋ ಭವಂತು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page