28 C
Udupi
Saturday, April 25, 2026
spot_img
spot_img
HomeBlogನವೋಲ್ಲಾಸ ದಿನ(ಸ್ಕಂದ ಮಾತಾ ಅವತಾರ)

ನವೋಲ್ಲಾಸ ದಿನ(ಸ್ಕಂದ ಮಾತಾ ಅವತಾರ)

ಹೆಸರಿನ ಹಿನ್ನೆಲೆ ಮತ್ತು ಪೂರ್ವಕಥೆ, ಉಪಾಸನೆ ಮತ್ತು ಮಹತ್ವ

ಪ್ರಜ್ವಲಾ ಶೆಣೈ,ಕಾರ್ಕಳ

ಶಕ್ತಿ ದೇವತೆಯ ಆರಾಧನೆಯ ವಿಶಿಷ್ಟ ಹಬ್ಬವೇ ನವರಾತ್ರಿ ಹಬ್ಬ. ನವರಾತ್ರಿಯ ಸಂದರ್ಭದಲ್ಲಿ ಸರ್ವ ಅಲಂಕಾರ ಭೂಷಿತಳಾದ ದೇವಿಯನ್ನು ನೋಡುವುದೇ ಮನಸ್ಸಿಗೆ ಆನಂದ. ಒಂಭತ್ತು ದಿನಗಳ ಕಾಲ ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುವ ಈ ಪರ್ವವನ್ನು ದುರ್ಗೋತ್ಸವ ಎಂದೂ ಕರೆಯುತ್ತಾರೆ.


ನವರಾತ್ರಿಯ ಐದನೇ ದಿನ ಸ್ಕಂದಮಾತಾ ಅವತಾರ

ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ದೇವಿಯ ಪಂಚಮ ಅವತಾರವಾದ ಸ್ಕಂದಮಾತೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ. ಸಿಂಹವಾಹಿನಿಯಾದ ಈಕೆಗೆ ನಾಲ್ಕು ಕೈಗಳಿವೆ. ಒಂದು ಕೈಯಲ್ಲಿ ತನ್ನ ಮಗ ಸ್ಕಂದನ ಶಿಶುರೂಪವನ್ನು ಹಾಗೂ ಇನ್ನೊಂದು ಕೈಯಲ್ಲಿ ಅಭಯಮುದ್ರೆಯನ್ನು ಹಿಡಿದು ಸದಾ ತನ್ನ ಭಕ್ತರಿಗೆ ಅಭಯವನ್ನು ಕರುಣಿಸುತ್ತಾಳೆ. ಉಳಿದ ಎರಡು ಕೈಗಳಲ್ಲಿ ಕಮಲದ ಹೂವನ್ನು ಹಿಡಿದಿದ್ದು ಸುಂದರವಾಗಿ ಗೋಚರಿಸುತ್ತಾಳೆ. ಕಮಲದ ಆಸನದಲ್ಲಿ ವಿರಾಜಮಾನಳಾಗಿರುವ ಕಾರಣ ಈಕೆಯನ್ನು ಪದ್ಮಾಸನಾ ದೇವಿ ಎಂದೂ ಕರೆಯುತ್ತಾರೆ. ತನ್ನ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ. ಈ ರೂಪದಲ್ಲಿ ತಾಯಿಯ ಮುಖದಲ್ಲಿ ಸಂತೋಷ ಹಾಗೂ ಸಂತೃಪ್ತಿ ಭಾವ ಕಾಣಿಸುತ್ತದೆ. ಅತ್ಯಂತ ಸ್ವಚ್ಛ ನಿರ್ಮಲ ಶ್ವೇತ ವರ್ಣದಿಂದ ಕಂಗೊಳಿಸುವ ಈಕೆಯ ಮುಖಾರವಿಂದ ಮನಮೋಹಕವಾಗಿದೆ.


ಸ್ಕಂದಮಾತಾ ಹೆಸರಿನ ಹಿನ್ನೆಲೆ ಮತ್ತು ಪೂರ್ವ ಕಥೆ

ದೇವಿಗೆ ಸ್ಕಂದಮಾತಾ ಎಂದು ಹೆಸರು ಬರಲು ಇಲ್ಲೊಂದು ಪೌರಾಣಿಕ ಕಥೆಯಿದೆ. ಹಿಂದೆ ತಾರಕಾಸುರನೆಂಬ ಅಸುರ ತನ್ನ ಅಂತ್ಯ ಕೇವಲ ಶಿವನಸುತನಿಂದ ಮಾತ್ರವೇ ಆಗಬೇಕೆಂದು ಬ್ರಹ್ಮನಿಂದ ವರ ಪಡೆದಿದ್ದ.ಶಿವನೊಬ್ಬ ವಿರಾಗಿ ಅವನಿಗೆ ಮಕ್ಕಳಾಗಲು ಸಾಧ್ಯವೇ ಇಲ್ಲ. ಆದ್ದರಿಂದ ತನಗೆ ಸಾವೇ ಬಾರದೆಂಬ ಧೂರ್ತ ಯೋಚನೆ ತಾರಕಾಸುರನಿಗೆ ಬಂದಿತು. ಆದರೆ ಮುಂದೆ ಶಿವ ಪಾರ್ವತಿಯರು ವಿವಾಹವಾಗುವ ಸಂದರ್ಭ ಸೃಷ್ಟಿಯಾಯಿತು. ಸ್ಕಂದ ಅಥವಾ ಷಣ್ಮುಖ ಶಿವ ಪಾರ್ವತಿಯರ ಸುತನಾಗಿ ಜನ್ಮ ತಾಳುತ್ತಾನೆ. ದೇವತೆಗಳೆಲ್ಲರೂ ತಮ್ಮ ದೇವ ಸೈನ್ಯಕ್ಕೆ ಸ್ಕಂದನನ್ನೇ ಸೇನಾನಿಯನ್ನಾಗಿ ಮಾಡುತ್ತಾರೆ. ಎಲ್ಲಾ ದೇವತೆಗಳ ಶಕ್ತಿಯನ್ನು ಪಡೆದ ಸ್ಕಂದನು ದೇವಸೇನಾ ಸಮೇತನಾಗಿ ಘೋರ ಯುದ್ಧ ಮಾಡಿ ತಾರಕಾಸುರನನ್ನು ಕೊಲ್ಲುವನು. ಹೀಗೆ ಜಗತ್ ಕಲ್ಯಾಣಕ್ಕಾಗಿ ಜನ್ಮತಾಳಿದ ಸ್ಕಂದನನ್ನು ಹೆತ್ತ ದೇವಿಗೆ ಸ್ಕಂದಮಾತೆ ಎಂಬ ಹೆಸರು ಬಂದಿತು.

ಸ್ಕಂದಮಾತೆಯ ಉಪಾಸನೆ ಮತ್ತು ಮಹತ್ವ

ಸಿಂಹಾಸನಗತಾ ನಿತ್ಯಂ ಪದ್ಮಾಂಚಿತ ಕರದ್ವಯೇ
ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ

ಎಂಬ ಶ್ಲೋಕವನ್ನು ಪಠಿಸುವುದರ ಮೂಲಕ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತೆಗೆ ಕೆಂಪುಬಣ್ಣದ ಗುಲಾಬಿ ಹೂ ಮತ್ತು ಪಾರಿಜಾತ ಬಹಳ ಪ್ರಿಯವಾದದ್ದು ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ದೇವಿಗೆ ಸಿಂಧೂರ, ಕುಂಕುಮ,ಅಕ್ಷತೆ,ಹಣ್ಣುಗಳನ್ನು ಅರ್ಪಿಸಿ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ.ವಿಶೇಷವಾಗಿ ದೇವಿಗೆ ಬಾಳೆಹಣ್ಣು ಮತ್ತು ಪಾಯಸದ ನೈವೇದ್ಯ ಸಮರ್ಪಿಸಲಾಗುತ್ತದೆ.


ಯಾ ದೇವಿ ಸರ್ವ ಭೂತೇಷು
ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಎಂಬ ಮಂತ್ರವನ್ನು ಪಠಿಸಿ ದೇವಿಯನ್ನು ಆರಾಧಿಸಲಾಗುತ್ತದೆ.
ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಶಕ್ತಿ,ನೆಮ್ಮದಿ,ಹಾಗೂ ಮೋಕ್ಷ ದೊರೆಯುವುದೆಂಬ
ನಂಬಿಕೆ ಇದೆ.ತನ್ನ ಮಡಿಲಲ್ಲಿ ಸ್ಕಂದನನ್ನು ಕುಳ್ಳಿರಿಸಿದ ಕಾರಣ ಭಕ್ತರಿಗೆ ಮಾತೆಯ ಆಶೀರ್ವಾದವೂ ಅಲ್ಲದೇ ಸ್ಕಂದನ ಅಭಯವೂ ಸಿಗುವುದು.ಈಕೆಯ ಪೂಜೆಯಿಂದ ಸಂತೋಷ ,ಸಮೃದ್ಧಿಯೊಂದಿಗೆ ಸಂತಾನ ಪ್ರಾಪ್ತವಾಗುತ್ತದೆ ಮತ್ತು ಸಕಲ ವ್ಯಾಪಾರ,ವ್ಯವಹಾರಗಳು ಅಡೆತಡೆ ಯಿಲ್ಲದೆ ಸಾಗುವುದು ಎಂಬ ನಂಬಿಕೆ ಇದೆ.ಈ ರೂಪದಲ್ಲಿ ತಾಯಿ ಮಮಕಾರ ವಾತ್ಸಲ್ಯಗಳ ಪ್ರತಿರೂಪವಾಗಿ ಕಾಣಿಸುವಳು.
ಸರ್ವೇ ಜನಾಃ ಸುಖಿನೋ ಭವಂತು
ಸಮಸ್ತ ಸನ್ಮಂಗಳಾನಿ ಭವಂತು


spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page