
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ತಾಲೂಕಿನ ಕವಲಗಿ (ಕೆ) ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಹಾಗೂ ರಾಯಣ್ಣನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ್ದು ಈ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂದು ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ನನ್ನನ್ನು ಅಷ್ಟು ಸುಲಭ ಅಂದುಕೊಳ್ಳಬೇಡಿ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಬದುಕು ತೆರೆದ ಪುಸ್ತಕ ಎಂದು ಬಣ್ಣಿಸಿದ ಸಿಎಂ ಜತೆಗೆ, ಹಿಂದೆಂದೂ ಸಣ್ಣ ತಪ್ಪು ಮಾಡದವ ಇಂದು ತಪ್ಪು ಮಾಡಲು ಸಾಧ್ಯವೇ? ನಾನು ಹಿಂದೆಯೂ ತಪ್ಪು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳಿ ವಿಪಕ್ಷಗಳು ತಮ್ಮ ವಿರುದ್ದ ಮಾಡುತ್ತಿರುವ ಆರೋಪಗಳ ವಿರುದ್ಧ ತಿರುಗೇಟು ನೀಡಿದರು.
ಮುಡಾ ಪ್ರಕರಣದಲ್ಲಿ ಏನೇನೂ ಇಲ್ಲ. ಆದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದಿಲ್ಲಿಯಿಂದ ರಾಜಭವನ ದವರೆಗೂ ನನ್ನ ವಿರುದ್ಧ ಪಿತೂರಿ ಹೆಣೆಯುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆಗಲು ಬಿಡಬಾರದು. ಸಂಗೊಳ್ಳಿ ರಾಯಣ್ಣನ ಹೋರಾಟದ ನಮ್ಮೊಳಗಿದೆ ಕಿಚ್ಚು ಎಂದು ಆರೋಪ ಮಾಡುವವರು ಮೊದಲು ಅರಿತುಕೊಳ್ಳಲಿ ಎಂದು ಎಚ್ಚರಿಸಿದರು.































































































































