
ನವದೆಹಲಿ: “ಭಕ್ತರಿಗೆ ದೇವರನ್ನು ಸ್ಪರ್ಶಿಸಲು ಅವಕಾಶ ಇಲ್ಲದಿದ್ದರೆ, ಅವರ ಹಕ್ಕುಗಳನ್ನು ಸಂವಿಧಾನ ಕಾಪಾಡುವುದಿಲ್ಲವೇ?” ಎಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತು ಇತರ ಆಚರಣೆಗಳ ಬಗ್ಗೆ 9 ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸುತ್ತಿದ್ದು ಅರ್ಚಕರ ಪರ ವಾದಿಸಿದ ಹಿರಿಯ ವಕೀಲ ವಿ. ಗಿರಿ, “ಭಕ್ತರು ದೇವಾಲಯಕ್ಕೆ ಬಂದಾಗ ದೇವರ ಸ್ವಭಾವವನ್ನು ಒಪ್ಪಿಕೊಳ್ಳಬೇಕು; ಅಲ್ಲಿನ ಆಚರಣೆಗಳು ಧರ್ಮದ ಮೂಲಭೂತ ಭಾಗವಾಗಿವೆ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಅಮಾನುಲ್ಲಾ, “ಪೂರ್ಣ ಭಕ್ತಿಯೊಂದಿಗೆ ಬಂದ ಭಕ್ತನಿಗೆ ಕೆಲವು ಕಾರಣಗಳಿಂದ ದೇವರನ್ನು ಮುಟ್ಟಲು ಅವಕಾಶ ನಿರಾಕರಿಸಿದರೆ, ಸಂವಿಧಾನ ರಕ್ಷಣೆಗೆ ಬರುವುದಿಲ್ಲವೇ?” ಎಂದು ಪ್ರಶ್ನಿಸಿ, “ಸೃಷ್ಟಿಕರ್ತ ಮತ್ತು ಸೃಷ್ಟಿ ನಡುವೆ ಭೇದ ಇರಬಾರದು” ಎಂದು ಹೇಳಿದರು.













