ಪಡುಬಿದ್ರಿ ಸಮುದ್ರ ತೀರದಲ್ಲಿ ವಿಷ್ಣು ಸಹಸ್ರನಾಮ ಮಹಾಭಿಯಾನ
ವಿಷ್ಣು ಸಹಸ್ರನಾಮ ಮಹಾಭಿಯಾನ ಪಡುಬಿದ್ರೆ ಕಡಲತಡಿಯಲ್ಲಿ ಜೇಸಿ ಇಂಟರ್ ನ್ಯಾಷನಲ್ ಶಾಲಾ ಮಕ್ಕಳಿಂದ ಬೋರ್ಗರೆದ ವಿಷ್ಣು ಸಹಸ್ರನಾಮ.
ಪ್ರತಿದಿನ ಸಮುದ್ರ ವಿಹಾರಕ್ಕೆಂದು ಬರುವವರು ಮೋಜು, ಮಸ್ತಿ ಮಾತ್ರವಲ್ಲದೆ ಅನೇಕ ಕೆಟ್ಟ ನಡವಳಿಕೆಗಳಿಗೆ ಕಡಲತೀರ ಸಾಕ್ಷಿಯಾಗುತ್ತಿದೆ. ಆದರೆ ಇಂದು ಈ ಎಲ್ಲ ಪಾಪಗಳಿಗೆ ಪರಿಹಾರ ಆರಂಭವಾಗಿದೆ. ಶ್ರೇಷ್ಠ ಮಂತ್ರ ವಿಷ್ಣು ಸಹಸ್ರನಾಮ ಪಾರಾಯಣ ಕಡಲ ದಡದಲ್ಲಿ ಗುಂಜಿಸುತ್ತಿದೆ. ಅದರಲ್ಲೂ 216 ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರು ಈ ಕಾರ್ಯದಲ್ಲಿ ತೊಡಗಿದ್ದು ಅರ್ಥಗರ್ಭಿತ. ಇನ್ನಾದರೂ ಇಲ್ಲಿ ಮೋಜಿಗಾಗಿ ಬರುವವರಿಗೆ ಇದೊಂದು ಮಾದರಿಯಾಗಲಿ. ಧನಾತ್ಮಕ ಅಲೆಗಳು ಈ ಮೂಲಕ ಕಡಲತೀರದಲ್ಲಿ ಪ್ರಾರಂಭವಾಗಿದೆ. ಅದು ಪ್ರತಿ ಮನೆಗಳಲ್ಲಿಯೂ ಮೊರೆಯಲಿ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಪೂರ್ವ ವಲಯ ಉಪಾಧ್ಯಕ್ಷ ಸದಾಶಿವ ಪಡುಬಿದ್ರೆ ಅವರು ಹೇಳಿದರು.
ಅವರು ಜೇಸಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿದಿನ ಇಂತಹ ಸತ್ಕಾರ್ಯ ನಡೆಯುತ್ತಿದೆ ಎಂದು ಕೇಳಿ ಪುಳಕಿತನಾಗಿದ್ದೇನೆ. ಇಂತಹ ಸತ್ಕಾರ್ಯ ಎಲ್ಲರು ಗುರುತಿಸುವಂತಾಗಲಿ. ಎಲ್ಲ ಶಾಲೆಗಳು ಇದನ್ನು ಅನುಸರಿಸುವಂತಾಗಲಿ ಎಂದು ನುಡಿದರು.
ಕಾರ್ಕಳದಿಂದ ಬಂದ ವಿದ್ಯಾರ್ಥಿಗಳಿಗೆ ಕಡಲ ತೀರದಲ್ಲಿ ಬೇಕಾದ ವ್ಯವಸ್ಥೆ ನೀಡಿ ಸಹಕರಿಸಿದ ವಿಜೇಶ್ ಪಡುಬಿದ್ರೆ ಮತ್ತು ಅವರ ತಂದೆ ಶ್ರೀ ರತ್ನಾಕರ, ತಾಯಿ ನಳಿನಿ ಯವರನ್ನು ಗೌರವಿಸಲಾಯಿತು.
ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಜೈನ್ ಮಾತನಾಡಿ, ಪ್ರತಿದಿನ ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ್, ಭಗವದ್ಗೀತೆ ಪಾರಾಯಣ, ಯೋಗಭ್ಯಾಸ ನಡೆಸುತ್ತಿದ್ದಾರೆ. ಆ ಮೂಲಕ ಭಾರತೀಯ ಸಂಸ್ಕೃತಿಗೆ ಪೂರ್ಣ ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಬದ್ಧತೆ, ಪೋಷಕರ ಸಹಕಾರ ನಾವೆಲ್ಲ ಗಮನಿಸುವ ಅಂಶ. ಶಿಕ್ಷಕರ ಶ್ರಮ ಖಂಡಿತಾ ಮೆಚ್ಚುವಂತಹದ್ದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಕೆ, ಪೂರ್ವಾಧ್ಯಕ್ಷ ಹರಿಶ್ಚಂದ್ರ ಕುಲಾಲ್, ಸುದೇಶ್ ಕುಮಾರ್, ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷೆ ಪಲ್ಲವಿ, ಶ್ರೀ ಸತೀಶ್ ಕಾಮತ್, ಮುಖ್ಯೋಪಾಧ್ಯಾಯನಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.