
ಬೆಂಗಳೂರು: ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳು ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿಗೆ ತಾವು ಮೇಲ್ಜಾತಿಯವರು ಎಂದು ಮಾಹಿತಿ ಕೊಡಲು ನಿರಾಕರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವವರು ಸಂವಿಧಾನ ವಿರೋಧಿಗಳು ಮತ್ತು ದೇಶದ್ರೋಹಿಗಳು ಎಂದು ಹೇಳಿದ್ದಾರೆ.
‘ಮೇಲ್ಜಾತಿಯವರಿಗೆ ಹಿಂದುಳಿದ ಸಮೀಕ್ಷೆ ಬೇಕಾಗಿಲ್ಲ. ಸಿಎಂ ಸಿದ್ದರಾಮಯ್ಯನವರು ಬಹಳ ಧೈರ್ಯ ಮಾಡಿ ಈ ಸಮೀಕ್ಷೆಯನ್ನು ಮಾಡುತ್ತಿದ್ದಾರೆ. ಆದರೆ, ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದರೆ ಅವರು ಸಂವಿಧಾನ ವಿರೋಧಿಗಳು, ದೇಶದ್ರೋಹಿಗಳು ಅಂತಾನೆ ಹೇಳಬೇಕಾಗುತ್ತೆ ಎಂದು ಹೇಳಿದರು.
‘ಅವರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು. ಸರ್ಕಾರದಿಂದ 1 ರೂಪಾಯಿಗೆ ಭೂಮಿ ಪಡೆದುಕೊಂಡಿರುತ್ತಾರೆ. ಸುಮಾರು 35 ಸಾವಿರ ಕೋಟಿ (ಪರೋಕ್ಷವಾಗಿ) ತೆರಿಗೆ ಕಟ್ಟೋರು ಇದ್ದಾರೆ. ಆದರೆ, ನಿಜವಾಗಿಯೂ ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ’ ಎಂದು ನೇರವಾಗಿ ಆರೋಪ ಮಾಡಿದರು.
ಇದರ ಮೂಲಕ, ಈ ಸಮೀಕ್ಷೆ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತ ದತ್ತಾಂಶವು ತಮ್ಮ ತೆರಿಗೆ ಮತ್ತು ಆಸ್ತಿಯ ವಿಷಯಗಳನ್ನು ಬಹಿರಂಗಪಡಿಸುತ್ತದೆ ಎಂಬ ಭಯ ಅವರಲ್ಲಿದೆ ಎಂದು ಪರೋಕ್ಷವಾಗಿ ಟೀಕಿಸಿದರು.






























































































































