
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡರನ್ನು ನೆನೆದು ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾದರು. “ಒಬ್ಬರಿಗಾಗಿ ಮತ್ತೊಬ್ಬರು ಊಟ ಮಾಡದೇ ಕಾಯುತ್ತಿದ್ದರು. ಅವರಿಬ್ಬರ ಅನ್ಯೋನ್ಯತೆ ಅಪರೂಪದದ್ದು” ಎಂದು ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು.
ಚೆನ್ನಮ್ಮ ಅವರಿಗೆ ಕಳೆದ ಒಂದು ವರ್ಷದಿಂದ ಉಸಿರಾಟದ ತೊಂದರೆ ಇತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪದ್ಮನಾಭನಗರದ ನಿವಾಸದಲ್ಲೇ ಐಸಿಯು ಮಾದರಿಯ ವ್ಯವಸ್ಥೆ ಮಾಡಿ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆರೋಗ್ಯ ಸಮಸ್ಯೆಯ ನಡುವೆಯೂ ಅವರು ವೀಲ್‌ಚೇರ್‌ನಲ್ಲೇ ಪೂಜೆ ಸೇರಿದಂತೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಮಂಜುನಾಥ್ ತಿಳಿಸಿದರು.
ಹಿಂದೆ ನಡೆದ ಆ್ಯಸಿಡ್ ದಾಳಿಯ ವೇಳೆ ಬದುಕುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ವೈದ್ಯರು ಹೇಳಿದ್ದರೂ, ಅವರು ಧೈರ್ಯದಿಂದ ಬದುಕು ನಡೆಸಿದರು. ಮುಖಕ್ಕೆ ಗಾಯವಾಗಿದ್ದರಿಂದ ಕನ್ನಡಿಗೆ ಕವರ್ ಹಾಕಿದ್ದೆವು. ಆದರೆ, “ನಾನು ಇದನ್ನು ಒಪ್ಪಿಕೊಂಡಿದ್ದೇನೆ, ಕವರ್ ತೆಗೆದುಹಾಕಿ” ಎಂದು ಹೇಳಿದ್ದ ಅವರ ಸರಳತೆ ಮತ್ತು ತಾಳ್ಮೆಯನ್ನು ಕಳೆದ 40 ವರ್ಷಗಳಿಂದ ನೋಡಿದ್ದೇನೆ ಎಂದು ಅವರು ಭಾವುಕರಾದರು.
ಚೆನ್ನಮ್ಮ ದೇವೇಗೌಡರ ಅಂತ್ಯಕ್ರಿಯೆ ಜುಲೈ 20ರಂದು ಮಧ್ಯಾಹ್ನ 2 ಗಂಟೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ.
ಈ ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಸಲು ಕಾರಣವನ್ನು ವಿವರಿಸಿದ ಡಾ. ಮಂಜುನಾಥ್, ಚೆನ್ನಮ್ಮ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಇದೇ ಭಾಗದಲ್ಲಿ ಕಳೆದಿದ್ದು, ಸ್ಥಳೀಯ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಒಮ್ಮತದಂತೆ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದ್ದು, ಅದಕ್ಕೂ ಮುನ್ನ ಮನೆಯಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಂತ್ಯಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳನ್ನೂ ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

















































