
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ಸೋಮವಾರದಿಂದ ಆರಂಭವಾಗುತ್ತಿದ್ದು, ವಿವಿಧ ವಿವಾದಾತ್ಮಕ ವಿಷಯಗಳ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ. ಹೀಗಾಗಿ ಅಧಿವೇಶನದ ಆರಂಭದಿಂದಲೇ ತೀವ್ರ ಚರ್ಚೆ ಹಾಗೂ ವಾಗ್ವಾದ ನಡೆಯುವ ಸಾಧ್ಯತೆ ಇದೆ.
ಆಗಸ್ಟ್ 13ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಎಂಟು ಪ್ರಮುಖ ಮಸೂದೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ಆರೋಪ, ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದ ವಿವಾದಗಳು ಕಲಾಪದ ಪ್ರಮುಖ ಚರ್ಚಾ ವಿಷಯಗಳಾಗುವ ನಿರೀಕ್ಷೆಯಿದೆ.
ಅಧಿವೇಶನದಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ–2026 ಕುರಿತು ನಾಲ್ಕು ಗಂಟೆ ಹಾಗೂ ಆದಾಯ ತೆರಿಗೆ (ತಿದ್ದುಪಡಿ) ಮಸೂದೆ–2026 ಕುರಿತು ಮೂರು ಗಂಟೆಗಳ ಚರ್ಚೆಗೆ ಸಮಯ ನಿಗದಿಯಾಗಿದೆ.
ಇದರ ಜೊತೆಗೆ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ, ಜನನ ಮತ್ತು ಮರಣಗಳ ನೋಂದಣಿ ತಿದ್ದುಪಡಿ ಹಾಗೂ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ತಿದ್ದುಪಡಿ ಸೇರಿದಂತೆ ಹಲವು ಪ್ರಮುಖ ಮಸೂದೆಗಳ ಮೇಲೂ ಚರ್ಚೆ ನಡೆಯಲಿದೆ. ಚರ್ಚೆಯ ಅವಧಿಯನ್ನು ಅಂತಿಮಗೊಳಿಸಲು ಸ್ಪೀಕರ್ ನೇತೃತ್ವದಲ್ಲಿ ಕಾರ್ಯಕಲಾಪ ಸಲಹಾ ಸಮಿತಿ ಸಭೆ ಭಾನುವಾರ ನಡೆದಿದೆ.
ಜನರ ಸಮಸ್ಯೆಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆಸಿ, ಉಭಯ ಸದನಗಳ ಕಲಾಪ ಸುಗಮವಾಗಿ ನಡೆಯಲು ಎಲ್ಲ ರಾಜಕೀಯ ಪಕ್ಷಗಳುe ಸಹಕರಿಸಬೇಕು ಎಂದು ಸ್ಪೀಕರ್ ಮನವಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.

















































