
ನವದೆಹಲಿ: ಕೋವಿಡ್ ಲಸಿಕೆಗಳಿಂದ ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರು ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ಯುನೈಟೆಡ್ ಕಿಂಗ್‌ಡಂನಂತಹ ವಿದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು.
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು ಆರಂಭದಲ್ಲಿ, ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆಗಳು ಜಾಗತಿಕವಾಗಿ ನೆರವು ನೀಡಿವೆ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ. ಅರ್ಜಿದಾರರು ನಿಜವಾಗಿಯೂ ನೊಂದಿದ್ದರೆ, ಅವರು ಆರ್ಟಿಕಲ್ 32 ಅರ್ಜಿಗಳನ್ನು ಸಲ್ಲಿಸುವ ಬದಲು ಕ್ಲಾಸ್ ಆಕ್ಷನ್ ಸೂಟ್‌ಗಳನ್ನು ಸಲ್ಲಿಸಬೇಕು ಎಂದು ಸಿಜೆಐ ಹೇಳಿದರು.
‘ಲಸಿಕೆ ತೆಗೆದುಕೊಂಡ ನಂತರ ಅರ್ಜಿದಾರರು ವೈಯಕ್ತಿಕವಾಗಿ ಯಾವುದೇ ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆಯೇ’ ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದರು. ಅದಕ್ಕೆ ವಕೀಲರು ನಕಾರಾತ್ಮಕವಾಗಿ ಉತ್ತರಿಸಿದರು.













