
ಗ್ರಾಮಸ್ಥರೇ ಸೇರಿಕೊಂಡು ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದಾರೆ. ಸ್ವಂತ ಹಣ ವ್ಯಯಿಸಿ ಕಾಮಗಾರಿ ನಡೆಸಿದ್ದಾರೆ. ಸರಕಾರದ ಅನುದಾನಕ್ಕೆ ಕಾದು ಕಾದು ಸುಸ್ತಾಗಿ ಕೊನೆಗೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಕನಿಷ್ಠ ಮೂಲ ಸೌಕರ್ಯವನ್ನು ಪಡೆಯುವ ಹತ್ತು ವರ್ಷಗಳ ಕನಸು ಕಮರಿದ ಪರಿಣಾಮ, ಈ ನಿರ್ಧಾರಕ್ಕೆ ಬಂದಿದ್ದು, ಸ್ಥಳೀಯಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದು ಕಾಂತಾವರ ಗ್ರಾ.ಪಂ.ವ್ಯಾಪ್ತಿಯ 1ನೇ ವಾರ್ಡ್ ಅಂಬರೀಷ ಗುಹೆಗೆ ತೆರಳುವ ಗೋಳಿಕಟ್ಟೆ ರಸ್ತೆಯ ದುಸ್ಥಿತಿ. ಗ್ರಾ.ಪಂ.ಗೆ ಸತತ ಮನವಿ ನೀಡುತ್ತಲೇ ಬರುತ್ತಿದ್ದ ಸ್ಥಳೀಯರ ಅಹವಾಲು ಮನ್ನಿಸಿ, ಕಳೆದ 4 ವರ್ಷಗಳ ಹಿಂದೆ 100 ಮೀ. ರಸ್ತೆ ರಸ್ತೆ ಮಾತ್ರ ಕಾಂಕ್ರಿಟೀಕರಣಗೊಂಡು ಮುಕ್ತಾಯ ಕಂಡಿತ್ತು. ಬಳಿಕದ ದಿನಗಳಲ್ಲಿ ಅತ್ತ ಯಾರೂ ಸುಳಿಯದ ಪರಿಣಾಮ, ರಸ್ತೆಯ ಅವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಟ್ಟುತ್ತಲೇ ಸಾಗಿತ್ತು. ಸುಮಾರು 2.5 ಕಿ.ರ್ಮೀ ಉದ್ದದ ಈ ರಸ್ತೆ ಕಲ್ಲು ಗುಂಡಿಗಳಿಂದ ತುಂಬಿದ್ದು, ಮಣ್ಣ ರಸ್ತೆಯ ಮೇಲಿನ ಪ್ರಯಾಣ ಹರಸಾಹಸ ಪಡುವಂತಾಗಿತ್ತು. ಆ ಭಾಗದ ವಿದ್ಯಾರ್ಥಿಗಳು, ವಯೋವೃದ್ದರು ಮತ್ತು ಅನಾರೋಗ್ಯ ಪೀಡಿತ ಸಂದರ್ಭಗಳಲ್ಲಿ ಪಡುವ ಸಂಕಷ್ಟಯಾರಿಗೂ ಅಲಿಸದ ರೀತಿಯಲ್ಲಿ ಮುಂದುವರೆದಿತ್ತು.
ಪರಿಣಾಮ ಗ್ರಾಮಸ್ಥರು ಸರ್ಕಾರದ ವಿರುದ್ಧ ಸಿಡಿದೆದ್ದರು.ಕಾಂಕ್ರಿಟ್ ರಸ್ತೆ: 2.5ಕಿ.ಮೀ. ಮಣ್ಣಿನ ರಸ್ತೆಗೆ ಕೇವಲ 100 ಮೀ. ಕಾಂಕ್ರಿಟ್ ಹಾಕಲಾಗಿದೆ. ಕಾಂಕ್ರಿಟ್ ರಸ್ತೆಯ ತುತ್ತತುದಿಯಲ್ಲಿ ನೀರು ರಸ್ತೆಯ ಮೇಲೆ ಹರಿಯುವ ಪರಿಣಾಮ ಬೃಹದಾಕಾರದ ಹೊಂಡ ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾಲದಲ್ಲಂತೂ ಈ ರಸ್ತೆಯ ಮೇಲಿನ ಪ್ರಯಾಣ ಜೀವಕ್ಕೂ ಸಂಚಕಾರ ತರುವ ಸ್ಥಿತಿಯಲ್ಲಿದ್ದು, ಬೇಸತ್ತ ಸ್ಥಳೀಯರು ಹೆಚ್ಚಿನಅನಾಹುತ ಸಂಭವಿಸುವ ಮುನ್ನವೇ ಈ ಬಾರಿ ಎಚ್ಚೆತ್ತು ಕೊಂಡಿದ್ದಾರೆ. ಸುಮಾರು 30 ಮೀ. ರಸ್ತೆಗೆ ಜಲ್ಲಿ, ಕಲ್ಲು, ಸಿಮೆಂಟ್ ಖರೀದಿಸಿ ಶ್ರಮದಾನದ ಮೂಲಕ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದಾರೆ. ಎಲ್ಲ ವೆಚ್ಚಗಳನ್ನು ಸ್ವತಃ ಸ್ಥಳೀಯರೇ ಭರಿಸುವ ಮೂಲಕ ಗ್ರಾಪಂಗೆ ಸಡ್ಡು ನೀಡಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವಂತೆ ಗ್ರಾಪಂಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
ರಸ್ತೆಯುದ್ದಕ್ಕೂ ದಾರಿದೀಪಗಳ ಅಳವಡಿಕೆ ಕೂಡ ಸಾಧ್ಯವಾಗಿಲ್ಲ. ಕಾಡು ಪ್ರದೇಶದಲ್ಲಿರುವ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಸೂರ್ಯಾಸ್ತವಾಗುತ್ತಿದ್ದಂತೆ ಹುಲಿ, ಚಿರತೆ ಮುಂತಾದ ಕಾಡುಮೃಗಗಳು ಸಂಚರಿಸುವುದು ಜನತೆಗೆ ಭಯ ಹುಟ್ಟಿಸುತ್ತಿದೆ. ಇಲ್ಲಿ ಭರವಸೆಗಳು ಕೇವಲ ಚುನಾವಣೆ ಸಂದರ್ಭ ಹೊರತು ಅಧಿಕಾರಕ್ಕೆ ಬಂದ ಬಳಿಕ ಆ ಭಾಗದ ಜನತೆಯನ್ನೇ ಮರೆಯುತ್ತಾರೆ ಎನ್ನುವುದು ಸ್ಥಳೀಯರ ಆರೋಪ














