
ಬೆಂಗಳೂರು: ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿ ಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರತಂಡವು ಚಿತ್ರೀಕರಣ ನಡೆಸುತ್ತಿದ್ದು ಈ ವೇಳೆ ಯಾವುದಾದರೂ ನಿಯಮ ಉಲ್ಲಂಘಿಸಿದರೆ ಚಿತ್ರೀಕರಣ ನಿರ್ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಧಾನಸೌಧದಲ್ಲಿ ಮಾತನಾಡಿದ ವೇಳೆ ತಿಳಿಸಿದ್ದಾರೆ.
ಹೊಂಬಾಳೆ ಫಿಲಂಸ್ ಚಿತ್ರತಂಡವು ಕಾಂತಾರ ಚಾಪ್ಟರ್ 1 ನ ಚಿತ್ರೀಕರಣವನ್ನು ಗವಿಬೆಟ್ಟ ಮತ್ತು ಸುತ್ತಮುತ್ತಲ ಪರಿಭಾವಿತ ಅರಣ್ಯದ ಅಂಚಿನ ಗೋಮಾಳದಲ್ಲಿ ನಡೆಸಲು 23 ದಿನದ ಅನುಮತಿ ಕೋರಿದ ಹಿನ್ನೆಲೆಯಲ್ಲಿ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಷರತ್ತುಬದ್ದ ಅನುಮತಿ ನೀಡಿದ್ದಾರೆ.
ಆದರೆ ಚಿತ್ರತಂಡವು ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದ್ದು ವಿಷಯ ತಿಳಿಯುತ್ತಿದ್ದಂತೆ ಸಚಿವ ಈಶ್ವರ್ ಖಂಡ್ರೆ ಈ ಕುರಿತು ಅಧಿಕಾರಿಗಳಿಗೆ ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಚಿತ್ರತಂಡದಿಂದ ಯಾವುದಾದರೂ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಹಾನಿಯಾದಲ್ಲಿ ಕೂಡಲೇ ಚಿತ್ರಿಕರಣ ಸ್ಥಗಿತಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.





















