26.5 C
Udupi
Monday, July 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 572

ಭರತೇಶ ಶೆಟ್ಟಿ, ಎಕ್ಕಾರು

ಇತ್ತ ಶ್ರೀಕೃಷ್ಣನೂ ಪಾಂಡವ ಪಕ್ಷದ ಸೇನೆ ಸಜ್ಜಾಗಲು ಆದೇಶ ನೀಡಿದನು. ಪಾರ್ಥನೂ, ಸಾತ್ಯಕಿ, ಅನಿರುದ್ಧ, ಪ್ರದ್ಯುಮ್ನಾದಿಗಳು, ಬಬ್ರುವಾಹನ, ವೃಷಕೇತು, ಸುವೇಗ, ಪ್ರವೀರ, ನೀಲಧ್ವಜ ಹೀಗೆ ಪಾಂಡವ ಸೇನೆ ಅತಿಬಲಯುತವಾಗಿ ಸಿದ್ಧಗೊಂಡಿತು.

ರತ್ನಪುರದ ಅಗಾಧ ಸೇನೆಯೊಂದಿಗೆ ತಾಮ್ರಧ್ವಜನು ಎದುರಾದನು. ನೋಡುತ್ತಿದ್ದಾನೆ ಶ್ರೀಕೃಷ್ಣ ಸಾರಥ್ಯದ ಪಾರ್ಥನ ರಥ ಕಂಡೊಡನೆ ಭಕ್ತಿಯಿಂದ ಮೈಮರೆತನು. ಶ್ರೀಕೃಷ್ಣ ಪರಮಾತ್ಮನನ್ನು ಸಂಸ್ತುತಿಸಿ ವಿಧ ವಿಧ ಸ್ತುತಿಗಳಿಂದ ಮನಪ್ರೀತಗೊಳಿಸಿ ವಂದಿಸಿದನು. ಪರಮೋತ್ಕೃಷ್ಟ ಭಕ್ತನ ಭಕ್ತಿಯ ಪಾರಮ್ಯ ಸುಧೆ ತನ್ನೆಡೆ ಹರಿದು ಬಂದಾಗ ದೇವನಿಗಾದರು ತಡೆದು ನಿಲ್ಲಲಾಗುತ್ತದೆಯೇ? ಒಮ್ಮೆಗೆ ಮಲ್ಲಿಗೆಯ ಮೊಗ್ಗಿನಂತೆ ಮುಚ್ಚಿಕೊಂಡಿದ್ದರೂ ಕೃಷ್ಣ ಅರಳಿ ಪರಿಮಳ ಸೂಸುವಂತೆ ಹಿಗ್ಗಿ ಸೌಗಂಧದ ಕರುಣಾದೃಷ್ಟಿ ಬೀರಿ ಅನುಗ್ರಹಿಸಿದನು. ಭಗವತ್ಕೃಪೆಯನ್ನು ಅನುಭವಿಸಿ ಪುನೀತನಾದ ತಾಮ್ರಧ್ವಜ ‘ದೇವಾ! ನಿನ್ನ ಇಚ್ಚೆ ಏನಿದೆಯೋ ಅದರಂತೆಯೇ ಆಗಿ ಹೋಗಲಿ. ನನ್ನ ಕರ್ತವ್ಯವನ್ನೂ, ಕರ್ಮವನ್ನೂ ನಿಷ್ಠೆ ಹಾಗು ಭಕ್ತಿಯಿಂದ ಮಾಡುತ್ತೇನೆ’ ಎಂದು ಮನಸಾರೆ ಹೇಳುತ್ತಾ ನಮಿಸಿ ಧನುಸ್ಸನ್ನೆತ್ತಿ ಶಿಂಜಿನಿಯನ್ನು ಬಿಗಿದು ಧನುಷ್ಟಂಕಾರ ಮಾಡಿದನು.

ಶ್ರೀಕೃಷ್ಣನೂ, ಅರ್ಜುನನೂ ಪಾಂಜಜನ್ಯ – ದೇವದತ್ತ ಶಂಖನಾದ ಮಾಡಿ ಯುದ್ಧಾರಂಭದ ಘೋಷಣೆ ಮಾಡಿದರು. ಎರಡೂ ಸೇನೆಗಳು ಮಹಾಸಾಗರದಂತಿವೆ. ತಾಮ್ರಧ್ವಜನ ಸೇನೆಯೂ ಅತಿ ಬಲಾಢ್ಯ ಸೇನೆ. ಏಳು ಅಶ್ವಮೇಧಗಳನ್ನು ಯಶಸ್ವಿಯಾಗಿ ಪೂರೈಸಿರುವಾತನ ತಾಮ್ರಧ್ವಜ ಎಂದರೆ ಆತನ ಪರಾಕ್ರಮ ಎಷ್ಟು? ಸಂಚಯಗೊಂಡಿರಬಹುದಾದ ಸೇನಾಬಲವೆಷ್ಟಿರಬಹುದು ಎಂಬುವುದನ್ನು ಕಲ್ಪಿಸಿಕೊಳ್ಳಬಹುದು! ಶಂಖನಾದ ಆಗುತ್ತಿದ್ದಂತೆಯೇ ಇಕ್ಕೆಲಗಳ ವೀರಯೋಧರು ರಣೋತ್ಸಾಹದಿಂದ ಜಯಘೋಷಗಳನ್ನು ಮಾಡುತ್ತಾ ಪರಸ್ಪರ ಎದುರಾಳಿ ಸೇನೆಯ ಮೇಲೆ ಮುಗಿ ಬಿದ್ದರು.

ಪಾಂಡವ ಪಕ್ಷದ ಅಪ್ರತಿಮ ವೀರರಾದ ವೃಷಕೇತು, ಬಬ್ರುವಾಹನ, ಪ್ರದ್ಯುಮ್ನ, ಸಾತ್ಯಕಿ, ಅನಿರುದ್ಧ ಮುಂತಾದ ಅಗ್ರಮಾನ್ಯ ವೀರರು ತಾಮ್ರಧ್ವಜನ ಮೇಲೆ ಶರವರ್ಷಗೈಯ ತೊಡಗಿದರು. ತಾಮ್ರಧ್ವಜನೇನು ಸಾಮಾನ್ಯನೇ? ಮುಸುಕಿದ ಮೋಡದೆಡೆಯಿಂದ ನುಸುಳಿ ಬರುವ ಸೂರ್ಯನಂತೆ ಪ್ರಖರವಾಗುತ್ತಾ ಪ್ರತಿದಾಳಿ ನಿರತನಾದ. ಪಾಂಡವ ವೀರರಾದ ಅಷ್ಟೂ ಸಾಹಸಿಗರಿಗೆ ತಾಮ್ರಧ್ವಜನೆದುರು ನಿಂತು ಹೋರಾಡಲಾಗಲಿಲ್ಲ. ಹಂತ ಹಂತವಾಗಿ ಕೈಸಾಗದೆ ವೃಷಕೇತು, ಬಬ್ರುವಾಹನ, ಪ್ರದ್ಯುಮ್ನ, ಅನಿರುದ್ಧ, ಸಾತ್ಯಕಿ, ನೀಲಧ್ವಜ, ಅನುಸಾಲ್ವ, ಸುವೇಗ, ಪ್ರವೀರಾದಿಗಳು ಹಿಮ್ಮೆಟ್ಟತೊಡಗಿದರು. ಮಂಡಲಾಕೃತಿಯಲ್ಲಿ ದಶದಿಕ್ಕುಗಳಿಗೂ ಶರಪ್ರಯೋಗಗೈಯುತ್ತಾ ಎದುರಾದ ಮಹಾವಿಕ್ರಮಿ ವೀರರನ್ನು ಕಂಗೆಡಿಸಿ ಸೋಲಿಸಿ ತಾಮ್ರಧ್ವಜ ಮುಂದೊತ್ತಿ ಬಂದಾಗ ಶ್ರೀಕೃಷ್ಣಾರ್ಜುನರೇ ತಾಮ್ರಧ್ವಜನಿಗೆದುರಾಗಿ ಬಂದರು.

ಕೃಷ್ಣಸಾರಥ್ಯದ ಅರ್ಜುನನ್ನು ಮೀರಿಸಲು ಯಾರಿಗೂ ಸಾಧ್ಯವೇ ಇಲ್ಲ. ಇಂದು ತಾಮ್ರಧ್ವಜನೆದುರು ಕೃಷ್ಣಾರ್ಜುನರ ರಥ ಎದುರಾಗಿದೆ. ಅರ್ಜುನನೂ ಪರಮ ಭಕ್ತನೇ ಹೌದು, ಅಪ್ರತಿಮ ಸಾಹಸಿಯೂ ಹೌದು. ಹಾಗೆಂದು ತಾಮ್ರಧ್ವಜನೂ ಮಹಾನ್ ಹರಿ ಭಕ್ತ. ಇತ್ತ ಅರ್ಜುನ – ಅತ್ತ ತಾಮ್ರಧ್ವಜ ಇಬ್ಬರೂ ಅಶ್ವಮೇಧ ದೀಕ್ಷಾಬದ್ದರ ಪರವಾಗಿ ದಿಗ್ವಿಜಯಾರ್ಥಿಗಳು. ಇಬ್ಬರೂ ಅತುಲ ವಿಕ್ರಮಿಗಳು, ಅಮಿತ ಪರಾಕ್ರಮಿಗಳು. ಯುದ್ದ ಹತ್ತಿ ಕೊಂಡಿತು. ಒಬ್ಬರನ್ನೊಬ್ಬರು ಧನುರ್ವೇದ ಪಾಂಡಿತ್ಯದಿಂದ ಮುಚ್ಚಿ ಹಾಕಿದರೆ, ಕೂಡಲೇ ಬಿಡಿಸಿಕೊಂಡು ಹೊರಬಂದು ಪ್ರತಿ ಆಕ್ರಮಣ ಮಾಡುತ್ತಿದ್ದಾರೆ. ಎಂತೆಂತಹ ಶರ ಸಂಧಾನಗಳು, ಮಂತ್ರಾಸ್ತ್ರಗಳು, ದಿವ್ಯಾಸ್ತ್ರಗಳು, ಪ್ರಯೋಗಿತ ಪ್ರಾವಿಣ್ಯತೆಗೆ ದೇವಾನು ದೇವತೆಗಳೇ ನಿಬ್ಬೆರಗಾಗಿ ಹೋಗಿದ್ದಾರೆ. ಪೂರ್ಣಬಲರ ಯುದ್ಧ ಸಾಗುತ್ತಿದೆ.

ಅರ್ಜುನ ಪಾಶುಪತ ಪಡೆಯುವಲ್ಲಿ ಪರಮೇಶ್ವರನ ಜೊತೆಗೇ ಹೋರಾಡುವ ಕೆಚ್ಚು ತೋರಿದ ಸಾಹಸಿಗ. ಮಹಾಭಾರತ ಯುದ್ದದಲ್ಲಿ ಭೀಷ್ಮಾಚಾರ್ಯ, ದ್ರೋಣಾಚಾರ್ಯರರಂತಹ ರಣಪಂಡಿತರೊಡನೆ ಸೆಣಸಿದ ಬಲುಭಟ. ಆದರೆ ಇಂದು ತಾಮ್ರಧ್ವಜನನ್ನು ಮಣಿಸುವ ದಾರಿಯೇ ಗೋಚರಿಸುತ್ತಿಲ್ಲ. ಯಾವ ತೆರನಾದ ಯುದ್ಧ ಕೌಶಲ್ಯ ಪ್ರದರ್ಶಿಸಿದರೂ ತಾಮ್ರಧ್ವಜ ಮತ್ತೆ ಮತ್ತೆ ಸಾವರಿಸಿ ಮೇಲೇರಿ ಬರುತ್ತಿದ್ದಾನೆ.

ಯುದ್ಧ ಸಾಗುತ್ತಾ ಸಾಗುತ್ತಾ ಏಳು ದಿನಗಳ ಕಾಲ ಸಾಗಿದರೂ ಜಯಾಪಜಯ ನಿರ್ಣಯವಾಗಲಿಲ್ಲ. ಎರಡೂ ಸೇನೆ ಅಶ್ವಮೇಧದ ಕುದುರೆಯ ರಕ್ಷಣಾಪಡೆಗಳು. ಯಾರೇ ಸೋತರೂ ಒಂದು ಅಶ್ವಮೇಧ ಯಾಗವೇ ನಿಂತು ಹೋಗಿಬಿಡುತ್ತದೆ. ಕೌತುಕಪ್ರದವಾಗಿ ಸೆಣಸಾಟ ಸಾಗುತ್ತಿದೆ.

ಎಂಟನೆಯ ದಿನವಾಗುತ್ತಿದ್ದಂತೆ ಶ್ರೀಕೃಷ್ಣ ಪರಮಾತ್ಮ ಅರ್ಜುನನಲ್ಲಿ ಒಂದು ಸಮಾಲೋಚನೆ ಮಾಡಿದ. ಹೊಸ ರಣತಂತ್ರವಾಗಿ “ಅರ್ಜುನಾ! ನಾವಿಬ್ಬರೂ ಒಂದೇ ರಥದಲ್ಲಿದ್ದು ಹೋರಾಡಿದರೆ ಈ ತಾಮ್ರಧ್ವಜನನ್ನು ಗೆಲ್ಲಲಾಗದು. ಹಾಗಾಗಿ ನಾನೂ ಪ್ರತ್ಯೇಕ ರಥ ಹಾಗು ಸಾರಥಿಯ ವ್ಯವಸ್ಥೆಯೊಂದಿಗೆ ತಾಮ್ರಧ್ವಜನೊಡನೆ ಹೋರಾಡುವೆ. ನೀನೂ ಅನ್ಯ ಸಾರಥಿಯ ಸಹಾಯದಿಂದ ಯುದ್ಧ ಮುಂದುವರಿಸು.” ಎಂಬ ಸೂಚನೆ ನೀಡಿದ. ಶ್ರೀಕೃಷ್ಣ ಏನೇ ಸಲಹೆ ನೀಡಿದರೂ ಅರ್ಜುನ ಶಿರಸಾವಹಿಸಿ ಪಾಲಿಸುತ್ತಾನೆಯೇ ಹೊರತು ಇದಿರಾಡುವ ಪ್ರಮೇಯವೇ ಇಲ್ಲ. ಸರಿ ಎಂದು ಒಪ್ಪಿ ಹಾಗೆಯೇ ಇಬ್ಬರೂ ಪ್ರತ್ಯೇಕ ರಥಗಳಲ್ಲಿ ರಣಾಂಗಣದಲ್ಲಿ ಕಾಣಿಸಿಕೊಂಡರು.

ತಾಮ್ರಧ್ವಜ ನೋಡುತ್ತಿದ್ದಾನೆ ಕೃಷ್ಣಾರ್ಜುನರು ಏಕ ರಥದಲ್ಲಿರದೆ ಪ್ರತ್ಯೇಕ ರಥಗಳಲ್ಲಿ ಧನುರ್ಧಾರಿಗಳಾಗಿ ತನಗೆದುರಾಗಿದ್ದಾರೆ. ಕೂಡಲೇ ಶ್ರೀಕೃಷ್ಣ ಪರಮಾತ್ಮನನ್ನು ಕರೆದು “ಹೇ ಭಗವಂತಾ! ನಿನ್ನ ಭಕ್ತನಾದ ನನ್ನೊಡನೆ ನೀನೇ ಯುದ್ಧ ಮಾಡಿ ಪರೀಕ್ಷಿಸಲು ಮನ ಮಾಡುತ್ತಿರುವೆಯಾ? ಆದರೂ ನಿನ್ನ ಸಾರಥ್ಯದ ರಕ್ಷಣೆ ಇಲ್ಲದೆ ಈ ಅರ್ಜುನನಿಗೆ ತೊಂದರೆ ಆದೀತು. ಆತನ ಯೋಗಕ್ಷೇಮದ ಕಡೆಗೆ ನಿನ್ನ ಗಮನವಿರಲಿ” ಎಂದು ಎಚ್ಚರಿಸಿದ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page