
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದವರಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆ 10 ಮೃತದೇಹಗಳು ಪತ್ತೆಯಾಗಿದ್ದರೆ, ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ಇಂದು ಎನ್‌ಡಿಆರ್‌ಎಫ್ ಹಾಗೂ ಈಶ್ವರ ಮಲ್ಪೆ ತಂಡದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಘಟನೆಯಲ್ಲಿ 11 ಮಂದಿ ನೀರುಪಾಲಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ರಕ್ಷಿಸಲು ನೀರಿಗೆ ಇಳಿದಿದ್ದ ಪುತ್ರ ಉಮೇಶ್ ನಾಯ್ಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ತಾಯಿಯನ್ನು ಉಳಿಸಲು ಯತ್ನಿಸಿದ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿ ಅವರು ಸಹ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದುರಂತ ಹಲವು ಕುಟುಂಬಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಮಾದೇವ್ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಸಾವನ್ನಪ್ಪಿದ್ದು, ಅವರ ಮಕ್ಕಳಾದ ದರ್ಶನ ಮತ್ತು ಕೀರ್ತನಾ ಪೋಷಕರನ್ನು ಕಳೆದುಕೊಂಡಿದ್ದಾರೆ.
ಇನ್ನೊಂದೆಡೆ, ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಈಗಾಗಲೇ ನಿಧನರಾಗಿದ್ದು, ನಾಲ್ವರು ಮಕ್ಕಳಿಗೆ ಆಕೆಯೇ ಆಸರೆಯಾಗಿದ್ದರು. ಇದೀಗ ತಾಯಿಯನ್ನೂ ಕಳೆದುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಮನೆಮಾಡಿದೆ.




























