
ಬೆಂಗಳೂರು: ರಾಜ್ಯ ಸಚಿವ ಸಂಪುಟವು ಒಳ ಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ಕೈಗೊಂಡಿದ್ದು 101 ಜಾತಿಗಳಿಗೆ ಲಭ್ಯವಿರುವ ಶೇ.17ರಷ್ಟು ಮೀಸಲಾತಿಯನ್ನು ಮೂರು ವರ್ಗಗಳಲ್ಲಿ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಬಲಗೈ ಸಮುದಾಯಗಳಿಗೆ ಶೇ. 6, ಎಡಗೈ ಸಮುದಾಯಗಳಿಗೆ ಶೇ. 6 ಹಾಗೂ ಸ್ಪೃಶ್ಯ ಜಾತಿಗಳಿಗೆ (ಅತಿ ಹಿಂದುಳಿದ, ಅಲೆಮಾರಿ ಸೇರಿಸಿ) ಶೇ.5ರಷ್ಟು ಮೀಸಲು ನಿಗದಿಗೊಳಿಸಲು ನಿರ್ಧರಿಸಿದೆ.
ಒಳ ಮೀಸಲಾತಿ ಕುರಿತ ನ್ಯಾ। ನಾಗಮೋಹನ ದಾಸ್ ಅವರ ವರದಿಯಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಪಂಗಡಗಳಿಗೆ ನೀಡಿದ್ದ ಶೇ. 1ರಷ್ಟು ಮೀಸಲಾತಿಯನ್ನು ಆ ಸಮೂಹಗಳ ಜತೆಗೆ ಬಲಗೈ ಸಮುದಾಯದಲ್ಲಿ ವಿಲೀನ ಮಾಡಲಾಗಿದೆ. ಅದೇ ರೀತಿ ಅಲೆಮಾರಿ ಸಮುದಾಯ ಹಾಗೂ ಅತಿ ಸೂಕ್ಷ್ಮ ಹಿಂದುಳಿದ ಜಾತಿಗಳಿಗೆ ನೀಡಲಾಗಿದ್ದ ಶೇ. 1ರಷ್ಟು ಮೀಸಲನ್ನು ಆ ಸಮುದಾಯಗಳ ಜತೆಗೆ ಸ್ಪೃಶ್ಯ ಜಾತಿಗಳಲ್ಲಿ ವಿಲೀನಗೊಳಿಸಲಾಗಿದೆ.
ತನ್ಮೂಲಕ ನ್ಯಾ। ನಾಗಮೋಹನ ದಾಸ್ ಅವರ ವರದಿಯಲ್ಲಿ ಮಾಡಲಾಗಿದ್ದ ಐದು ಪ್ರವರ್ಗಗಳನ್ನು ಮಾರ್ಪಡಿಸಿ ಮೂರಕ್ಕೆ ಇಳಿಸಲಾಗಿದ್ದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್ ದಾಸ್ ಆಯೋಗ ಮಾಡಿದ್ದ ಐದು ಮೀಸಲಾತಿ ವರ್ಗೀಕರಣ ಶಿಫಾರಸಿಗೆ ಬಲಗೈ ಉಪಜಾತಿಗಳು ಹಾಗೂ ಸ್ಪೃಶ್ಯ ಜಾತಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಮಾದಿಗ ಸೇರಿದಂತೆ ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ 18 (ಎಡಗೈ) ಸಮುದಾಯಗಳಿಗೆ ಶೇ.6, ಹಿಂದುಳಿದ ಹೊಲೆಯ ಹಾಗೂ ಅದೇ ರೀತಿ ಸ್ಥಿತಿಯಿರುವ ಬಲಗೈನ 17 ಸಮುದಾಯಗಳ ಜತೆಗೆ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಸೇರಿ ಒಟ್ಟು 20 ಸಮುದಾಯಗಳಿಗೆ ಶೇ.6 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇನ್ನು ಸ್ಪೃಶ್ಯ ಜಾತಿಗಳಾಗಿ ಪರಿಗಣಿಸಲ್ಪಡುವ ಕಡಿಮೆ ಹಿಂದುಳಿದ ಲಂಬಾಣಿ, ಬೋವಿ, ಕೊರಮ, ಕೊರಚ ಸೇರಿ 22 ಸಮುದಾಯ ಹಾಗೂ ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ, ಅಲೆಮಾರಿಯ 59 ಸಮುದಾಯ ಸೇರಿ 81ಕ್ಕೆ ಶೇ.5 ರಷ್ಟು ಮೀಸಲಾತಿ ನೀಡಿ ಪರಿಷ್ಕೃತ ವರ್ಗೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ.
ಬುಧವಾರ ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಂಡಿಸಲಿದ್ದು ಬಳಿಕ ಗುರುವಾರ ಅಥವಾ ಶುಕ್ರವಾರ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ. ಬಳಿಕ ಎಲ್ಲಾ ಸರ್ಕಾರಿ ನೇಮಕಾತಿಗಳಿಗೂ ನೂತನ ಹಾಗೂ ಪರಿಷ್ಕೃತ ಮೀಸಲಾತಿ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.



















