
ವಿಚ್ಛೇದನ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯೊಬ್ಬಳು ಬ್ರಾಂಡೆಡ್ ಬಟ್ಟೆ, ಐಷಾರಾಮಿ ಜೀವನಕ್ಕಾಗಿ ಮಾಜಿ ಪತಿ ತಿಂಗಳಿಗೆ ರೂ 6 ಲಕ್ಷ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾಳೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದು, ವಾದವನ್ನು ಆಲಿಸಿದ ನ್ಯಾಯಾಧೀಶರು ಅವಳ ಖರ್ಚಿಗೆ ಹಣ ಬೇಕಾದರೆ ಅವಳೇ ಸಂಪಾದಿಸಲಿ, ಗಂಡನಿಂದ ಕೇಳೋದಲ್ಲ ಎಂದು ಮಹಿಳೆ ಮತ್ತು ಆಕೆಯ ಪರ ವಾದಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆಯ ಪರ ವಾದ ಮಂದಿಸಿದ ವಕೀಲರು, ನನ್ನ ಕಕ್ಷಿದಾರರಿಗೆ ಅವರ ಮಾಜಿ ಪತಿ ತಿಂಗಳಿಗೆ 6 ಲಕ್ಷ ರೂ. ಜೀವನಾಂಶ ನೀಡಬೇಕು. ಆಕೆಯ ಮೊಣಕಾಲು ನೋವಿನ ಚಿಕಿತ್ಸೆ, ಫಿಸಿಯೋಥೆರಪಿ , ಔಷಧಗಳು ಮತ್ತು ಇತರೆ ವೆಚ್ಚಗಳಿಗೆ ತಿಂಗಳಿಗೆ ₹ 4 ರಿಂದ 5 ಲಕ್ಷ ಬೇಕಾಗುತ್ತದೆ ಮತ್ತು ಬಳೆಗಳು, ಬ್ರಾಂಡೆಡ್ ಬಟ್ಟೆಗಳು, ಚಪ್ಪಲಿ ಇತ್ಯಾದಿ ಮೂಲಭೂತ ಅಗತ್ಯಗಳಿಗಾಗಿ 50 ಸಾವಿರ ಹಾಗೂ ಪೌಷ್ಟಿಕ ಆಹಾರಕ್ಕಾಗಿ 60 ಸಾವಿರ ಬೇಕಾಗುತ್ತದೆ. ಹೀಗೆ ಒಟ್ಟಾಗಿ ಪ್ರತಿ ತಿಂಗಳು 6,16,300ರೂ. ಮಾಸಿಕ ಜೀವನಾಂಶ ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ಇದನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
“ತಿಂಗಳಿಗೆ 6,16,300 ರೂ.? ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಆಕೆ ಅಷ್ಟು ಹಣ ಖರ್ಚು ಮಾಡಲೇಬೇಕೆಂದು ಬಯಸಿದರೆ, ಅವಳೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತವಾಗಬೇಕು. ಆಕೆಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ಸ್ವಂತ ಖರ್ಚಿಗೆ ಇಷ್ಟು ಹಣ ಕೇಳುತ್ತಿದ್ದಾಳೆ. ನಿಜಕ್ಕೂ ಇದು ಅಸಮಂಜಸವಾಗಿದೆ. ಜೀವನಾಂಶವು ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು” ಎಂದು ಹೇಳಿ ನ್ಯಾಯಾಧೀಶರು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಮಹಿಳೆ ಮತ್ತು ಆಕೆಯ ಪರ ವಾದಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.













