ತ್ಯಾಗವೇ ಅತ್ಯಂತ ಶ್ರೇಷ್ಠವಾದದ್ದು: ಕೆ ಎನ್ ಜನಾರ್ದನ

ಮೂಡುಬಿದಿರೆ: ಸಮಾಜದ ಭಾಗವಾಗಿ ಬದುಕುವ ನಾವು ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯವಾಗಿದೆ. ಮನುಷ್ಯನ ಮೂಲ ನಡವಳಿಕೆ ಬಂಡವಾಳಶಾಹಿ ಎಂದು ಹೇಳಲಾಗುತ್ತದೆ. ಆದರೆ ಕೇವಲ ಬಂಡವಾಳಶಾಹಿ ಸಮಾಜ ಉದ್ಧಾರ ಆಗುವುದಿಲ್ಲ ಎನ್ನುವುದನ್ನು ಪರಿಗಣಿಸಿ ಹತ್ತೊಂಬತ್ತನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಬಂತು. ಯಾವುದೇ ನಿರೀಕ್ಷೆ ಇಲ್ಲದೆ ಮಾಡುವ ಕೆಲಸವೇ ಸೇವೆ. ಸೇವೆ ಮಾಡುವುದರಿಂದ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಡಾ ಪಾದೂರು ಸುದರ್ಶನ ಕುಮಾರ್ ಹೇಳಿದರು.

ಅವರು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿವಿಧ ಘಟಕಗಳಾದ ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿ ಸಿ, ರೇ೦ಜರ್ಸ್ ಮತ್ತು ರೋವರ್ಸ್, ರೆಡ್ ಕ್ರಾಸ್ ಘಟಕಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮಲ್ಲಿ ಬುದ್ಧಿ ಬಲ ಮತ್ತು ಭುಜ ಬಲ ಇವೆರಡೂ ಇವೆ. ಎಲ್ಲರಲ್ಲೂ ಸಮಾನವಾದ ಬಲವಿಲ್ಲ. ಹಾಗಾಗಿ ಬಲವಿದ್ದವರು ಬಲಹೀನರ ಸೇವೆಯಲ್ಲಿ ನಿರತರಾಗಬೇಕು. ಈ ಕೊಡು ಕೊಳ್ಳುವಿಕೆಯ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ಸೇವೆ ಮಾಡಲು ತೊಡಗಿಸಿಕೊಂಡಿದಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರೀಕನಾಗಿ ಬಾಳಲು ಪೂರಕವಾಗುತ್ತದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಸಿರಿ ಗ್ರಾಮೋದ್ಯೋಗ ಸೇವಾ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪಕ ನಿರ್ದೇಶಕರಾದ ಕೆ ಎನ್ ಜನಾರ್ದನ ಅವರು, ಸಾಮಾಜಿಕಸೇವೆಯಿ೦ದ ಜೀವನ ಅರ್ಥಪೂರ್ಣವಾಗುತ್ತದೆ. .ಪ್ರಕೃತಿ ಯಾವತ್ತಿಗೂ ತಾನು ಮಾಡುವ ಸಹಾಯಕ್ಕಾಗಿ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. ಈ ನಿಸ್ವಾರ್ಥ ಸೇವೆಯ ಪಾಠವನ್ನು ನಾವು ಪ್ರಕೃತಿಯಿಂದ ಕಲಿಯಬೇಕು. ನೀವು ನೀಡುವ ಸೇವೆಯ ಫಲಿತಾ೦ಶ ಕಾಣಬೇಕೆ೦ದರೆ ತಾಳ್ಮೆಯಿಂದ ಕಾಯಬೇಕು. ಪ್ರಪಂಚದ ಸಮಸ್ಯೆಗಳಿಗೆಲ್ಲಾ ನಿಮ್ಮ ಬಳಿ ಪರಿಹಾರವಿಲ್ಲವಾದರೂ, ನಿಮ್ಮ ಸೇವೆಯ ಫಲಾನುಭವಿಗಳಿಗೆ ಅದೇ ಅತ್ಯ೦ತ ದೊಡ್ಡ ಸಹಾಯವಾಗಿರುತ್ತದೆ. ಹಾಗಾಗಿ ನಿಮ್ಮ ಸೇವೆಯ ಮಹತ್ವವನ್ನು ಎ೦ದೂ ಕಡೆಗಣಿಸಬೇಡಿ. ಯುವ ಜನತೆ ಮನಸ್ಸು ಮಾಡಿದ್ದಲ್ಲಿ ಅಸಾಧ್ಯವನ್ನು ಸಾಧಿಸಬಹುದು.
ಹುಟ್ಟು ಸಾವುಗಳ ನಡುವಿನ ನಿಮ್ಮ ಜೀವನವನ್ನು ಸಾರ್ಥಕಗೊಳಿಸುವುದು ನಿಮ್ಮ ಕೈಯಲ್ಲಿದೆ. ಜಗತ್ತಿನಲ್ಲಿ ಶ್ರೀಮ೦ತಿಕೆ ಮತ್ತು ಅಧಿಕಾರವನ್ನು ಅನುಭವಿಸಿದವರಿಗಿ೦ತ ತ್ಯಾಗಮಯ ಜೀವನ ನಡೆಸಿದ
ಬುದ್ಧ, ಬಸವ, ಗಾಂಧಿ ಮು೦ತಾದ ಮಹಾನ್ಪುರುಷರನ್ನೇ ಜಗತ್ತು ಸದಾ ಸ್ಮರಿಸುತ್ತದೆ. ಇದು ಸೇವೆಗಿರುವ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಸೇವೆ ಮತ್ತು ತ್ಯಾಗ ದೇಶದ ಎರಡು ಆದರ್ಶಗಳು. ಇವುಗಳ ಮಹತ್ವವನ್ನು ಯುವಜನರಲ್ಲಿ ಬಿತ್ತುವುದು ವಿದ್ಯಾ ಸ೦ಸ್ಥೆಯ ಕರ್ತವ್ಯವಾಗಿದೆ. ಇದರಿ೦ದ ಉತ್ತಮ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾ೦ಪ್ರದಾಯಿಕ ಶಿಕ್ಷಣದೊ೦ದಿಗೆ ಸೇವೆ ಎ೦ಬ ಉದ್ದೇಶದೊಂದಿಗೆ ನಾಲ್ಕು ಘಟಕಗಳು ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಯಲ್ಲಿ ಕಾರ್ಯೋನ್ಮುಖವಾಗಿವೆ. ಅತಿಥಿಗಳು ನೀಡಿದ ಸಲಹೆಯನ್ನು ಮನನ ಮಾಡಿ ಅದರ೦ತೆ ನಡೆದುಕೊ೦ಡರೆ ಮು೦ದಿನ ತಲೆಮಾರು ಖ೦ಡಿತವಾಗಿಯೂ ಸಮ ಸಮಾಜದ ನಿರ್ಮಾಣವನ್ನು ಸಾಧಿಸುತ್ತದೆ ಎಂದರು

ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಎನ್ ಎಸ್ ಎಸ್ ಅಧಿಕಾರಿ ತೇಜಸ್ವೀ ಭಟ್ ರೋವರ್ಸ್ ಅಧಿಕಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ ಕೆ ಪಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಜನಾ ನಾಯಕ್ ಮತ್ತು ಭಕ್ತಿ ಪಾಟೀಲ್ ಅತಿಥಿಗಳನ್ನು ಪರಿಚಯಿಸಿದರು. ಲೆಫ್ಟಿನೆಂಟ್ ಮಹೇದ್ರ ಜೈನ್ ವಂದಿಸಿದರು ಅಪೇಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.













