✍️ ಪ್ರಜ್ವಲಾ ಶೆಣೈ, ಕಾರ್ಕಳ
💢 ವಿಶ್ವ ಪರಿಸರ ದಿನಾಚರಣೆ…👇

ಪ್ರಕೃತಿಯ ಮತ್ತು ಜೀವ ಸೃಷ್ಟಿಯ ನಡುವೆ ಅವಿಭಾಜ್ಯ ಅನುಸಂಧಾನ ಇರುವ ಕಾರಣ ಪ್ರಕೃತಿಯ ಆರಾಧನೆಯು ಜನಜೀವನದ ಅಂಗವಾಗಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಸಾಂಪ್ರದಾಯಿಕ ಆಚರಣೆ. ಈ ಭೂಮಿಯಲ್ಲಿ ಹರಿಯುವ ನದಿ, ಬೀಸುವ ಗಾಳಿ, ಈ ಮಣ್ಣು,ಕಲ್ಲು,ಮರ, ಗಿಡ, ಹೂವು,ಹಣ್ಣು, ಬಳ್ಳಿ ಎಲ್ಲವೂ ಅದರ ಒಂದು ಭಾಗ. ಭುವಿಯ ಒಡಲಿಗೆ ಬಿತ್ತಿದ ಬೀಜವು ಚಿಗುರೊಡೆದು ಆಕಾಶದೆತ್ತರ ಬೆಳೆದು ನಿಲ್ಲಲು ಸೂರ್ಯನ ಪ್ರಭೆಯೂ ಒಂದು ಕಾರಣ. ಆದುದರಿಂದ ಸೂರ್ಯ ಸರ್ವರಿಗೂ ಚೇತನ. ಇದು ಅರಿಯಲಾಗದ ಸೃಷ್ಟಿಯ ವೈಚಿತ್ರ್ಯ . ಇದು ಯಾಕೆ ಎಂದು ಉತ್ತರ ಸಿಗದ ಕಾರಣ ನಮ್ಮ ವಿಮರ್ಶೆಗೆ ಸಿಲುಕದ ಒಂದು ಶಕ್ತಿಯ ಸಂಚಲನ. ಹಾಗಾಗಿ ನಾವು ದೇವ ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಬೆಳೆಸಿಕೊಂಡಿದ್ದೇವೆ. ಆ ನೆಲೆಯಲ್ಲಿ ಪ್ರಕೃತಿಯು ಕೂಡಾ ಸೃಷ್ಟಿಯ ಪ್ರಧಾನ ಒಂದು ಅಂಗವಾದ ಕಾರಣ ಪ್ರಕೃತಿಯನ್ನು ಆರಾಧನಾಯುಕ್ತವಾಗಿ ಪೂಜಿಸಿ ರಕ್ಷಿಸಿ ಉಳಿಸಿ ಬೆಳೆಸಬೇಕು ಎಂಬುವುದೇ ಆಗಿದೆ.
ಹಚ್ಚ ಹಸಿರಿನ ಪಚ್ಚೆ ಸೀರೆ ಉಟ್ಟು ಭೂಮಿ ತಾಯಿ ತನ್ನೊಡಲಲ್ಲಿ ಪಶು, ಪಕ್ಷಿ, ಪ್ರಾಣಿ ಸಕಲ ಜೀವರಾಶಿಗಳನ್ನು ತನ್ನೊಡಲ ಕುಡಿಯಂತೆ ನಿಸ್ವಾರ್ಥದಿಂದ ಪೊರೆಯುತ್ತಾಳೆ. ಸ್ವಾರ್ಥಿಯಾದ ಮನುಷ್ಯ ತನ್ನೊಡಲ ಬಸಿರ ಬಗೆದು ಬರಿದಾಗಿಸಿದರು ಮುನಿಯದೇ ಕ್ಷಮಿಸುವ ಗುಣವುಳ್ಳ ಈ ಧರಿತ್ರಿ ಮಹಾಮಾತೆ ಪುಣ್ಯಗರ್ಭೆ.
ಹಿಂದೊಮ್ಮೆ ಸೂರ್ಯ ಕಿರಣವೂ ಭೂಮಿಯ ಮೈ ಸೋಕದಂತೆ ದಟ್ಟವಾಗಿ ಬೆಳೆದಿರುವ ಕಾಡುಗಳು ಇಂದು ಕಣ್ಮರೆಯಾಗಿ ಹಸಿರು ನಿಧಾನವಾಗಿ ಹೆಸರಿಲ್ಲದೆ ಮಾಯವಾಗುತ್ತಿದೆ.ಬರಡು ಮೈಯ ಧರೆಯಒಡಲನ್ನು ಸೂರ್ಯ ರಶ್ಮಿ ಸುಡುತ್ತಿದೆ. ಮಳೆಯಿಲ್ಲದೆ, ಬಿಸಿಲ ಬೇಗೆಯಿಂದ ಕಂಗೆಟ್ಟು ಬೇಯುವಂತಾಗಲು ನೇರ ನಾವೇ ಕಾರಣ. ಕಾದ ಬಾಣಲೆಯಂತೆ ಬತ್ತಿರುವ ಕೆರೆಗಳು ಅಳುತ್ತಿದ್ದರೂ ಅದರ ಒಡಲು ತುಂಬಿಸಿ ತಂಪಾಗಿಸುವ ಮಳೆ ಕಣ್ಮರೆಯಾಗಿ ಹೋಗಲು ಸರ್ವ ರೀತಿಯ ಕಾರಣರಾದ ಮನುಷ್ಯ ಇನ್ನಾದರೂ ಧರೆಯ ಒಡಲುರಿ ಶಮಿಸಿ ಅವಳ ಕಣ್ಣೊರೆಸುವ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಬಿಸಿಲ ಬೇಗೆಯಿಂದ ಹನಿಹನಿ ನೀರಿಗೂ ಪರಿತಪಿಸಿ ಸುಟ್ಟು ಕರಕಲಾಗುವ ದಿನ ದೂರವಿಲ್ಲ. ಪರಿಸರಕ್ಕಾಗಿ ನಾವು ನೀವೆಲ್ಲರೂ ಜಾಗೃತರಾಗುವ ಕಾಲ ಸನ್ನಿಹಿತವಾದರೂ ಇನ್ನೂ ಜ್ಞಾನೋದಯವಾಗದೇ ಇರುವುದು ವಿಪರ್ಯಾಸ.
ಹಸಿರು ಹೊತ್ತ ಕಾಡಾಯಿತು ಕಾಂಕ್ರೀಟ್ ನಾಡು
ಪರಿಸರದ ಒಂದು ಭಾಗವೇ ಆಗಿದ್ದ ಮನುಷ್ಯ ನಿಧಾನವಾಗಿ ತನ್ನ ಅಗತ್ಯಕ್ಕಾಗಿ ಕಾಡಿನಿಂದ ದೂರವಾಗಿ ಉಸಿರು ಕೊಡುವ ಮರವನ್ನೇ ಕಡಿದು ಕಾಂಕ್ರೀಟ್ ನಾಡನ್ನಾಗಿ ಪರಿವರ್ತಿಸಿ ಸ್ವಾರ್ಥ ಸಾಧಿಸಿದ.ತನ್ನ ಆವಾಸ ಸ್ಥಾನವನ್ನು,ತನ್ನ ಜೀವದ ಜಗತ್ತನ್ನು ಅನಿವಾರ್ಯವಾಗಿ ಒಂದೊಂದಾಗಿ ಮನುಷ್ಯನಿಗೆ ಬಿಟ್ಟು ಕೊಟ್ಟ ವನ್ಯಜೀವಿಗಳು ಇಂದು ವಾಸಿಸಲು ಕಾಡಿಲ್ಲದೆ ಅತಂತ್ರವಾಗಿ ನಾಡಿಗೆ ಬರುತ್ತಿರುವುದನ್ನು ಕಾಣುತ್ತೇವೆ.ಹಿಂದೆ ಬಹುಸಂಖ್ಯೆಯಲ್ಲಿದ್ದ ವನ್ಯ ಪ್ರಾಣಿಗಳು ಇಂದು ಅಳಿವಿನಂಚಿಗೆ ಹೋಗಲು ಕಾರಣ ನಮ್ಮ ಕಣ್ಣ ಮುಂದೇ ಇದೆ. ಕಾಡು ಮೇಡು ಪ್ರಕೃತಿಯೊಂದಿಗೆ ಬದುಕು ಕಟ್ಟಿ ಕೊಂಡ ಮನುಷ್ಯ ನಿಧಾನವಾಗಿ ಪ್ರಕೃತಿಯಿಂದ ದೂರವಾಗಿ ನಾಗರಿಕತೆಯ ಸೋಗಿನಲ್ಲಿ
ಅನಾಗರೀಕತೆ ಮೆರೆದ.ಕಾಡಿನಲ್ಲಿದ್ದ ಮರಗಳು ನಾಶವಾಗುತ್ತಾ ಹೋದಂತೆ ಪ್ರಾಣಿ ಪಕ್ಷಿಗಳೂ ಅಳಿವಿನಂಚಿಗೆ ಸಾಗಿದವು.
ಪ್ಲಾಸ್ಟಿಕ್ ಮುಕ್ತ ಪರಿಸರ
ಮರ,ಲೋಹದ ವಸ್ತುಗಳನ್ನು ಬಳಸುತ್ತಿದ್ದ ಮಾನವ ತನ್ನ ಅನ್ವೇಷಣೆಯಿಂದ ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ಯಾವಾಗ ಈ ಜಗತ್ತಿಗೆ ಪರಿಚಯಿಸಿದನೋ ಅಂದಿನಿಂದಲೇ ಮನುಕುಲದ ಅವನತಿ ಆರಂಭವಾಯಿತು.ಅತಿ ಕಡಿಮೆ ದರದಲ್ಲಿ ಸಿಗುವ ಪ್ಲಾಸ್ಟಿಕ್ ಒಂದು ಕೊಳೆಯದ ವಸ್ತು.ಎಲ್ಲೆಂದರಲ್ಲಿ ಎಸೆಯುವ ಈ ಪ್ಲಾಸ್ಟಿಕ್ ಪ್ರಾಣಿ ಪಕ್ಷಿಗಳಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ನಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಉತ್ಪತ್ತಿಯಾಗಲು ಪ್ಲಾಸ್ಟಿಕ್ ಮುಖ್ಯ ಕಾರಣ ಎನ್ನುವುದೂ ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ.ಪ್ಲಾಸ್ಟಿಕ್ ತನ್ನ ಒಂದೊಂದೇ ಕರಾಳ ಮುಖವನ್ನು ಪರಿಚಯಿಸುತ್ತಾ ಪರಿಸರಕ್ಕೆ ಶಾಪವಾಗಿರುವುದಂತೂ ಸತ್ಯ.ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ
ಸ್ವಚ್ಛ ,ಆರೋಗ್ಯಕರ ಪರಿಸರ ನಮ್ಮದಾಗುತ್ತದೆ.
ಪರಿಸರ ದಿನ ಆಚರಣೆಗಷ್ಟೇ ಸೀಮಿತವೇ?
ಪ್ರತಿ ವರ್ಷ ಜೂನ್ 5 ಬಂತೆಂದರೆ ಸಾಕು,ಎಲ್ಲೆಲ್ಲೂ ಹಸಿರು ಗಿಡಗಳದ್ದೇ ಸಂಭ್ರಮ. ಹಸಿರು ಬೆಳೆಸಿ ಕಾಡು ಉಳಿಸಿ,ಹಸಿರೇ ನಮ್ಮ ಉಸಿರು,ಇತ್ಯಾದಿ ಘೋಷಣೆಗಳು,ಪರಿಸರ ದಿನಾಚರಣೆ ಬಗ್ಗೆ ಭಾಷಣ,ಪರಿಸರ ಜಾಗೃತಿ ಗೀತೆ ಎಲ್ಲೆಲ್ಲೂ ಮೊಳಗುವುದನ್ನು ಕಾಣುತ್ತೇವೆ.ಆದರೆ ಬಹುತೇಕ ಸಸಿ ನೆಟ್ಟ ಮರು ದಿನ ಆ ಸಸಿಗೆ ನೀರು ಹಾಕುವವರು ಕೂಡ ಯಾರೂ ಇರುವುದಿಲ್ಲ. ಇದು ವಾಸ್ತವ, ಗಿಡ ನೆಟ್ಟು ಒಂದು ಭಾವಚಿತ್ರಕ್ಕೆ ಫೋಸ್ ಕೊಟ್ಟು ನಮ್ಮದೂ ಒಂದು ಇರಲಿ ಎಂದು ಸ್ಟೇಟಸ್ ಹಾಕುವುದಕ್ಕಷ್ಟೇ ಸೀಮಿತ.ಇದಕ್ಕೆ ಹೊರತಾಗಿ ತಾವು ನೆಟ್ಟ ಗಿಡವನ್ನು ಪೋಷಿಸಿ,ಅದು ಮರವಾಗಿ ನಾಲ್ಕು ಜನರಿಗೆ ನೆರಳಾಗಿ ಕಾಯುವವರೆಗೆ ರಕ್ಷಿಸುವವರೂ ಇದ್ದಾರೆ.ಸಾಧ್ಯವಾದಷ್ಟು ನಮ್ಮ ನಡುವೆ ಹಸಿರು ಬೆಳೆಸಿ ಸ್ವಚ್ಛ ಸುಂದರ ಪರಿಸರವನ್ನು ನಮ್ಮದಾಗಿಸಿಕೊಳ್ಳೋಣ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕಷ್ಟೆ ಸೀಮಿತವಲ್ಲ. ಪ್ರತಿ ದಿನವೂ ಪರಿಸರ ದಿನವೇ.ಇದು ಮನುಕುಲದ ಅಳಿವು ಉಳಿವಿನ ಕೂಗು.ಪರಿಸರಕ್ಕಾಗಿ ನಾವೆಲ್ಲರೂ ಜಾಗೃತರಾಗಲು ಮೊಳಗುವ ಕರೆಗಂಟೆ.ಹಸಿರು ಉಳಿಸಿದರೆ ಮಾತ್ರ ಉಸಿರು ಉಳಿದೀತು.ಹಸಿರೇ ನಮ್ಮ ಉಸಿರು,ನಮ್ಮೆಲ್ಲರ ಭವಿಷ್ಯ.ಅಲ್ಲವೇ?
