
ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದ ಕಾಲ್ತುಳಿತದ ಪರಿಣಾಮ 121 ಭಕ್ತರ ಬಲಿಪಡೆದಿದ್ದು ಈ ದುರಂತದ ಬಳಿಕ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಭೋಲೆ ಬಾಬಾ ಅಲಿಯಾಸ್ ಸಾಕಾರ ವಿಶ್ವ ಹರಿ ನಾಪತ್ತೆ ಆಗಿದ್ದಲ್ಲದೆ, ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಬದಲಾಗಿ, ಕಾರ್ಯಕ್ರಮ ಆಯೋಜಿಸಿದ್ದ ಅವರ ಭಕ್ತರ ಮೇಲೆ ಪ್ರಕರಣ ದಾಖಲಾಗಿದೆ.
80 ಸಾವಿರ ಜನರನ್ನು ಸೇರಿಸಲು ಅನುಮತಿ ಪಡೆದು 2.5 ಲಕ್ಷ ಜನರನ್ನು ಸೇರಿಸಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದಲೇ ಕಾಲ್ತುಳಿತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಎಫ್‌ಐಆರ್ ಜಿಲ್ಲಾಡಳಿತಕ್ಕೆ ಕ್ಲೀನ್‌ಚಿಟ್ ನೀಡಿದ್ದು, ಸಾಧ್ಯವಿರುವ ಸಂಪನ್ಮೂಲಗಳಲ್ಲಿ ಅವರು ಎಲ್ಲವನ್ನೂ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅನುಮತಿ ಕೋರುವಾಗಿ ಸತ್ಸಂಗಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಸಂಘಟಕರು ಮರೆಮಾಚಿದರು. ಸಂಚಾರ ನಿರ್ವಹಣೆಗೆ ಸಹಕರಿಸಲಿಲ್ಲ, ಮತ್ತು ಕಾಲ್ತುಳಿತದ ನಂತರ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಚಪ್ಪಲಿಗಳನ್ನು ಬೇರೆಡೆ ಎಸೆಯಲಾಯ್ತು. ಅಲ್ಲಿ ಸೇರಿದ ಜನರು ಬಾಬಾ ಸಾಗಿ ಹೋದ ಸ್ಥಳದ ಪಾದದ ಧೂಳನ್ನು ಸಂಗ್ರಹಿಸಲು ಮುಂದಾದಾಗ ಅವರನ್ನು ತಳ್ಳಲು ಭದ್ರತಾ ಸಿಬ್ಬಂದಿ ಯತ್ನಿಸಿದರು. ಇಳಿಜಾರಲ್ಲಿ ಘಟನೆ ನಡೆದಿದ್ದು, ಆಗ ನೂಕುನುಗ್ಗಲು ಉಂಟಾಯ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಅಲ್ಲಿ ಸೇರಿದ ಜನರು ಬಾಬಾ ಸಾಗಿ ಹೋದ ಸ್ಥಳದ ಪಾದದ ಧೂಳನ್ನು ಸಂಗ್ರಹಿಸಲು ಮುಂದಾದಾಗ ಅವರನ್ನು ತಳ್ಳಲು ಭದ್ರತಾ ಸಿಬ್ಬಂದಿ ಯತ್ನಿಸಿದರು. ಇಳಿಜಾರಲ್ಲಿ ಘಟನೆ ನಡೆದಿದ್ದು, ಆಗ ನೂಕುನುಗ್ಗಲು ಉಂಟಾಯ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಫ್ಐಆರ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ‘ಮುಖ್ಯ ಸೇವಾದಾರ’ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಹೆಸರಿಸಲಾಗಿದ್ದು ಇವರ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಆಪರಾಧಿಕ ನರಹತ್ಯೆ), 110 (ಆಪರಾಧಿಕ ನರಹತ್ಯೆಗೆ ಯತ್ನ), 238 (ಸಾಕ್ಷ್ಯ ನಾಶ) ಕೇಸು ದಾಖಲಿಸಲಾಗಿದೆ. ಈ ನಡುವೆ, ಬಾಬಾ ಅವರ ಮೈನ್‌ಪುರಿ ಸಮೀಪದ ಬಿಚ್ವಾನ್ ಗ್ರಾಮದ ಆಶ್ರಮದ ಸುತ್ತ ಪೊಲೀಸ್ ಭದ್ರತೆ ಹಾಕಲಾಗಿದೆ. ಬಾಬಾ ಆಶ್ರಮದಲ್ಲೇ ಇದ್ದಾರೆ ಎಂದು ಕೆಲವು ಪೊಲೀಸರು ಹೇಳಿದ್ದರೆ, ಕೆಲವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಕೀಲ ವಿಶಾಲ್ ತಿವಾರಿ ಅವರು ಸೂಕ್ತ ತನಿಖೆ ನಡೆಸಲು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐದು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಘಟನೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಮತ್ತು ಅಧಿಕಾರಿಗಳು ಮತ್ತು ಇತರರ ನಿರ್ಲಕ್ಷ್ಯದ ನಡವಳಿಕೆಗಾಗಿ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಕಾಲ್ತುಳಿತದಿಂದ ನರಳುತ್ತಿರುವ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲ್ಯಭ್ಯಗಳ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.