ಬಾಗಿನದಲ್ಲಿ ಕಪ್ಪು ಬಳೆಯನ್ನು ಇಡುವುದರ ಹಿಂದಿನ ವೈಜ್ಞಾನಿಕ ಕಾರಣ ಮತ್ತು ಮಹತ್ವ
ಪ್ರಜ್ವಲಾ ಶೆಣೈ ಕಾರ್ಕಳ

ಸ್ವರ್ಣ ಗೌರಿ ಹಬ್ಬದ ವೈಶಿಷ್ಟ್ಯತೆ
ಸರ್ವ ಸಂಕಟ ಹರಿತ್ರಿ ತ್ವಂ
ಧನೈಶ್ವರ್ಯ ಪ್ರದಾಯಿನಿಂ
ಜ್ಞಾನದಾ ಚತುರ್ವೇದಮಯಿ
ಮಹಾಗೌರಿ ಪ್ರಣಮಾಮ್ಯಹಮ್
ಪಾರ್ವತಿ ದೇವಿಯ ಮತ್ತೊಂದು ಅವತಾರವಾದ ಗೌರಿಯು ಸರ್ವ ಸಂಕಟಗಳನ್ನು ನಿವಾರಿಸುವವಳು, ಧನ ಐಶ್ವರ್ಯ ನೀಡುವವಳು ,ಜ್ಞಾನದ ಸ್ವರೂಪಿಣಿ ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಇದೆ.
ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಪ್ರಧಾನ್ಯತೆ ಇದೆ.ಪ್ರತಿ ಹಬ್ಬಕ್ಕೂ ತನ್ನದೇ ಆದ ಮಹತ್ವ ಹಾಗೂ ಹಿನ್ನೆಲೆ ಇದೆ.ಧಾರ್ಮಿಕ ನಂಬಿಕೆಯ ಪ್ರಕಾರ ಗೌರಿಯು ಭಾದ್ರಪದ ಮಾಸದ 3 ನೇ ದಿನ ಅಂದರೆ ಗಣೇಶ ಚತುರ್ಥಿಯ ಹಿಂದಿನ ದಿನ ಕೈಲಾಸದಿಂದ ತನ್ನ ತವರಾದ ಭೂಮಿಗೆ ಬರುತ್ತಾಳೆ.ಈ ಹಬ್ಬವನ್ನು ಸ್ವರ್ಣ ಗೌರಿ ಹಬ್ಬ,ಗೌರಿ ತೃತೀಯ ಎಂದೂ ಕರೆಯುತ್ತಾರೆ.ತವರಿಗೆ ಬಂದ ಗೌರಿಗೆ
ಮುತ್ತೈದೆಯರೆಲ್ಲಾ ಸೇರಿ ಬಾಗಿನ ನೀಡುತ್ತಾರೆ.ಅರಿಶಿನ ,ಕುಂಕುಮ,ಕರಿಮಣಿ ಪೋಣಿಸಿದ ದಾರ,ಬಾಚಣಿಗೆ,ಕನ್ನಡಿ,ರವಿಕೆ ವಸ್ತ್ರ,ತೆಂಗಿನಕಾಯಿ, ಕಪ್ಪುಬಳೆ, ಧಾನ್ಯ,ಅಕ್ಕಿ ಕೊಬ್ಬರಿ ಮತ್ತು ಬೆಲ್ಲವನ್ನು ಮಡಿಲು ತುಂಬಿ ಬಾಗಿನ ನೀಡಲಾಗುತ್ತದೆ.ವೃತದ ಭಾಗವಾಗಿ ಕನಿಷ್ಟ ಐದು ಬಾಗಿನಗಳನ್ನು ತಯಾರಿಸಲಾಗುತ್ತದೆ.ಒಂದನ್ನು ಗೌರಿಗೆ ಅರ್ಪಿಸಿ ಉಳಿದ ನಾಲ್ಕು ಬಾಗಿನವನ್ನು ಮುತ್ತೈದೆಯರಿಗೆ ಕೊಡುವ ವಿಶಿಷ್ಟ ಸಂಪ್ರದಾಯವಿದೆ. ಇನ್ನು ಕೆಲವೆಡೆ ತಮ್ಮ ಜೀವನಾಡಿಯಾಗಿರುವ ನದಿ ಕೆರೆಗಳಿಗೆ, ಪೂಜೆ ಸಲ್ಲಿಸಿ ಗಂಗಾಮಾತೆಗೆ ಬಾಗಿನ ಅರ್ಪಿಸುವ ಪದ್ಧತಿ ಇದೆ.
ಆಚರಣೆಯ ಹಿಂದಿರುವ ವೈಜ್ಞಾನಿಕತೆ ಮತ್ತು ಮಹತ್ವ
ಬಾಗಿನದಲ್ಲಿ ಕಪ್ಪು ಬಳೆಯನ್ನು ಇಡುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.ಕಪ್ಪು ಬಣ್ಣವನ್ನು ಶುಭ ಸಮಾರಂಭದಲ್ಲಿ ಬಳಸಲಾಗುವುದಿಲ್ಲ.ಆದರೆ ಕಪ್ಪು ಕೆಟ್ಟದ್ದಲ್ಲ ಎನ್ನುತ್ತದೆ ಶಾಸ್ತ್ರ. ಕಪ್ಪು ಬಣ್ಣವು ಸ್ವತಃ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ.ಋಣಾತ್ಮಕ ಶಕ್ತಿಯನ್ನು ನಾಶ ಪಡಿಸುವ ಉದ್ದೇಶದಿಂದ ಕಪ್ಪು ಬಳೆಯನ್ನು ಧರಿಸಲಾಗುತ್ತದೆ.
ಗೌರಿ ಪೂಜೆ ಮಾಡುವುದರಿಂದ ವಿವಾಹಿತರಿಗೆ ಮಾಂಗಲ್ಯ ಭಾಗ್ಯ ಗಟ್ಟಿಗೊಳ್ಳುತ್ತದೆ.ಧನ ಐಶ್ವರ್ಯ ಪ್ರಾಪ್ತವಾಗುತ್ತದೆ.ಜ್ಞಾನಾಭಿವೃದ್ಧಿ ಯಾಗುತ್ತದೆ ಎನ್ನುವ ನಂಬಿಕೆ ಇದೆ.ಸ್ವರ್ಣ ಗೌರಿ ವೃತವನ್ನು ಆಚರಿಸುವ ಮನೆಯಲ್ಲಿ ಮಾವಿನಎಲೆ, ಬಾಳೆಯಕಾಂಡದಿಂದ ಅಲಂಕೃತವಾದ ಮಂಟಪದಲ್ಲಿ ಗೌರಿ ಪ್ರತಿಮೆಯನ್ನು ಅಕ್ಕಿ ಅಥವಾ ಧಾನ್ಯದಲ್ಲಿ ಇಟ್ಟು ಪೂಜಿಸಲಾಗುತ್ತದೆ.ಕಲಶವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕೆಲವೆಡೆ ತೆಂಗಿನ ಕಾಯಿಯನ್ನು ಅರಿಶಿಣನ
ಲೇಪನದಿಂದ ಅಲಂಕಾರಗೊಳಿಸಿ ಗೌರಿಯನ್ನು ಪೂಜಿಸುವ ವಾಡಿಕೆ ಇದೆ.ಹಬ್ಬದ ದಿನ ಬಾಗಿಲಿಗೆ ಮಾವಿನ ತೋರಣ ಕಟ್ಟಿ ಸಂಭ್ರಮಿಸಲಾಗುತ್ತದೆ.ಮನೆ ಮುಂದೆ ರಂಗೋಲಿ ಹಾಕುವುದು ಶುಭದ ಸಂಕೇತ.ಸುಮಂಗಲಿಯರೆಲ್ಲಾ ಸಾಂಪ್ರದಾಯಿಕ ಉಡುಗೆ ತೊಟ್ಟು ಮನೆಯಲ್ಲಿ ಹಬ್ಬದಡುಗೆ ಮಾಡಿ ನೈವೇದ್ಯವನ್ನು ಗೌರಿಗೆ ಸಮರ್ಪಿಸುತ್ತಾರೆ.
ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ.ಹಾಗಾಗಿ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜಿಸಿದ ವಾಯಿಣ ಅಂದರೆ ತೆಂಗಿನ ಕಾಯಿಯನ್ನು ಸ್ವೀಕರಿಸಿ ಕೃತಾರ್ಥರಾಗುತ್ತಾರೆ.ಸ್ವರ್ಣ ಗೌರಿ ವ್ರತದಿಂದ ಅವಿವಾಹಿತರಿಗೆ ವಿವಾಹ ಯೋಗ,ವಿವಾಹಿತರಿಗೆ ಸಂತಾನ ಪ್ರಾಪ್ತಿ,ವಿದ್ಯಾರ್ಥಿಗಳಿಗೆ ಜ್ಞಾನ ಸಿಗುವುದೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಈ ಹಬ್ಬದ ಇನ್ನೊಂದು ವಿಶೇಷತೆ ಏನೆಂದರೆ ಮದುವೆಯಾದ ಹೆಣ್ಣಿನ ತಂದೆ,ತಾಯಿ,ಅಥವಾ ಸಹೋದರರು ಮನೆ ಮಗಳಿಗೆ ಪೂಜೆಗೆ ಬೇಕಾದ ಮಂಗಳ ದ್ರವ್ಯಗಳನ್ನು ಕೊಡುವರು.ಇದರಿಂದ ಹೆಣ್ಣು ಮಕ್ಕಳಿಗೆ ತವರಿನ ಜೊತೆ ಇರುವ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುತ್ತದೆ.ಎಲ್ಲರೂ ಶ್ರದ್ಧಾ ಭಕ್ತಿಯಿಂದ ಸ್ವರ್ಣ ಗೌರಿ ವೃತವನ್ನು ಆಚರಿಸುತ್ತಾರೆ.
ಪಾರ್ವತಿ ಸ್ವರ್ಣಗೌರಿಯಾದ ಕಥೆ
ಪಾರ್ವತಿ ಸ್ವರ್ಣ ಗೌರಿಯಾಗಿದ್ದು ಹೇಗೆ ಎನ್ನುವುದಕ್ಕೆ ಪೌರಾಣಿಕ ಹಿನ್ನಲೆ ಇದೆ.ಪರ್ವತರಾಜನ ಮಗಳಾದ ಪಾರ್ವತಿಯು ಮದುವೆಯ ವಯಸ್ಸಿಗೆ ಬಂದಾಗ ಆಕೆಗೆ ಮದುವೆ ಮಾಡಲು ವರನನ್ನು ಹುಡುಕುತ್ತಾರೆ.ಆದರೆ ಆಕೆ ತನ್ನ ಪೂರ್ವ ವೃತ್ತಾಂತವನ್ನೆಲ್ಲಾ ಹೇಳಿ ತಾನು ಹಿಂದೆ ಪರಶಿವನ ಪತ್ನಿಯಾಗಿದ್ದೆ.ಹೀಗಾಗಿ ಪರಶಿವನನ್ನು ಬಿಟ್ಟು ಯಾರನ್ನೂ ವಿವಾಹವಾಗಲಾರೆ ಎಂದು ಹಠ ಹಿಡಿದು ಶಿವನನ್ನು ಮೆಚ್ಚಿಸಲು ತಪಸ್ಸಿಗೆ ಹೊರಟಳು. ಎಷ್ಟು ವರ್ಷ ತಪಸ್ಸು ಗೈದರೂ ಶಿವ ಪ್ರತ್ಯಕ್ಷನಾಗಲಿಲ್ಲ. ಶಿವ ತನ್ನನ್ನು ಮೆಚ್ಚದಿರಲು ಕಾರಣ ತನ್ನ ಪೂರ್ವದ ಕಪ್ಪು ಬಣ್ಣದ ಕಾಳಿ ರೂಪ ಕಾರಣವಿರಬಹುದು ಎಂದು ಭಾವಿಸಿ ಸೃಷ್ಟಿಕರ್ತ ಬ್ರಹ್ಮನನ್ನು ಕುರಿತು ತಪಸ್ಸುಗೈದಳು.ಪಾರ್ವತಿಯ ತಪಸ್ಸಿಗೆ ಒಲಿದು ಬ್ರಹ್ಮ ಪ್ರತ್ಯಕ್ಷನಾದನು.ಬ್ರಹ್ಮ ವರ ಕೇಳಿದಾಗ ಪಾರ್ವತಿ ತಾನು ಚಿನ್ನದಂತೆ ಹೊಳೆಯುವ ಹಾಗೆ,ಶಿವ ತನ್ನನ್ನು ಮೆಚ್ಚಿ ಮನಸೋಲುವ ಬಣ್ಣ ನೀಡು ಎಂದು ಕೇಳಿದಳು.ಆಕೆಯ ಇಚ್ಛೆಯಂತೆ ಬ್ರಹ್ಮ ಕಾಳಿರೂಪ ತೆಗೆದು ಸ್ವರ್ಣ ಅಂದರೆ ಚಿನ್ನದಂತೆ ಹೊಳೆಯುವಂತೆ ಮಾಡಿದನು. ಅಂದಿನಿಂದ ಪಾರ್ವತಿ ಸ್ವರ್ಣ ಗೌರಿಯಾದಳು ಎನ್ನುವ ಕಥೆ ಇದೆ.
ಸ್ವರ್ಣ ಗೌರಿ ಆಚರಣೆಯ ವಿಧಾನ
ಸ್ವರ್ಣಗೌರಿ ವೃತದಂದು ಗೌರಿಯನ್ನು ಅಭಿಷೇಕ,ಸ್ನಾನ,ಗಂಧ,ಕುಂಕುಮ ಇತ್ಯಾದಿ
ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ.ಗೌರಿ ದಾರಕ್ಕೆ ಹದಿನಾರು ಗಂಟು ಹಾಕಿ ಪೂಜಿಸಲಾಗುತ್ತದೆ.ಪಾರ್ವತಿ ಶಿವನನ್ನು ಮೆಚ್ಚಿಸಲು ಹದಿನಾರು ವರ್ಷ ತಪಸ್ಸು ಗೈದಳೆಂದೂ ಹಾಗಾಗಿ ಹದಿನಾರು ಗಂಟು ಹಾಗೂ 16 ಬಗೆಯ ಉಪಚಾರ ಮಾಡುವರೆಂದೂ ಪುರಾಣಗಳಲ್ಲಿ ಉಲ್ಲೇಖವಿದೆ.
“ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೆ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ” ಎನ್ನುವ ಮಂತ್ರವನ್ನು 108 ಬಾರಿ ಪಠಿಸುತ್ತಾ ಸುಮಂಗಲಿಯರು ಗೌರಿಯನ್ನು ಪೂಜಿಸುತ್ತಾರೆ.ಗೌರಿ ತನ್ನ ತವರಿಗೆ ಬಂದು ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗುತ್ತಾಳೆ.ಮರುದಿನ ಭಾದ್ರಪದ ಚೌತಿ ಯಂದು ಗಣೇಶ ತನ್ನ ಅಜ್ಜಿಯ ಮನೆಗೆ ಬಂದು ಲಾಡು ,ಚಕ್ಕುಲಿ,ಮೋದಕ, ಇತ್ಯಾದಿ ಭಕ್ಷ್ಯ ಗಳನ್ನು ಉಂಡು ಸಂತೃಪ್ತ ಗೊಂಡು ತಾಯಿ ಗೌರಿಯನ್ನು ಮತ್ತೆ ಕೈಲಾಸಕ್ಕೆ ಕರೆದು ಕೊಂಡು ಹೋಗುತ್ತಾನೆ ಎನ್ನುವ ಪ್ರತೀತಿ ಇದೆ. ಸಕಲ ಸೌಭಾಗ್ಯಗಳನ್ನು ಕರುಣಿಸುವ ಗೌರಿ ಗಣೇಶ ಹಬ್ಬ ಸರ್ವರಿಗೂ ಒಳಿತನ್ನು ಮಾಡಲಿ.ಸರ್ವೇ ಜನಾಃ ಸುಖಿನೋ ಭವಂತು.
ಪ್ರಜ್ವಲಾ ಶೆಣೈಕಾರ್ಕಳ













