
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “139 ಶಾಸಕರೂ ಒಂದೇ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ” ಎಂದು ಮರು ಪ್ರಶ್ನಿಸಿದರು.
“ನಾವು ಎಲ್ಲರೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಕೆಲಸ ಮಾಡುತ್ತಿದ್ದೇವೆ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ, ಒಂದಾಗಿ ಹೋರಾಟ ಮಾಡುತ್ತೇವೆ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜೊತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ ಡಿಕೆ ಶಿವಕುಮಾರ್, “ಇಂದು ಅವರ ಜನ್ಮದಿನವಾಗಿದ್ದು, ಶುಭಾಶಯಗಳನ್ನು ತಿಳಿಸಿದ್ದೇನೆ” ಎಂದರು.






























































































































