
ಬೆಳಗಾವಿ: ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನಿಂದಿಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದು ಸದ್ಯ ಈ ಘಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಹೀಗಾಗಿ ಕೇಸರಿ ಪಡೆ ಬಿಜೆಪಿಯು ಸಿ.ಟಿ ರವಿ ಬಂಧನ ಖಂಡಿಸಿ ಇಂದು ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರು ಸ್ಥಳದಲ್ಲಿ ಭದ್ರತೆ ಒದಗಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಗಸ್ತು ತಿರುಗುತ್ತಿದ್ದು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ 6 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿರುವ ಆರ್. ಅಶೋಕ್, ರಾಜ್ಯವನ್ನು ಕಾಂಗ್ರೆಸ್‌ನವರು ಮಿನಿ ಪಾಕಿಸ್ತಾನ ಮಾಡಿದ್ದಾರೆ, ಸಿಟಿ ರವಿ ಜನಪ್ರತಿನಿಧಿಯೆಂಬುದನ್ನು ಮರೆತು ಹಣೆಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ನಮ್ಮ ಸರ್ಕಾರ ಬಂದ ಬಳಿಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.