
ಮುಂಬೈ: ಇಂದು ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದು ಆದರೆ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಾಣುತ್ತಿದೆ. ಸೆನ್ಸೆಕ್ಸ್ 1600 ಪಾಯಿಂಟ್ಸ್ ಮತ್ತು ನಿಫ್ಟಿ 500 ಪಾಯಿಂಟ್ಸ್ ಕುಸಿತ ಕಂಡಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ತೀವ್ರ ಆತಂಕದ ವಾತಾವರಣವನ್ನು ಸೃಷ್ಟಿಸುತ್ತದೆ.
ಬ್ಯಾಂಕ್ ನಿಫ್ಟಿಯಲ್ಲಿ 1500 ಅಂಕಗಳ ದೊಡ್ಡ ಕುಸಿತ ಕಂಡು ಬಂದಿದ್ದು, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಕುಸಿತವು ಅಧಿಕವಾಗುತ್ತಿದೆ. ನಿಫ್ಟಿ, ಬ್ಯಾಂಕ್ ನಿಫ್ಟಿಯಲ್ಲಿ ಸುಮಾರು ಶೇ.3ರಷ್ಟು ಕುಸಿತ ಕಂಡಿದೆ. ಅದಾನಿ ಸಮೂಹದ ಎಲ್ಲಾ ಕಂಪನಿಗಳ ಷೇರುಗಳಲ್ಲಿ ಕುಸಿತವಾಗಿದೆ. ಅದಾನಿ ಪೋರ್ಟ್ಸ್ ಶೇರುಗಳಲ್ಲಿ ಶೇ.9, ಅದಾನಿ ಪವರ್ ಶೇ.10, ಅಂಬುಜಾ ಸಿಮೆಂಟ್ ಶೇ.10, ಅದಾನಿ ಎಂಟರ್ ಪ್ರೈಸಸ್ ಶೇ.10 ಕುಸಿತ ಕಾಣುತ್ತಿದೆ.
ಚುನಾವಣೋತ್ತರ ಸಮೀಕ್ಷಾ ವರದಿಗಳು ಬಾಂಬೆ ಷೇರುಪೇಟೆಗೆ ಭರ್ಜರಿ ಕಿಕ್ ನೀಡಿತ್ತು. ‘ಮೋದಿ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲಿದೆ’ ಎಂಬ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ ಸೋಮವಾರ 2507 ಅಂಕಗಳ ಭಾರೀ ಏರಿಕೆ ಕಂಡು ದಾಖಲೆಯ 76468 ಅಂಕಗಳಲ್ಲಿ ಮುಕ್ತಾಯವಾಗಿತ್ತು. ಇದು 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಂಡುಬಂದ ಸೆನ್ಸೆಕ್ಸ್‌ನ ಗರಿಷ್ಠ ದೈನಂದಿನ ಏರಿಕೆಯಾಗಿತ್ತು. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 13.78 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ.