
ಲಾತೂರ್: ನೀಟ್ ಪರೀಕ್ಷೆ ರದ್ದಾದ ಪರಿಣಾಮ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೊಂಡೆಗಾಂವ್ ಗ್ರಾಮದ ಮೈಥಿಲಿ ಅಶೋಕ್ ಸೋನ್ವಾಲೆ ಮೇ 16ರಂದು ತಮ್ಮ ತೋಟದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ.
ಮೈಥಿಲಿ ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆ ಚೆನ್ನಾಗಿ ಬರೆದಿದ್ದಳು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾದ ಬಳಿಕ ಆಕೆ ಭವಿಷ್ಯದ ಬಗ್ಗೆ ಆತಂಕ ಮತ್ತು ನಿರಾಸೆಗೆ ಒಳಗಾಗಿದ್ದಳು ಎಂದು ತಂದೆ ಅಶೋಕ್ ವಿಠ್ಠಲ್ ಸೋನ್ವಾಲೆ ತಿಳಿಸಿದ್ದಾರೆ.
ವೈದ್ಯೆಯಾಗುವ ಕನಸು ಹೊಂದಿದ್ದ ಮೈಥಿಲಿ, ಮರುಪರೀಕ್ಷೆಯ ಅನಿಶ್ಚಿತತೆಯಿಂದ ತೀವ್ರ ಒತ್ತಡ ಅನುಭವಿಸುತ್ತಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ.
ನೀಟ್ ಪರೀಕ್ಷೆಯನ್ನು ಮೇ 12ರಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ರದ್ದುಗೊಳಿಸಿತ್ತು. ದೇಶಾದ್ಯಂತ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಜೂನ್ 21ರಂದು ಮರುಪರೀಕ್ಷೆ ನಡೆಸಲು ನಿಗದಿಯಾಗಿದೆ.




























