
ಹರಿಹರ: ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಆಗಾಗ ಚರ್ಚೆಗೆ ಗ್ರಾಸವಾಗುವ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಅವರು ಶ್ರೀರಾಮನ ಕುರಿತು ಮತ್ತೊಮ್ಮೆ ವಿವಾದ ಹುಟ್ಟುಹಾಕುವಂತಹ ಹೇಳಿಕೆ ನೀಡಿದ್ದಾರೆ. “ಶ್ರೀರಾಮನು ದಶರಥನ ಪುತ್ರನಲ್ಲ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಮಂಗಳವಾರ ನಡೆದ ದಿ| ಪ್ರೊ. ಬಿ. ಕೃಷ್ಣಪ್ಪ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, “ಜನರು ಪೂಜಿಸುವ ಶ್ರೀರಾಮನು ದಶರಥನಿಗೆ ಜನಿಸಿದವನಲ್ಲ” ಎಂದು ಹೇಳಿದರು. ಈ ಕುರಿತಾಗಿ ತಾವು ಬರೆದಿರುವ ‘ರಾಮ ಮಂದಿರ ಏಕೆ ಬೇಕು?’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದು, ವಾಲ್ಮೀಕಿ ರಾಮಾಯಣದಲ್ಲಿಯೂ ಇದಕ್ಕೆ ಸಂಬಂಧಿಸಿದ ಉಲ್ಲೇಖಗಳಿವೆ ಎಂದು ಅವರು ಪ್ರತಿಪಾದಿಸಿದರು.
ಮುಂದುವರಿದು ಮಾತನಾಡಿದ ಅವರು, ಶೂದ್ರನಾದ ಶಂಬೂಕ, ಪತ್ನಿ ಸೀತೆಯ ಹಾಗೂ ಸಹೋದರ ಲಕ್ಷ್ಮಣನನ್ನೇ ಸಾಯಿಸಿದ್ದಾನೆ. ಇಂತಹ ವ್ಯಕ್ತಿಯನ್ನು ಸಮಾಜ ಆದರ್ಶವಾಗಿ ಪರಿಗಣಿಸಬೇಕೇ? ಎಂದು ಪ್ರಶ್ನಿಸಿದರು. ಜನರು ಪಂಚಾಂಗ ಮತ್ತು ಮೂಢನಂಬಿಕೆಗಳಿಗಿಂತ ತಮ್ಮ ಸ್ವಂತ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸದ ಮೇಲೆ ನಂಬಿಕೆ ಇಡಬೇಕು ಎಂದು ಕರೆ ನೀಡಿದರು.

































