
ನವದೆಹಲಿ: ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅಥವಾ ಬಡಿಸಲು ಪತ್ರಿಕೆಗಳನ್ನು ಬಳಸಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪತ್ರಿಕೆ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ಹಾನಿಕಾರಕ ರಾಸಾಯನಿಕಗಳಿರುವುದರಿಂದ ಅವು ಆಹಾರಕ್ಕೆ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪ್ರಾಧಿಕಾರ ತಿಳಿಸಿದೆ.
ಇತ್ತೀಚೆಗೆ ಮುಂಬೈನಲ್ಲಿ ಆಹಾರವನ್ನು ಪತ್ರಿಕೆಯಲ್ಲಿ ಸುತ್ತಿ ನೀಡಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹಾಗೂ ಬಿಎಂಸಿ ಜಂಟಿಯಾಗಿ ಕ್ರಮ ಕೈಗೊಂಡು ಈ ಸಲಹೆ ಹೊರಡಿಸಿವೆ.
ಪತ್ರಿಕೆಗಳು ಅಸ್ವಚ್ಛ ಪರಿಸರದಲ್ಲಿ ಸಂಗ್ರಹವಾಗಿರುವ ಕಾರಣ ಆಹಾರ ಕಲುಷಿತಗೊಳ್ಳುವ ಅಪಾಯ ಹೆಚ್ಚಿದ್ದು, ಆಹಾರದಿಂದ ಹರಡುವ ಕಾಯಿಲೆಗಳಿಗೂ ಇದು ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಾವಳಿ-2018ರ ಪ್ರಕಾರ, ಪತ್ರಿಕೆ ಅಥವಾ ಅನುಮೋದನೆ ಪಡೆಯದ ವಸ್ತುಗಳಲ್ಲಿ ಆಹಾರ ಸಂಗ್ರಹಿಸುವುದು, ಸುತ್ತುವುದು ಹಾಗೂ ಬಡಿಸುವುದು ನಿಷೇಧವಾಗಿದೆ.
ಬೀದಿ ಬದಿ ವ್ಯಾಪಾರಿಗಳು, ಹೋಟೆಲ್‌ಗಳು, ಕ್ಲೌಡ್ ಕಿಚನ್‌ಗಳು ಹಾಗೂ ಕ್ಯಾಟರಿಂಗ್ ಸಂಸ್ಥೆಗಳು ಆಹಾರ ದರ್ಜೆಯ ಅನುಮೋದಿತ ಪ್ಯಾಕೇಜಿಂಗ್ ವಸ್ತುಗಳನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.

































